ಅಜ್ಜಪ್ಪನಹಳ್ಳಿ ಸಮೀಪ 108 ಕೋಟಿ ವೆಚ್ಚದಲ್ಲಿ ಹೊಸ ವಿದ್ಯುತ್ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಚಿವ ಸುಧಾಕರ್ ಭರವಸೆಕನ್ನಡಪ್ರಭ ವಾರ್ತೆ ಸಿರಿಗೆರೆ
ರೈತರಿಗೆ ನಿರಂತರ ವಿದ್ಯುತ್ ಒದಗಿಸಿ ಕೃಷಿ ಚಟುವಟಿಕೆಗಳಿಗೆ ನೆರವಾಗುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.ಭರಮಸಾಗರ ಸಮೀಪದ ಅಜ್ಜಪ್ಪನಹಳ್ಳಿಯಲ್ಲಿ 220/66/11 ಕೆವಿ ಹೊಸ ವಿದ್ಯುತ್ ಉಪಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇದು 108 ಕೋಟಿ ರು.ಯೋಜನೆಯಾಗಿದೆ. ಕಾಮಗಾರಿ ಮುಗಿಯುವ ವೇಳೆಗೆ 120 ಕೋಟಿ ರು. ತಲುಪಬಹುದು. ನಮ್ಮ ಸರ್ಕಾರವು ಈ ಯೋಜನೆಯನ್ನು ಒಂದು ವರ್ಷದೊಳಗೆ ಮುಗಿಸಲು ಬದ್ಧವಾಗಿದೆ ಎಂದರು.ಬೇಸಿಗೆ ಕಾಲದಲ್ಲಿ ವಿದ್ಯುತ್ ಒತ್ತಡ ತಡೆಯಲು ಜಿಲ್ಲೆಯ 6 ತಾಲೂಕುಗಳಿಂದಲೂ ಬೇಡಿಕೆ ಇದೆ. ಅದಕ್ಕಾಗಿ ಜಿಲ್ಲೆಯಲ್ಲಿ 21 ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸುವಂತೆ ಬೇಡಿಕೆ ಇದೆ. ಅದನ್ನು ಜಾರಿಗೊಳಿಸಲು ನಾವು ತಯಾರಿದ್ದೇವೆ ಎಂದರು.
ರೈತರ ಹಿತ ಕಾಪಾಡುವುದು ಕಾಂಗ್ರೆಸ್ ಸರ್ಕಾರ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಇಡೀ ರಾಜ್ಯದಲ್ಲಿ ರೈತ ಸಮುದಾಯಕ್ಕೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೊಳಿಸಿದರು. ಇದು ದೇಶದಲ್ಲಿಯೇ ಮೊದ ಪ್ರಯತ್ನವಾಗಿತ್ತು. ಇಂತಹ ಹಲವಾರು ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷ ರೈತರ ಹಿತ ಕಾಪಾಡುತ್ತಿದೆ ಎಂದರು.ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳು ಸಮಾಜದಲ್ಲಿ ಆರ್ಥಿಕವಾಗಿ ಅತ್ಯಂತ ಕಟ್ಟಕಡೆಯಲ್ಲಿರುವ ಮಹಿಳೆಯರಿಗೆ ನೆರವಾಗಿವೆ. ವಿದ್ಯಾವಂತ ನಿರುದ್ಯೋಗಿಗಳಿಗೆ 10 ಕೋಟಿ ನೆರವು ನೀಡಿದ್ದೇವೆ. ಬಡವರಿಗೆ ಯೋಜನೆಗಳ ಲಾಭ ಮುಟ್ಟಿದೆ. ಅದನ್ನು ನಾವು ಸರಿಯಾಗಿ ಪ್ರಚಾರ ಮಾಡಿಲ್ಲ. ಯುವಕರು ತಮಗಿರುವ ಯೋಜನೆಯ ಲಾಭ ಪಡೆದು ಶಿಕ್ಷಣದ ಶುಲ್ಕ, ಪುಸ್ತಕ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಳಸಿಕೊಂಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೊಳಲ್ಕೆರೆ ಕ್ಷೇತ್ರದ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಭರಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ತರಳಬಾಳು ಶ್ರೀಗಳ ದೂರದೃಷ್ಟಿಯಿಂದ ಕೆರೆಗಳೆಲ್ಲ ತುಂಬಿ ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಹರಿಯುತ್ತಿವೆ. ಆದರೆ ಈ ಭಾಗದ ರೈತರಿಗೆ ವಿದ್ಯುತ್ ಅಭಾವ ಇದೆ. ಅದನ್ನು ಯೋಚಿಸಿ 220 ಕೆವಿ ವಿದ್ಯುತ್ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಿದರೆ ಕೆಲವು ರೈತರೇ ಇದಕ್ಕೆ ಅಡ್ಟಿ ಪಡಿಸಿದರು. ಅಲ್ಲದೆ ಹೋಗಿದ್ದರೆ ಈ ಯೋಜನೆ ಎಂದೋ ಮುಗಿದು ರೈತರಿಗೆ ನಿರಂತರ ವಿದ್ಯುತ್ ಸಿಗುತ್ತಿತ್ತು ಎಂದರು.ವಿದ್ಯುತ್ ಮತ್ತು ನೀರು ಸರಿಯಾಗಿ ದೊರೆಯಲ್ಲಿ ರೈತರು ಅಭಿವೃದ್ಧಿ ಹೊಂದುತ್ತಾರೆ. ಈ ಯೋಜನೆಯಿಂದ ಭರಮಸಾಗರ, ಸಿರಿಗೆರೆ, ಹಿರೇಗುಂಟನೂರು, ವಿಜಾಪುರ, ಯಳಗೋಡು ವ್ಯಾಪ್ತಿಯ ಸುಮಾರು 80 ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಚಿಕ್ಕಜಾಜೂರು ಬಳಿ ಯೋಜಿಸಿರುವ ಯೋಜನೆಯಿಂದ ಸುಮಾರು 350 ಹಳ್ಳಿಗಳಿಗೆ ಲಾಭವಾಗಲಿದೆ ಎಂದರು.
