ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲ - ವಿಜಯೇಂದ್ರ ಆರೋಪ

KannadaprabhaNewsNetwork |  
Published : Jul 01, 2026, 02:00 AM IST
ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಾಯಾಳುಗಳ ಪಾಲಕರಿಗೆ ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ಹಿಂದೂಗಳು ತಮ್ಮ ಹಬ್ಬಗಳನ್ನು ಆಚರಿಸಲು ಅನ್ಯ ಮತೀಯರಿಂದ ಅನಗತ್ಯವಾಗಿ ಅಡ್ಡಿ-ಆತಂಕಗಳು ಎದುರಾಗುತ್ತಿವೆ. ಮಾರಣಾಂತಿಕ ಹಲ್ಲೆಗಳೂ ನಡೆಯುತ್ತಿದ್ದರೂ ಸರ್ಕಾರ ಇವೆಲ್ಲವನ್ನೂ ಮಟ್ಟ ಹಾಕಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಹಾನಗಲ್ಲ: ಹಿಂದೂಗಳು ತಮ್ಮ ಹಬ್ಬಗಳನ್ನು ಆಚರಿಸಲು ಅನ್ಯ ಮತೀಯರಿಂದ ಅನಗತ್ಯವಾಗಿ ಅಡ್ಡಿ-ಆತಂಕಗಳು ಎದುರಾಗುತ್ತಿವೆ. ಮಾರಣಾಂತಿಕ ಹಲ್ಲೆಗಳೂ ನಡೆಯುತ್ತಿದ್ದರೂ ಸರ್ಕಾರ ಇವೆಲ್ಲವನ್ನೂ ಮಟ್ಟ ಹಾಕಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಸೋಮವಾರ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಗಾಯಾಳುಗಳ ಪಾಲಕರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಒಂದು ಸಮುದಾಯವನ್ನು ಓಲೈಸಲು ತುಷ್ಟೀಕರಣ ನೀತಿ ಅನುಸರಿಸುತ್ತಿರುವುದರಿಂದಾಗಿ ರಾಜ್ಯದೆಲ್ಲೆಡೆಗೂ ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಪೊಲೀಸ್ ಇಲಾಖೆ ಕೂಡಲೇ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಜನರು ಬೀದಿಗಿಳಿದು ಕಾನೂನು ಕೈಗೆತ್ತಿಕೊಳ್ಳುವ ಸಂದರ್ಭಗಳು ಎದುರಾಗುತ್ತವೆ. ಹಿಂದೂಗಳು ಶಾಂತಿಯುತವಾಗಿ ತಮ್ಮ ಹಬ್ಬಗಳನ್ನಾಚರಿಸಲು ಸ್ವಾತಂತ್ರ್ಯವಿಲ್ಲದಂತಾಗಿದೆ. ಆಡಳಿತ ಪಕ್ಷದ ದಬ್ಬಾಳಿಕೆಗೆ ಹಿಂದೂಗಳು ತುತ್ತಾಗುತ್ತಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ ಗೂಂಡಾಗಿರಿ ಮಾಡುವವರನ್ನು ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಕುರುಬ ಸಮಾಜದ ಹತ್ತಾರು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಬದಲಾಗಿ ಗಾಯಾಳುಗಳ ಮೇಲೆಯೇ ಪ್ರತಿ ದೂರು ದಾಖಲಿಸುವ ಕೆಲಸ ನಡೆಯುತ್ತಿದೆ. ಹಿಂದೂಗಳನ್ನು ಭಯಪಡಿಸುವ ಘಟನೆಗಳು ನಡೆಯುತ್ತಿವೆ. ಹಾವೇರಿ ಜಿಲ್ಲೆಯಲ್ಲಿ ಇಡೀ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ಅನಗತ್ಯವಾಗಿ ದೂರು ದಾಖಲಿಸುತ್ತಿದ್ದಾರೆ. ಗೋ-ರಕ್ಷಕರ ಮೇಲೂ ಕೂಡ ದೂರು ದಾಖಲಿಸುತ್ತಿರುವುದಲ್ಲದೇ ರೌಡಿ ಶೀಟರ್ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಹಿಂದೂಗಳನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿರುವುದು ಖೇದಕರ ಸಂಗತಿ. ಕೇವಲ ಒಂದೇ ಸಮುದಾಯದವರು ಮತ ಹಾಕಿ ಸರ್ಕಾರವನ್ನು ಬೆಂಬಲಿಸಿಲ್ಲ. ಎಲ್ಲ ಸಮುದಾಯಗಳೂ ಮತ ಹಾಕಿರುತ್ತವೆ ಎಂಬುದನ್ನು ಕಾಂಗ್ರೆಸ್ ಸರ್ಕಾರ ಮರೆಯಬಾರದು. ಕುರುಬ ಸಮುದಾಯದ ಜನರನ್ನು ಮಾರಣಾಂತಿಕವಾಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದ್ದರೂ ಸ್ಥಳೀಯ ಶಾಸಕರು ಇತ್ತ ಹಾಯ್ದಿಲ್ಲ. ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಮುಂದೆ ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಶಾಸಕರು ಮತ್ತು ಪೊಲೀಸ್ ಇಲಾಖೆ ಕಾರಣವಾಗುತ್ತದೆ. ನರೇಗಲ್‌ನಲ್ಲಿ ನಡೆಯುತ್ತಿರುವ ಘಟನೆ ಇದೇ ಮೊದಲಲ್ಲ. ಹಲವು ಬಾರಿ ನಡೆದಿದೆ. ಈಗಲೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಜನರು ಬೀದಿಗಿಳಿದು ತಮ್ಮ ರಕ್ಷಣೆಗೆ ಮುಂದಾಗುವ ಸಂದರ್ಭ ಬರಬಹುದು. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅನ್ಯಾಯಕ್ಕೊಳಗಾದವರಿಗೆ ಸೂಕ್ತ ನ್ಯಾಯವೊದಗಿಸಬೇಕು. ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಮುಂದುವರೆಸಿದರೆ ಸಾರ್ವಜನಿಕರೇ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಬೇಕಾಗುತ್ತದೆ. ಎಲ್ಲ ಸಮುದಾಯದವರೂ ಸಹೋದರತ್ವ ಭಾವನೆಯಿಂದ ಬದುಕಬೇಕು. ಆದರೆ ಈಗ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ವರ್ತಿಸುತ್ತಿವೆ. ಇದರ ಪರಿಣಾಮವಾಗಿ ನರೇಗಲ್ ಘಟನೆ ಸಾಕ್ಷಿಯಾಗಿದೆ. ಶಾಸಕರು ಕೇವಲ ಒಂದೇ ಸಮುದಾಯದವರನ್ನು ಓಲೈಕೆ ಮಾಡುವುದನ್ನು ಬಿಟ್ಟು ಇತರ ಎಲ್ಲ ಸಮುದಾಯ ಬಾಂಧವರನ್ನು ಸಮಾನವಾಗಿ ಕಾಣಲಿ ಎಂದು ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಬಿಜೆಪಿ ಮುಖಂಡರಾದ ಭರತ್ ಬೊಮ್ಮಾಯಿ, ಶರಣು ತಳ್ಳಿಕೇರಿ, ಭೋಜರಾಜ ಕರೂದಿ, ಸಿದ್ದರಾಜ ಕಲಕೋಟಿ, ಮಹೇಶ ಕಮಡೊಳ್ಳಿ, ಸತೀಶ ಕುರುಬರ, ಮಾಲತೇಶ ಸೊಪ್ಪಿನ, ಸಿದ್ದಲಿಂಗಪ್ಪ ಕಮಡೊಳ್ಳಿ, ನಾಗರಾಜ ಉದಾಸಿ, ಕಲ್ಯಾಣಕುಮಾರ ಶೆಟ್ಟರ, ಮಲ್ಲಿಕಾರ್ಜುನ ಅಗಡಿ, ಶೋಭಾ ನಿಸ್ಸೀಮಗೌಡ್ರ, ಮನೋಜ ದೇಸಾಯಿ, ಚಂದ್ರಣ್ಣ ಹರಿಜನ, ಈರಣ್ಣ ನಿಂಬಣ್ಣನವರ, ಬಸವರಾಜ ಹಾದಿಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೌರ್ಜನ್ಯ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್