ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧ

KannadaprabhaNewsNetwork | Published : Dec 5, 2023 1:30 AM

ಸಾರಾಂಶ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರಂತೆ ಪಾಲಕರ ಜವಾಬ್ದಾರಿಯೂ ಇದೆ. ತಾವೆಲ್ಲರೂ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ಸಹಕರಿಸಬೇಕು, ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರವು ಬದ್ಧವಾಗಿದೆ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು. ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಹಾವೇರಿ:

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರಂತೆ ಪಾಲಕರ ಜವಾಬ್ದಾರಿಯೂ ಇದೆ. ತಾವೆಲ್ಲರೂ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ಸಹಕರಿಸಬೇಕು, ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರವು ಬದ್ಧವಾಗಿದೆ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೊಠಡಿ ಸಮಸ್ಯೆ ಇರುವ ಶಾಲೆಗಳಿಗೆ ಈಗಾಗಲೇ ವಿವಿಧ ಯೋಜನೆ ಅಡಿಯಲ್ಲಿ ಕೊಠಡಿಗಳನ್ನು ಮಂಜೂರು ಮಾಡಿದ್ದು ಅವುಗಳು ಶೀಘ್ರದಲ್ಲಿ ಬೋಧನಾ ಕಾರ್ಯಕ್ಕೆ ಲಭ್ಯವಾಗುತ್ತವೆ. ಇನ್ನೂ ಅವಶ್ಯವಿದ್ದಲ್ಲಿ ಬೇಡಿಕೆಗನುಗುಣವಾಗಿ ಆದ್ಯತೆ ಮೇರೆಗೆ ಕೊಠಡಿಯೊಂದಿಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.

ಶಾಲೆಗಳಲ್ಲಿ ಪೌಷ್ಠಿಕಾಂಶವುಳ್ಳ ಊಟ, ಕ್ಷೀರಭಾಗ್ಯ ಯೋಜನೆಯಡಿ ಹಾಲು, ಮೊಟ್ಟೆ, ಶೇಂಗಾ ಚಕ್ಕಿ ಸೇರಿದಂತೆ ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್‌ ವಿತರಣೆ ಸೇರಿದಂತೆ ಅನೇಕ ಪ್ರೋತ್ಸಾಹದಾಯಕ ಯೋಜನೆಗಳಿದ್ದು, ಅವುಗಳ ಸದುಪಯೋಗದೊಂದಿಗೆ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ವ್ಯಾಸಂಗ ಪಡೆಯುವಂತಾಗಲಿ. ಸದೃಢ ಸಮಾಜ ನಿರ್ಮಾಣ ಮಾಡಲು ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉರ್ದು ಇಸಿಓ ಸಿಖಂದರ ಮುಲ್ಲಾ, ಶಾಲೆಗೆ ಕೊಠಡಿಯೊಂದಿಗೆ, ಕುಡಿಯುವ ನೀರು ಮತ್ತು ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯವನ್ನು ಒದಗಿಸಲಾಗಿದ್ದು, ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ತಾಲೂಕಿನ ೪೧ ಉರ್ದು ಶಾಲೆಗಳಿಗೂ ಸಾಧ್ಯವಾದಷ್ಟು ಮೂಲಭೂತ ಸೌಲಭ್ಯ ಒದಗಿಸಲು ಒತ್ತು ನೀಡಿದಲ್ಲಿ ಇನ್ನಷ್ಟು ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬಹುದಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಮಾತನಾಡಿ, ತಾಲೂಕಿನಲ್ಲಿ ಶಾಲೆಗಳಿಗೆ ವಿವಿಧ ಯೋಜನೆಯಡಿ ಕೊಠಡಿಗಳು ಮಂಜೂರಾಗಿದ್ದು ಕೆಲವು ಉದ್ಘಾಟನೆಗೆ ಸಿದ್ಧ ಇವೆ. ಅವುಗಳನ್ನೂ ಸಹ ಬೋಧನಾ ಕಾರ್ಯಕ್ಕೆ ಬಳಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು. ಶೌಚಾಲಯ, ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಶಬ್ಬೀರ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಮೌಲ್ವಿ ಹಜರತ್ ಅಹ್ಮದರಜಾ, ಎಂ.ಎಂ. ಮೈದೂರ, ಪದವೀಧರ ಘಟಕ ಜಿಲ್ಲಾ ಕಾರ್ಯದರ್ಶಿ ಶಂಕರ ಮೆಹರವಾಡೆ, ಗ್ರಾಪಂ ಸದಸ್ಯರಾದ ಇಸ್ಮಾಯಿಲಸಾಬ ಹುಬ್ಬಳ್ಳಿ, ದಾವಲಸಾಬ ಹುಬ್ಬಳ್ಳಿ, ಫಕ್ಕಿರೇಶ ಹರಿಜನ, ಕನಕಾ ತುಬಾಕಿ, ಕೆಆರ್‌ಐಡಿಎಲ್ ಸಹಾಯಕ ಅಭಿಯಂತರ ವಿನಾಯಕ ಟಿ.ಎನ್., ಪಿಡಿಒ ಈಶ್ವರಪ್ಪ, ಪರಸನಗೌಡ, ಅಶೋಕ ಮಜ್ಜಗಿ, ಸಿಆರ್‌ಪಿ ಶ್ರೀಕಾಂತ ದೊಡ್ಡಕುರುಬರ, ಉರ್ದು ಸಿಆರ್‌ಪಿ ಇಸ್ಮಾಯಿಲ್ ತಡಕನಹಳ್ಳಿ, ಪ್ರಧಾನ ಗುರುಮಾತೆ ಝಾಕಿಯಾ ಎಡ್ರಾಮಿ, ಪ್ರಕಾಶ ಮಜ್ಜಗಿ ಸೇರಿದಂತೆ ಇತರರಿದ್ದರು. ಸಿಆರ್‌ಪಿ ಶ್ರೀಕಾಂತ ದೊಡ್ಡಕುರುಬರ ಸ್ವಾಗತಿಸಿದರು. ಆರ್.ಬಿ. ಹನುಮರೆಡ್ಡಿ ನಿರ್ವಹಿಸಿದರು.

Share this article