ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಸೌಲಭ್ಯ ನೀಡಲು ಸರ್ಕಾರ ವಿಫಲ

KannadaprabhaNewsNetwork | Published : Aug 4, 2024 1:18 AM

ಸಾರಾಂಶ

ಆಶಾ ಕಾರ್ಯಕರ್ತೆಯರು ಸಮಾಜದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜದ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಎಐಯುಟಿಯುಸಿ ಕಾರ್ಯದರ್ಶಿ ಎಂ. ಉಮಾದೇವಿ ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಮೈಸೂರು ನಗರ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ವತಿಯಿಂದ ನಗರದಲ್ಲಿ ನಡೆದ ಮೈಸೂರು ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಸಮಾಜದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸರ್ಕಾರ ನೀಡುವ ಗೌರವ ಧನ ಯಾವುದಕ್ಕೂ ಸಾಲುತ್ತಿಲ್ಲ. ಆದರೂ ಸೇವಾ ಮನೋಭಾವದಿಂದ ಜನರ ಆರೋಗ್ಯ ಕಾಪಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ. ಅವರಿಗೆ ಸಿಗಬೇಕಾದ ಸವಲತ್ತು ನೀಡುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಅವರು ಕಿಡಿಕಾರಿದರು.

ಶಿಶು ಹಾಗೂ ತಾಯಿ ಮರಣ ಸಂಖ್ಯೆ ಇಳಿಮುಖವಾಗಲು ಪರಿಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ, ಸರ್ಕಾರಿ ನೌಕರರೆಂದು ಪರಿಗಣಿಸಿ ಶಾಸನಬದ್ಧ ಸೌಲಭ್ಯ ಒದಗಿಸಬೇಕು. 2008 ರಿಂದಲೂ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಕೊರೋನಾ ವೇಳೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರನ್ನು ವಿಶ್ವ ಆರೋಗ್ಯ ಸಂಸ್ಥೆ ‘ಜಾಗತಿಕ ಆರೋಗ್ಯ ನಾಯಕರು ಎಂದು ಬಣ್ಣಿಸುವ ಮೂಲಕ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸಿದೆ ಎಂದರು.

ಇನ್ನಾದರೂ ಸರ್ಕಾರಗಳು ಆಶಾ ಕಾರ್ಯಕರ್ತೆಯರ ಹಿತ ಕಾಯಲು ಮುಂದಾಗಬೇಕು. ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಶಾಸನಬದ್ದ ಸೌಲಭ್ಯ ಒದಗಿಸಬೇಕು. ಸಾಮಾಜಿಕ ಭದ್ರತೆ ಖಾತ್ರಿ ಪಡಿಸಬೇಕು. ಸಾರ್ವಜನಿಕ ಆರೋಗ್ಯ ಬಲಪಡಿಸಲು ಅಗತ್ಯವಿರುವಷ್ಟು ಅನುದಾನ ಒದಗಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಆಶಾಗಳಿಗೆ ಮಾಸಿಕ 15 ಸಾವಿರ ರೂ. ಪ್ರೋತ್ಸಾಹ ಧನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನಗರ ಸಲಹೆಗಾರ್ತಿ ಸೀಮಾ ಮಾತನಾಡಿ, ನಮ್ಮ ಸಂಘ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದ ಹಿನ್ನೆಲೆಯಲ್ಲಿ ಇಂದು ಆಶಾ ಕಾರ್ಯಕರ್ತೆಯರಿಗೆ ಸಮವಸ್ತ್ರ ನೀತಿ ಜಾರಿಗೊಳಿಸಲಾಗಿದೆ. ನಿಗದಿತ ವೇತನ ನೀಡುವಂತೆ ಹೋರಾಟ ಮಾಡಲಾಗುತ್ತಿದೆ. ಅಲ್ಲಿವರೆಗೂ ರಾಜ್ಯ ಸರ್ಕಾರ ನೀಡುವ ಗೌರವ ಧನದೊಂದಿಗೆ ಕೇಂದ್ರ ಸರ್ಕಾರವೂ ಮ್ಯಾಚಿಂಗ್ ಗ್ರಾಂಟ್ ನೀಡಿ ಮಾಸಿಕ 15 ಸಾವಿರ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ ಎಂದರು.

ಸಂಘದ ರಾಜ್ಯ ಖಜಾಂಜಿ ಪಿ.ಎಸ್. ಸಂಧ್ಯಾ ಮಾತನಾಡಿ, ಆಸ್ಪತ್ರೆಗಳಲ್ಲಿ ಬಿಳಿ ಹಾಗೂ ನೀಲಿ ಬಣ್ಣದ ಬಟ್ಟೆ ತೊಟ್ಟು ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತೆಯರಿಗೆ ತಿಂಗಳಿಗೆ 40 ಸಾವಿರಕ್ಕಿಂತ ಹೆಚ್ಚು ವೇತನ ನೀಡಲಾಗುತ್ತಿದೆ. ಆದರೆ, ಅವರಷ್ಟೇ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಕಡಿಮೆ ಮೊತ್ತದ ಗೌರವ ಧನ ನೀಡಲಾಗುತ್ತಿದೆ ಎಂದರು.

ಸಮ್ಮೇಳನದಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನ (ಎಐಯುಟಿಯುಸಿ) ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ನಗರ ಆಶಾ ಕಾರ್ಯಕರ್ತೆಯರ ಸಂಘದ ಶೋಭಾ, ಸುನೀತಾ, ಕೋಮಲಾ ಇದ್ದರು.

Share this article