ತೀವ್ರ ಬರಗಾಲದಲ್ಲೂ ವಸೂಲಿಗೆ ನಿಂತ ಸರ್ಕಾರ: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Oct 15, 2026, 01:30 AM IST
ಪೋಟೋ: 14ಎಸ್‌ಎಂಜಿಕೆಪಿ06ಹೊಸನಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ಬಿಜೆಪಿ ಏರ್ಪಡಿಸಿದ್ದ ಸೇವಾ ಸಂಕಲ್ಪ ಅಭಿಯಾನದ ಸಮಾರೋಪವನ್ನು ಉದ್ಘಾಟಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ದೇಶದ ಪ್ರಧಾನ ಸೇವಕನಾಗಿ ನರೇಂದ್ರ ಮೋದಿಯವರು ಭಾರತವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಿ ವಿಕಾಸ ಪರ್ವದತ್ತ ಕೊಂಡೊಯ್ಯುತ್ತಿದ್ದಾರೆ. ಅವರು ಪ್ರಧಾನಿಯಾಗಿ ಕೇವಲ 12 ವರ್ಷಗಳಲ್ಲಿ ನಮ್ಮ ದೇಶ ವಿಶ್ವದ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿರುವುದು ಇದಕ್ಕೆ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಸನಗರ

ದೇಶದ ಪ್ರಧಾನ ಸೇವಕನಾಗಿ ನರೇಂದ್ರ ಮೋದಿಯವರು ಭಾರತವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಿ ವಿಕಾಸ ಪರ್ವದತ್ತ ಕೊಂಡೊಯ್ಯುತ್ತಿದ್ದಾರೆ. ಅವರು ಪ್ರಧಾನಿಯಾಗಿ ಕೇವಲ 12 ವರ್ಷಗಳಲ್ಲಿ ನಮ್ಮ ದೇಶ ವಿಶ್ವದ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿರುವುದು ಇದಕ್ಕೆ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ಬಿಜೆಪಿ ಏರ್ಪಡಿಸಿದ್ದ ಸೇವಾ ಸಂಕಲ್ಪ ಅಭಿಯಾನದ ಸಮಾರೋಪ ಉದ್ಘಾಟಿಸಿ ಮಾತನಾಡಿ, ನರೇಂದ್ರ ಮೋದಿ ಅವರು ದೀರ್ಘಕಾಲದ ಸಾರ್ವಜನಿಕ ಸೇವೆ, ಸಂಘಟನಾ ಅನುಭವ ಹಾಗೂ ಆಡಳಿತದ ಮೂಲಕ ರಾಷ್ಟ್ರಮಟ್ಟದ ನಾಯಕತ್ವಕ್ಕೆ ಬೆಳೆದ ಪ್ರಮುಖ ನಾಯಕರಾಗಿದ್ದಾರೆ. ಅವರ ಸಮರ್ಥ, ಪಾರದರ್ಶಕ ಹಾಗೂ ಪರಿಶುದ್ಧ ಆಡಳಿತದ ಆದರ್ಶಗಳನ್ನು ನಾವೆಲ್ಲ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಂಘಟನಾ ಕಾರ್ಯ ಆರಂಭಿಸಿದ ಮೋದಿ ಅವರು ಬಿಜೆಪಿ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಗುಜರಾತ್ ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ವಿಕಸಿತ ಭಾರತದ ನಿರ್ಮಾಣಕ್ಕೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದರು.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ತಾವು ದೇಶದ ಪ್ರಧಾನಿಯಾಗುವ ಒಂದೇ ಉದ್ದೇಶದಿಂದ ಹತಾಶೆಗೆ ಒಳಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ದೇಶದ ಆಡಳಿತ, ನ್ಯಾಯಾಂಗ, ಚುನಾವಣಾ ಆಯೋಗಗಳಲ್ಲಿ ಅವರಿಗೆ ವಿಶ್ವಾಸವಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ಹಿತಕಾಯುವಲ್ಲಿ ವಿಫಲವಾಗಿದೆ. ಬರಗಾಲ ತಾಂಡವವಾಡುತ್ತಿದ್ದರೆ, ಸರಕಾರ ಜನರಿಂದ ವಸೂಲಿಗೆ ನಿಂತಿದೆ, ಸರಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಯುವ ಜನತೆಗೆ ನೀಡಿದ್ದ ಭರವಸೆ ಸುಳ್ಳಾಗಿದೆ. ಮಾಸಾಶನ ನೀಡಲೂ ಆಗದಂತ ಸರಕಾರವನ್ನು ಕಿತ್ತೊಗೆಯಬೇಕಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದರು.

