ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ಪ್ರತಿಭಟನೆ । ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಖಂಡನೆ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿರಾಜ್ಯ ಸರ್ಕಾರದ ಜನವಿರೋದಿ ನೀತಿಯಿಂದಾಗಿ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಬಜೆಟ್ ಮಂಡನೆಯ ನಂತರದಲ್ಲಿ ಹಾಲು, ಬಸ್ ಪ್ರಯಾಣ, ಸ್ಟಾಂಪ್ ಶುಲ್ಕ ಮತ್ತು ವಿದ್ಯುತ್, ಮದ್ಯ ಮುಂತಾದವುಗಳ ಮೇಲೆ ತೆರಿಗೆ ಹೇರಿಕೆ ಮಾಡುವ ಮೂಲಕ ಸರ್ಕಾರ ಹಗಲು ದರೋಡೆ ನಡೆಸುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಟೀಕಿಸಿದರು.
ತೆರಿಗೆ ಹೆಚ್ಚಳ, ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ, ಶಾಸಕರ ಅಮಾನತು ಮುಂತಾದ ಸರ್ಕಾರದ ನೀತಿಯನ್ನು ಖಂಡಿಸಿ ಸೋಮವಾರ ಮಂಡಲ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯ ನಂತರ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಹೊಸ ತೆರಿಗೆಗಳನ್ನು ಹೇರುವ ಮೂಲಕ ಮಧ್ಯಮ ವರ್ಗದ ಜನರ ಬದುಕಿಗೆ ಕೊಡಲಿ ಏಟು ನೀಡಿದ್ದು ಏರಿಸಿರುವ ಎಲ್ಲಾ ದರಗಳನ್ನೂ ಈ ಕೂಡಲೇ ಹಿಂಪಡೆಯಬೇಕು ಆಗ್ರಹಿಸಿದರು.ದಾಖಲೆ ಸಂಖ್ಯೆಯಲ್ಲಿ ಮುಂಗಡ ಪತ್ರ ಮಂಡಿಸಿದ್ದೇನೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ತೆರಿಗೆ ಹೆಚ್ಚಿಸಿಲ್ಲಾ ಎಂದು ಹೇಳುತ್ತಲೇ ಹಲವಾರು ವಸ್ತುಗಳ ಮೇಲೆ ತೆರಿಗೆ ಹಾಕುವ ಮೂಲಕ ಜನರನ್ನು ವಂಚಿಸಿದ್ದಾರೆ. ಡೀಸೆಲ್ ದರ ಏರಿಸಿದ ಪರಿಣಾಮ ಸರಕು ಸಾಮಗ್ರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ ನಿತ್ಯದ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಬಗರ್ ಹುಕುಂ ಸಮಸ್ಯೆ ಸೇರಿದಂತೆ ಈ ಸುಲಿಗೆಕೋರ ರಾಜ್ಯ ಸರ್ಕಾರದ ನೀತಿಯ ವಿರುದ್ಧ ಬಿಜೆಪಿ ವತಿಯಿಂದ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.
ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ನೀಡಲು ಅವಕಾಶ ಇಲ್ಲವಾದರೂ ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಸರ್ಕಾರಿ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡಿರುವುದನ್ನು ಬಿಜೆಪಿ ಖಂಡಿಸುತ್ತದೆ. ಹೊರದೇಶಕ್ಕೆ ಹೋಗುವ ಮುಸ್ಲಿಂ ವಿಧ್ಯಾರ್ಥಿಗಳಿಗೆ 30 ಲಕ್ಷ ರು. ಆರ್ಥಿಕ ನೆರವು ಮತ್ತು ಆ ಸಮುದಾಯದ ಹೆಣ್ಣುಮಕ್ಕಳ ಆತ್ಮರಕ್ಷಣೆ ಕಲೆಗೆ ಮುಂಗಡ ಪತ್ರದಲ್ಲಿ ಹಣ ಮೀಸಲಿಟ್ಟಿರುವುದು ಖಂಡನೀಯ ಎಂದರು.ತಾನು ದಲಿತರ ಪರ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಮುದಾಯಗಳಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದು ಎಷ್ಟು ಸರಿ ಪ್ರಶ್ನಿಸಿದ ಶಾಸಕರು, ಈ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು. ಈ ಹಣವನ್ನು ಪರಿಶಿಷ್ಟ ಸಮುದಾಯಕ್ಕೆ ಭೂಮಿ ಖರೀದಿ, ಗಂಗಕಲ್ಯಾಣ ಯೋಜನೆ ಮತ್ತು ವಿಧ್ಯಾರ್ಥಿಗಳ ಶಿಕ್ಷಣ ಮುಂತಾದ ಕಾರ್ಯಗಳಿಗೆ ಬಳಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಮೈಸೂರಿನಲ್ಲಿ ನಡೆದ ನಿವೇಶನದ ಹಗರಣದಲ್ಲಿ ಬೆತ್ತಲಾಗಿದ್ದಾರೆ. ಪ್ರಾಮಾಣಿಕರಾಗಿದ್ದರೆ ನಿವೇಶನವನ್ನು ಹಿಂತಿರುಗಿಸಿದ್ದು ಏಕೆ ಎಂದು ಛೇಡಿಸಿದರು. ಹಿಂದಿನ ಅವಧಿಯಲ್ಲಿ ಕ್ಷೇತ್ರಕ್ಕೆ 3200 ಕೋಟಿ ಅನುದಾನ ತಂದಿದ್ದೆ. ಈ ಬಾರಿ ಯಾವುದಕ್ಕೂ ಹಣ ಬರುತ್ತಿಲ್ಲಾ ಎಂದರಲ್ಲದೇ ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸದ ಗುತ್ತಿಗೆದಾರರ ಸಂಘದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.18 ಮಂದಿ ಶಾಸಕರನ್ನು ಸಸ್ಪೆಂಡ್ ಮಾಡಿದ ವಿಧಾನಸಭೆ ಸ್ಪೀಕರ್ ಈವರೆಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅತ್ಯಂತ ಸಜ್ಜನರು ನಿರ್ವಹಿಸಿದ್ದ ಸಭಾಧ್ಯಕ್ಷ ಸ್ಥಾನವನ್ನು ಹಾಲಿ ಸ್ಪೀಕರ್ ಪಕ್ಷದ ಕೈಗೊಂಬೆಯಂತೆ ವರ್ತಿಸುವ ಮೂಲಕ ಅಪವಿತ್ರಗೊಳಿಸಿದ್ದಾರೆ ಎಂದೂ ಟೀಕಿಸಿದರು.
ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಪ್ರಮುಖರಾದ ಸತೀಶ್ ಬೇಗುವಳ್ಳಿ, ಪ್ರಶಾಂತ್ ಕುಕ್ಕೆ, ಕವಿರಾಜ್ ಬೇಗುವಳ್ಳಿ, ಚಂದವಳ್ಳಿ ಸೋಮಶೇಕರ್, ಸಂತೋಷ್ ದೇವಾಡಿಗ, ತಳಲೆ ಪ್ರಸಾದ್ ಶೆಟ್ಟಿ, ಕೆ.ಶ್ರೀನಿವಾಸ್, ರಕ್ಷಿತ್ ಮೇಗರವಳ್ಳಿ, ರವೀಶ್ ಭಟ್, ಯಶಸ್ವಿ ಕಡ್ತೂರು ಇದ್ದರು.