ಹಾಲಿನ ಪ್ರೋತ್ಸಾಹಧನ ಪಾವತಿಸುವಲ್ಲಿ ಸರ್ಕಾರ ವಿಫಲ: ಎಸ್.ಸಚ್ಚಿದಾನಂದ

KannadaprabhaNewsNetwork |  
Published : Dec 04, 2024, 12:34 AM IST
3ಕೆಎಂಎನ್ ಡಿ32 | Kannada Prabha

ಸಾರಾಂಶ

ಹಾಲು ಉತ್ಪಾದನೆಯಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಪ್ರಮುಖವಾಗಿ ಅವಲಂಬಿಸಿದ್ದು, ಇದರಿಂದ ಅತಿ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದೆ. ಮನ್ಮುಲ್ ಗೆ ಹಾಲಿನ ಹೊಳೆ ಹರಿಯುತ್ತಿದೆ. ಆದರೆ, ಐದಾರು ತಿಂಗಳಿಂದಲೂ ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹಧನ ಪಾವತಿಯಾಗಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಾಲು ಒಕ್ಕೂಟಗಳಿಗೆ ಹಾಲು ಪೂರೈಸಿದ ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹಧನ ಪಾವತಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದು ಸರ್ಕಾರದ ಬೊಕ್ಕಸ ಖಾಲಿಯಾಗಿರುವುದಕ್ಕೆ ಸಾಕ್ಷಿ ಎಂದು ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಇಂಡುವಾಳು ಅವರು ಟೀಕಿಸಿದ್ದಾರೆ.

ರೈತರು ಪೂರೈಸುವ ಹಾಲಿಗೆ ಪ್ರೋತ್ಸಾಹ ಧನ ನೀಡಲು ಆರಂಭಿಸಿದ್ದೇ ಬಿಜೆಪಿ ಸರ್ಕಾರ. ಇದು ಬಿಜೆಪಿ ಕಾರ್ಯಕ್ರಮ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರವು ರೈತರಿಗೆ ಹಾಲಿನ ಪ್ರೋತ್ಸಾಹ ಧನ ಪಾವತಿಸುವಲ್ಲೂ ರಾಜಕೀಯ ಮಾಡುತ್ತಿದೆ. ಎಲ್ಲಾ ಹಣವನ್ನು ಗ್ಯಾರೆಂಟಿಗಳಿಗೆ ವಿನಿಯೋಗಿಸಿ ರೈತರಿಗೆ ಹಣ ಕೊಡಲು ಮೀನಾ ಮೇಷ ಎಣಿಸುತ್ತಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಹಾಲು ಉತ್ಪಾದನೆಯಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಪ್ರಮುಖವಾಗಿ ಅವಲಂಬಿಸಿದ್ದು, ಇದರಿಂದ ಅತಿ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದೆ. ಮನ್ಮುಲ್ ಗೆ ಹಾಲಿನ ಹೊಳೆ ಹರಿಯುತ್ತಿದೆ. ಆದರೆ, ಐದಾರು ತಿಂಗಳಿಂದಲೂ ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹಧನ ಪಾವತಿಯಾಗಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕೂಡಲೇ ಸರಕಾರ ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಭತ್ತ ಮತ್ತು ರಾಗಿ ಬೆಳೆಯು ಇದೀಗ ಕಟಾವಿಗೆ ಬಂದಿದೆ. ಹೀಗಾಗಿ ಕೂಡಲೇ ಬೆಂಬಲ ಬೆಲೆ ಯೋಜನೆಯಡಿ ಧಾನ್ಯ ಖರೀದಿ ಕೇಂದ್ರಗಳನ್ನು ಸೆರೆಯಬೇಕು. ಈ ಕೇಂದ್ರಗಳು ತಾತ್ಕಾಲಿಕವಾಗಿರದೆ ಶಾಶ್ವತವಾಗಿ ತೆರೆಯಲ್ಪಡಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಇಡೀ ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದೀಗ ಮಳೆಯೂ ಸುರಿಯುತ್ತಿದ್ದು ರಸ್ತೆಗಳು ಇನ್ನಷ್ಟು ಹದಗೆಟ್ಟಿದೆ. ಕೂಡಲೇ ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