ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಕ್ಕಿಲ್ಲ ಸ್ವಂತ ಕಟ್ಟಡ

KannadaprabhaNewsNetwork | Published : Jun 15, 2024 1:04 AM

ಸಾರಾಂಶ

2006ರಲ್ಲಿ ಪ್ರಾರಂಭವಾದ ಈ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಇದೀಗ 2 ದಶಕದ ಸನಿಹ ಬಂದರೂ ಇಂದಿಗೂ ಸ್ವಂತ ಕಟ್ಟಡ ಹೊಂದಿಲ್ಲ. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಬಂದ ಅನುದಾನವು ಮರಳಿ ಹೋಗಿದೆ.

ಈಶ್ವರ ಜಿ. ಲಕ್ಕುಂಡಿ

ನವಲಗುಂದ:

ಪಟ್ಟಣದಿಂದ 1 ಕಿಮೀ ದೂರದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಸ್ಥಾಪನೆಯಾಗಿ 2 ದಶಕ ಕಳೆದರೂ ಸಹ ಸ್ವಂತ ಕಟ್ಟಡವಿಲ್ಲದೇ ದುಪ್ಪಟ್ಟು ಬಾಡಿಗೆ ನೀಡಿ ಹಳೆಯ ಕಟ್ಟಡದಲ್ಲಿಯೇ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ.

2006ರಲ್ಲಿ ಪ್ರಾರಂಭವಾದ ಈ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಇದೀಗ 2 ದಶಕದ ಸನಿಹ ಬಂದರೂ ಇಂದಿಗೂ ಸ್ವಂತ ಕಟ್ಟಡ ಹೊಂದಿಲ್ಲ. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಬಂದ ಅನುದಾನವು ಮರಳಿ ಹೋಗಿದೆ. ಈ ಐಟಿಐ ಕಾಲೇಜಿಗೆ ಹಲವು ವರ್ಷಗಳ ಹಿಂದೆಯೇ 5 ಎಕರೆ ಜಮೀನು ಮಂಜೂರಾಗಿದೆ. ಆದರೆ, ಅದು ಮುಸ್ಲಿಂ ಸಮಾಜಕ್ಕೆ ಸೇರಿರುವ ಜಾಗವೆಂದು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇನ್ನು ನಿಗದಿಗೊಳಿಸಿರುವ ಜಾಗವು ಕಾಲೇಜು ನಿರ್ಮಾಣಕ್ಕೆ ಯೋಗ್ಯವಾಗಿಲ್ಲ ಎಂಬುದು ಹಲವರ ಆರೋಪ. ಈಗಾಗಲೇ ಮೇಲಾಧಿಕಾರಿಗಳು ಜಿಲ್ಲಾಧಿಕಾರಿಗೆ ಕಾಲೇಜಿಗೆ ಬೇಕಾದ ಸೂಕ್ತ ಜಾಗ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಈ ಹಿಂದೆಯೇ ಕಾಲೇಜು ನಿರ್ಮಾಣಕ್ಕೆಂದು ಬಂದಿದ್ದ ₹3. 80 ಕೋಟಿ ಅನುದಾನ ಸರ್ಕಾರಕ್ಕೆ ಮರಳಿ ಹೋಗಿದೆ.

ನಮ್ಮ ತರಬೇತಿ ಕೇಂದ್ರದಲ್ಲಿ ಸ್ವಂತ ಜಾಗೆ ಇಲ್ಲದೆ ಇರುವುದರಿಂದ ₹4 ಕೋಟಿ ವೆಚ್ಚದಲ್ಲಿ ಐಸಿಟಿಎಸ್‌ಎಂ ಲ್ಯಾಬ್ ಕಳೆದುಕೊಂಡಿದೆ. ಇನ್ನು ಟಾಟಾ ಕಂಪನಿ ಈ ಕಾಲೇಜಿನ ಮೇಲೆ ₹30 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರ ನೀಡಲು ಮುಂದಾಗಿತ್ತು. ಆದರೆ, ಕಾಲೇಜಿಗೆ ಸ್ವಂತ ಜಾಗೆ ಇರದೇ ಇರುವ ಕಾರಣ ಅವರೂ ಕೂಡಾ ಹಣ ಹೂಡಿಕೆ ಮಾಡಲಿಲ್ಲ ಎಂದು ಇಲ್ಲಿನ ಕಾಲೇಜು ತರಬೇತಿದಾರರು ಅಳಲು ತೋಡಿಕೊಂಡಿದ್ದಾರೆ.

