ಕನ್ನಡಪ್ರಭ ವಾರ್ತೆ ಹುಣಸೂರು
ರಾಜ್ಯದಲ್ಲಿ ಪ್ರಮುಖವಾಗಿ ಸರ್ಕಾರಿ ಶಾಲೆಗಳ ಜತೆಯಲ್ಲಿ ಕನ್ನಡ ಶಾಲೆಗಳನ್ನು ಪ್ರತಿಯೊಬ್ಬರೂ ಉಳಿಸಿ, ಬೆಳಸಬೇಕಿದೆ ಎಂದು ರವಿ ಸಂತು ಬಳಗದ ಮುಖ್ಯಸ್ಥ ರವಿಸಂತು ಹೇಳಿದರು.ಹುಣಸೂರು ತಾಲೂಕಿನ ಉಮ್ಮತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಜತೆ ವಿವಿಧ ಸಾಮಗ್ರಿಗಳನ್ನು ವಿತರಿಸಿ ಬಳಿಕ ಅವರು ಮಾತನಾಡಿದರು.
ಸರ್ಕಾರಿ ಶಾಲೆ ಉಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಪ್ರಸುತ್ತ ಉತ್ತಮ ಶಿಕ್ಷಣ ಎಲ್ಲರಿಗೂ ಸಿಗುತ್ತಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಸರ್ಕಾರಿ ಶಾಲೆಗಳು ಕ್ಷೀಣಿಸುತ್ತಿವೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ದುರ್ಬಲಗೊಳ್ಳುತ್ತಿರುವುದು ಬೇಸರ ಸಂಗತಿಯಾಗಿದೆ. ಹಾಗಾಗಿ, ಕನ್ನಡ ಶಾಲೆಗಳ ಸೇವೆ ಕನ್ನಡ ಸೇವೆ ಎಂಬ ಘೋಷವಾಕ್ಯದಲ್ಲಿ ನಮ್ಮ ಕನ್ನಡ ಶಾಲೆಗಳ ಸೇವೆಯಲ್ಲಿ ನಿರಂತರವಾಗಿ ಮುಂದುವರಿಸುತ್ತಾ 58ನೇ ಶಾಲೆಯಾಗಿ ಆಯ್ಕೆ ಮಾಡಿಕೊಂಡು, ಸರ್ಕಾರಿ ಶಾಲೆಗಳಲ್ಲಿ ಇನ್ನಷ್ಟು ಶಿಕ್ಷಣ ಪ್ರಗತಿ ಹೆಚ್ಚಿಸುವ ನಿಟ್ಟಿನಲ್ಲಿ ಅನುಕೂಲವಾಗುವ ಸಾಮಗ್ರಿಗಳನ್ನು ನೀಡುವ ಮೂಲಕ ಒತ್ತು ನೀಡಲಾಗಿದೆ ಎಂದರು.ಮೂಲಭೂತ ಸೌಕರ್ಯಗಳಾದ ಕಂಪ್ಯೂಟರ್, ವಾಟರ್ ಪ್ಯೂರಿಫೈಯರ್, ಕ್ರೀಡಾ ಸಾಮಗ್ರಿಗಳು, ವಿದ್ಯಾ ಸಾಮಗ್ರಿಗಳು, 160 ಜನ ಮಕ್ಕಳಿಗೆ ಟ್ರ್ಯಾಕ್ ಸೂಟ್ ಉಡುಪುಗಳು ಹಸ್ತಾಂತರ ಮಾಡಲಾಯಿತು.ಇದೇ ವೇಳೆ ದೇಶ ಕಾಯುವ ವೀರಯೋಧ ಲೆಫ್ಟಿನೆಂಟ್ ರಾಘವೇಂದ್ರ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ನೀಡಿ, ಅಭಿನಂದನೆ ಸಲ್ಲಿಸಲಾಯಿತು.
ಶಾಲೆಯ ಎಲ್ಲ ಶಿಕ್ಷಕರಿಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ರಾಜ್ಯಸೇವಾ ರತ್ನ ಪ್ರಶಸ್ತಿ ವಿತರಿಸಲಾಯಿತು.ರವಿ ಸಂತು ಬಳಗದ ಪದಾಧಿಕಾರಿಗಳಾದ ಸುರೇಶ್ ಗೌಡ, ಶ್ರೀಕಂಠ, ಜನಾರ್ದನ್, ಸುಧಾಕರ್, ಕಿರಣ್, ರವಿ, ಹಂಸಲೇಖ, ಶ್ರೀನಿವಾಸ್, ಲೋಕೇಶ್, ಅನುಭವ್ಯ, ಸಿಂಚನ, ಕವಿರಾಜ್, ನವೀನ್ ಇದ್ದರು.