ತನ್ನದೇ ಗೊಂದಲಗಳಲ್ಲಿ ಮುಳುಗಿರುವ ಸರ್ಕಾರ ಜಿ.ಪಂ, ತಾ.ಪಂ ಚುನಾವಣೆ ನಡೆಸುವುದು ಅನುಮಾನ. ಆದರೂ ವಿಪಕ್ಷವಾಗಿ ನಾವು ಸಂಘಟನೆ ಮಾಡಿ ಚುನಾವಣೆಗೆ ಸಿದ್ಧರಾಗಬೇಕು. ಸ್ಥಳೀಯ ಸಂಸ್ಥೆ ಚುನಾವಣಾ ಹೊಂದಾಣಿಕೆ ಕುರಿತು ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದ್ದು, ಕಾರ್ಯಕರ್ತರಿಗೆ ಯಾವುದೇ ಗೊಂದಲ ಹಾಗೂ ಅನ್ಯಾಯವಾಗದಂತೆ ನಿರ್ಧಾರ ಕೈಗೊಳ್ಳಲಾಗುವುದು. 2028ಕ್ಕೆ ಅಥವಾ ಅದಕ್ಕಿಂತ ಮೊದಲೇ ಚುನಾವಣೆ ಬಂದರೂ ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಿಜೆಪಿಯಲ್ಲಿ ಐಟಿ ಸೆಲ್ ಇರುವಂತೆ ಕಾಂಗ್ರೆಸ್‌ನಲ್ಲಿ ''''''''ಸ್ಟಿಂಗ್‌ ಸೆಲ್'''''''' ಇದೆ. ಅಧಿಕಾರಕ್ಕೆ ಬರುವ ಹಪಾಹಪಿಯಿಂದ ಕಳೆದ 2-3 ವರ್ಷಗಳಿಂದ ಈ ಸ್ಟಿಂಗ್ ಸೆಲ್ ಕೆಲಸ ಮಾಡುತ್ತಿದ್ದು, ಅನೇಕ ಶಾಸಕರು ಹಾಗೂ ಸಚಿವರ ಸ್ಟಿಂಗ್ ಮಾಡಲಾಗಿದೆ. ಅವರ ಹೆಸರನ್ನು ನಾನು ಈಗ ಹೇಳುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರೇ ಅದನ್ನು ಬಹಿರಂಗಪಡಿಸಲಿದ್ದಾರೆ ಎಂದರು.