ಜಾಗಕ್ಕೆ ಅಲೆದಾಟ:

ಪುರಸಭೆ ಅಧಿಕಾರಿಗಳು ನಮ್ಮ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಜಾಗೆ ಇಲ್ಲವೆಂದರೆ, ನೀರಾವರಿ ಇಲಾಖೆಯಲ್ಲಿ ಈ ಮೊದಲು ಎಲ್ಲ ತರಹದ ಕಾಗದ ಪತ್ರಗಳು ಸಿದ್ಧವಾಗಿ ಇನ್ನೇನು ಜಾಗಕ್ಕೆ ಮಂಜೂರಾತಿ ದೊರೆಯಬೇಕು ಎನ್ನುವಷ್ಟರಲ್ಲಿ ಅಧಿಕಾರಿಗಳ ಸಭೆಯಲ್ಲಿ ಆ ಕಾಗದ ಪತ್ರಗಳನ್ನು ತಿರಸ್ಕರಿಸಲಾಯಿತು. ಆಗ ಪ್ರಶ್ನಿಸಿದರೆ ನಮ್ಮ ಮುಂದಿನ ಯೋಜನೆಗಳು ಹಾಗೂ ಬೇರೆ ಬೇರೆ ಕಾಮಗಾರಿಗಳ ಬಳಕೆಗೆ ಜಾಗೆಯ ಅವಶ್ಯಕತೆ ಇದೆ. ಹಾಗಾಗಿ ಕಾಲೇಜಿಗೆ ಜಾಗೆ ನೀಡಲು ಆಗುವುದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ಈ ವರೆಗೂ ಸ್ವಂತ ಕಟ್ಟಡದ ಆಸೆ ಹಾಗೇ ಉಳಿದಿದೆ.

ಈಗಲೂ ಐಟಿಐ ಕಾಲೇಜು ನಿರ್ಮಾಣಕ್ಕೆ ಜಾಗೆ ಹುಡುಕುತ್ತಿದ್ದಾರೆ. ಆದರೆ, ದೊರೆತಿಲ್ಲ ಎಂಬುದೇ ವಿಪರ್ಯಾಸ.ಶಾಸಕರು ಮುತುವರ್ಜಿ ವಹಿಸಲಿ

ಸ್ವಂತ ಜಾಗೆ ಪಡೆಯಲು ಅಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ನೀಡಿದ್ದೇವೆ. ಪುರಸಭೆ ಅಧಿಕಾರಿಗಳು ಸರ್ಕಾರಿ ಜಾಗ ಇಲ್ಲ ಎಂದು ಹೇಳಿದ್ದಾರೆ. ಇನ್ನು ಪಿಡಬ್ಲ್ಯೂಡಿ, ಎಪಿಎಂಸಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಭೇಟಿ ನೀಡಿ ತಮ್ಮಲ್ಲಿ ಖಾಲಿ ಇರುವ ಜಾಗೆಯನ್ನು ಕಾಲೇಜು ಕಟ್ಟಡ ನಿರ್ಮಾಣಕ್ಕೆ ನೀಡುವಂತೆ ಮನವಿ ಮಾಡಿದ್ದೇವೆ. ಆದರೆ, ಎಲ್ಲೂ ಸ್ಪಂದನೆ ದೊರೆತಿಲ್ಲ. ಈಗ ಶಾಸಕರೇ ಮುತುವರ್ಜಿ ವಹಿಸಿ ಮಕ್ಕಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಕಾಲೇಜಿನ ಪ್ರಾಚಾರ್ಯ ಧರ್ಮಾಜಿ ಲಮಾಣಿ ಕನ್ನಡಪ್ರಭಕ್ಕೆ ತಿಳಿಸಿದರು.

ಈ ಹಿಂದೆ ನನ್ನ ಅವಧಿಯಲ್ಲಿ ₹ 7 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಜಾಗವಿರದ ಹಿನ್ನೆಲೆಯಲ್ಲಿ ಅನುದಾನ ಬಳಕೆಯಾಗದೆ ಮರಳಿ ಸರ್ಕಾರಕ್ಕೆ ಹೋಗಿದೆ. ಆದಷ್ಟು ಬೇಗನೆ ಈ ಕಾಲೇಜಿಗೆ ಜಾಗೆ ಮಂಜೂರಾತಿಗೆ ಪ್ರಯತ್ನಿಸುವೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದ್ದಾರೆ.

Share this article