ಹಾವೇರಿ: ಕಾಂಗ್ರೆಸ್ ಅಕೌಂಟ್ ಸೀಜ್ ಮಾಡಿರುವುದರಲ್ಲಿ ಸರ್ಕಾರದ ಪಾತ್ರವಿಲ್ಲ. ಆದಾಯ ತೆರಿಗೆಯವರು ನೋಟಿಸ್ ಕೊಟ್ಟಿದ್ದಾರೆ. ಅದನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿತ್ತು. ತೆರಿಗೆ ಕಟ್ಟದಿದ್ದಕ್ಕೆ ಕಾಂಗ್ರೆಸ್ ಖಾತೆ ಸೀಜ್ ಮಾಡಿದ್ದಾರೆ. ಕಾಂಗ್ರೆಸ್‌ನವರು ಕಾನೂನಿಗೆ ಅತೀತರು ಎಂಬ ಭಾವನೆ ಹೊಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದರು. ಸವಣೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನೀತಿ ಸಂಹಿತೆ ಜಾರಿಯಲ್ಲಿದೆ. ಈಗ ಸರ್ಕಾರದ್ದೇನು ನಡೆಯೋದೇ ಇಲ್ಲ. ಟ್ಯಾಕ್ಸ್ ತುಂಬದೇ ಇದ್ದರೆ ನಿಮ್ಮನ್ನು ಅವರು ಬಿಡ್ತಾರಾ? ನಮ್ಮನ್ನು ಬಿಡ್ತಾರಾ? ಕಾನೂನು ಎಲ್ಲರಿಗೂ ಒಂದೇ ಅನ್ನೋದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಅವರಿಗೆ ಮೇಲಿಂದ ಸೂಚನೆ ಬಂದಿರುತ್ತದೆ. ಸಿಎಂ ಪಟ್ಟ ಉಳಿಯಬೇಕೆಂದು ಇವರು ಹೇಳಿರ್ತಾರೆ. ರಾಹುಲ್ ಗಾಂಧಿ ಏನ್ ಹೇಳ್ತಾರೆ ಅದನ್ನ ಇವರು ಹೇಳ್ತಾರೆ. ರಾಹುಲ್ ಗಾಂಧಿಗೆ ಏನೂ ಗೊತ್ತಿಲ್ಲ, ಬರೆದು ಕೊಟ್ಟಿದ್ದನ್ನು ಹೇಳುತ್ತಾರೆ ಎಂದರು. ಕಾಂಗ್ರೆಸ್ 42 ಸೀಟು ಗೆದ್ದು ತೋರಿಸಲಿ ಎಂದು ಮಮತಾ ಬ್ಯಾನರ್ಜಿ ಚಾಲೆಂಜ್ ಹಾಕಿದ್ದಾರೆ. ಮೊದಲು ನಿಮ್ಮ ಇಂಡಿಯಾ ಘಟಬಂಧನ್ ಸರಿ ಮಾಡಿಕೊಳ್ಳಲಿ. ಆಮೇಲೆ ಬಿಜೆಪಿ ನಾಯಕರು, ಪಕ್ಷದ ಬಗ್ಗೆ ಸಿದ್ದರಾಮಯ್ಯ ಮಾತಾಡಲಿ ಎಂದು ತಿರುಗೇಟು ನೀಡಿದರು.
ಡಿಎಂಕೆ ಪಾರ್ಟಿಯವರು ತಮ್ಮ ಪ್ರಣಾಳಿಕೆಯಲ್ಲಿ ಮೇಕೆದಾಟು ಮಾಡಲು ಬಿಡಲ್ಲ ಅಂತ ಹೇಳಿದ್ದಾರೆ. ನೀವು ಮೇಕೆದಾಟುಗಾಗಿ ಪಾದಯಾತ್ರೆ ಮಾಡಿದ್ರಿ, ದೆಹಲಿಗೆ ಬಂದು ಪ್ರತಿಭಟನೆ ಮಾಡಿದ್ರಿ. ಈಗ ಏನು ಹೇಳ್ತೀರಿ ನೀವು? ಮೇಕೆದಾಟು ವಿಚಾರದಲ್ಲಿ ಇಂಡಿಯಾ ಘಟಬಂಧನ್ ನಿಲುವೇನು? ನೀವು ತಾಕತ್ ಇದ್ದರೆ ನಾವು ಇದನ್ನ ಒಪ್ಪೋದಿಲ್ಲ ಎಂದು ಹೇಳಿ ಎಂದು ಡಿಕೆಶಿ ಹೇಳಿಕೆಗೆ ಸವಾಲು ಹಾಕಿದರು.