ಇಫ್ಕೋ ಅಧ್ಯಕ್ಷ ಕೋಗುಂಡೆ ಮಂಜುನಾಥ್ ಮಾತನಾಡಿ, ಇದು ಈ ಭಾಗದ ಬಹುದಿನಗಳ ಬೇಡಿಕೆಯಾಗಿತ್ತು. ಭೂಮಿಯ ಅಲಭ್ಯತೆಯಿಂದ ತಡವಾಗಿದೆ. ಈ ಭಾಗದ ರೈತರ ವಿದ್ಯುತ್ ಕೊರತೆಯನ್ನು ಈ ಯೋಜನೆ ನಿವಾರಿಸಲಿದೆ ಎಂದರು.ಬಿಜೆಪಿ ಯುವ ಮೋರ್ಚಾದ ಶೈಲೇಶ್ ಕುಮಾರ್ ಮಾತನಾಡಿ, ಬೇಕಾದಷ್ಟು ನೀರಿದ್ದು ವಿದ್ಯುತ್ ಇಲ್ಲದ ಪರಿಸ್ಥಿತಿಯಲ್ಲಿದ್ದೇವೆ. ಈ ಯೋಜನೆ ನಮ್ಮ ಭಾಗಕ್ಕೆ ಅನುಕೂಲವಾಗಲಿದೆ. 80 ಹಳ್ಳಿಗಳ ಈ ಯೋಜನೆಯ ಲಾಭ ಪಡೆಯಲಿವೆ ಎಂದರು.
ದಾವಣಗೆರೆ ಕವಿಪ್ರನಿನಿ ಅಧೀಕ್ಷಕ ಎಂಜಿನಿಯರ್ ಜಿ.ಎಂ.ರೇವಣಸಿದ್ಧಪ್ಪ ಮಾತನಾಡಿ, 108 ಕೋಟಿ ರು.ಯೋಜನೆಯನ್ನು ಒಂದು ವರ್ಷದೊಳಗೆ ಪೂರೈಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದರು.ಯಳಗೋಡು ಗ್ರಾಪಂ ಸದಸ್ಯೆ ರೂಪಾ ರೇವಣ್ಣ ಒಂದು ವರ್ಷದೊಳೆಗೆ ಕಾಮಗಾರಿ ಪೂರೈಸಿ ಜಿಲ್ಲಾ ಉಸ್ತುವಾರಿ ಸಚಿವರೇ ಇದನ್ನು ಉದ್ಘಾಟಿಸುವಂತಾಗಲಿ ಎಂದರು.
ಈ ವೇಳೆ ಚಿತ್ರದುರ್ಗ ಕವಿಪ್ರನಿನಿ ಕಾರ್ಯನಿರ್ವಾಹಕ ಇಂಜಿನಿಯರ್ ಬಿ ಮಲ್ಲಿಕಾರ್ಜುನಸ್ವಾಮಿ ಸ್ವಾಗತಿಸಿದರು. ಹಿರಿಯ ಬಿಜೆಪಿ ಮುಖಂಡ ಡಿ.ವಿ. ಶರಣಪ್ಪ, ಗುತ್ತಿಗೆದಾರ ದೇಸಾಯಿ, ಯಳಗೋಡು ಗ್ರಾಪಂ ಅಧ್ಯಕ್ಷೆ ಅನಿತಾ ನಾಗರಾಜ್, ಉಪಾಧ್ಯಕ್ಷೆ ನಿರ್ಮಲಮ್ಮ ತಿಪ್ಪೇಸ್ವಾಮಿ ಮುಂತಾದವರು ಭಾಗವಹಿಸಿದ್ದರು.