ಕಳೆದ ಮೂರೂವರೆ ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡಿಲ್ಲ, ವಿಕಲಚೇತನ ಹಾಗೂ ವೃದ್ಧಾಪ್ಯ ವೇತನವನ್ನೂ ಸರಿಯಾಗಿ ಕೊಡುತ್ತಿಲ್ಲ. ಭೀಕರ ಬರಗಾಲವಿದ್ದರೂ ಕುಂಭಕರ್ಣ ನಿದ್ದೆಯಲ್ಲಿರುವ ಸರ್ಕಾರ, ಕೇವಲ 3 ದಿನ ಅಧಿವೇಶನ ಕರೆದು ರೈತರಿಗೆ 2500 ರು. ಪರಿಹಾರವನ್ನು ಭಿಕ್ಷೆಯ ರೀತಿ ನೀಡುತ್ತಿದೆ. ರೈತರಿಗೆ ದಿನಕ್ಕೆ 7 ಗಂಟೆ ಸತತ ವಿದ್ಯುತ್‌ ನೀಡುತ್ತಿಲ್ಲ ಹಾಗೂ 5 ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಬೇಕೆಂಬ ನಮ್ಮ ಒತ್ತಾಯಕ್ಕೂ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಸಮಯದಲ್ಲಿ ವಿಶ್ವವೇ ಕಂಗಾಲಾಗಿದ್ದರೂ, ನರೇಂದ್ರ ಮೋದಿ ಮಾತ್ರ ಧೃತಿಗೆಡೆದೆ ದೇಶವನ್ನು ಮುನ್ನಡೆಸಿದರು. ಆಪರೇಶನ್ ಸಿಂಧೂರ್ ಮೂಲಕ ದೇಶ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಸಮಾರಂಭದಲ್ಲಿ ದತ್ತಾತ್ರಿ, ಬಿ.ಸ್ವಾಮಿರಾವ್, ಜಿಲ್ಲಾಧ್ಯಕ್ಷ ಜಗದೀಶ್, ಮಂಡಲದ ಅಧ್ಯಕ್ಷ ಎನ್.ಸತೀಶ್, ಟಿ.ಡಿ.ಮೇಘರಾಜ್, ಭಾರತಿ ಶೆಟ್ಟಿ, ಕೆ.ಜಿ.ಕುಮಾರಸ್ವಾಮಿ, ಧನಂಜಯ ಸರ್ಜಿ, ಜೆಡಿಎಸ್ ಪಕ್ಷದ ಪ್ರಮುಖರಾದ ವರ್ತೇಶ್, ಚಾಬುಸಾಬ್, ಎನ್.ಆರ್. ದೇವಾನಂದ್, ಉಮೇಶ್‌ ಕಂಚುಗಾರ್, ಶ್ರೀಪತಿರಾವ್, ಉಮೇಶ್, ಮಂಡಾಣಿ ಮೋಹನ್, ಸತ್ಯ ನಾರಾಯಣ, ವಿ. ಮಂಜುನಾಥ್ ಸಂಜೀವ, ಬಸವರಾಜ್. ಗಣಪತಿ ಬಿಳಗೋಡು ಮತ್ತಿತರರು ಇದ್ದರು.

ವಿಜಯೇಂದ್ರ ಜಿಲ್ಲೆಯಿಂದ 5ನೇ ಸಿಎಂ ಆಗಬೇಕು: ಹರತಾಳು ಹಾಲಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶಿವಮೊಗ್ಗ ಜಿಲ್ಲೆಯಿಂದ ರಾಜ್ಯದ 5ನೇ ಮುಖ್ಯಮಂತ್ರಿಯಾಗಬೇಕು ಎಂಬ ಆಶಯವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಇದುವರೆಗೆ ಜಿಲ್ಲೆಯಲ್ಲಿಂದ ನಾಲ್ವರು ಮುಖ್ಯಮಂತ್ರಿಗಳಾಗಿದ್ದು, ವಿಜಯೇಂದ್ರ ಅವರು ಐದನೇ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಶೋಷಿತರು, ಪೀಡಿತರು, ದಲಿತರು, ಹಿಂದುಳಿದವರು ಮತ್ತು ರೈತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರು. ರೈತರಿಗಾಗಿ ಪ್ರತ್ಯೇಕ ರೈತ ಬಜೆಟ್ ಮಂಡಿಸಿದ್ದರು. ದೇಶದಲ್ಲಿ ರೈತರಿಗೆ ಶೇ.3ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಿದವರಲ್ಲಿ ಯಡಿಯೂರಪ್ಪನವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರುಳಿಗೆ ಹುಲಿ ಬಲಿ, ದಂತರಹಿತ ಆನೆ ಕಳೇಬರ
ಸಾಗರ ರೈಲ್ವೆ ನಿಲ್ದಾಣಕ್ಕೆ ಲೋಹಿಯಾ ಹೆಸರಿಡಲು ಒತ್ತಾಯ