ತಾಲೂಕು ಕೇಂದ್ರದಲ್ಲಿಲ್ಲ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ!

KannadaprabhaNewsNetwork |  
Published : Jul 30, 2024, 12:43 AM IST
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದ್ರೂ ಪಟ್ಟಣದಲ್ಲಿ ಇಲ್ಲ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ,ಪ.ಪೂ ಕಾಲೇಜು! | Kannada Prabha

ಸಾರಾಂಶ

ದೇವರಹಿಪ್ಪರಗಿ ತಾಲೂಕು ಕೇಂದ್ರವಾಗಿ ದಶಕಗಳೇ ಕಳೆದಿದ್ದರೂ ತಾಲೂಕು ಕೇಂದ್ರ ಸ್ಥಾನ ದೇವರಹಿಪ್ಪರಗಿಯಲ್ಲಿಯೇ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲ!ವಚನ ಸಾಹಿತ್ಯವನ್ನು ಸಂರಕ್ಷಿಸಿ ನಾಡಿಗೆ ಉಳಿಸಿಕೊಟ್ಟಂತ ಶರಣ ಮಡಿವಾಳ ಮಾಚಿದೇವರ ಹಾಗೂ ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾದ ಮೊಹರೆ ಹಣಮಂತ್ರಾಯರ ಜನ್ಮಸ್ಥಳವಾದ ದೇವರಹಿಪ್ಪರಗಿ ಪಟ್ಟಣದಲ್ಲಿ ಒಂದು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲವೇ ಇಲ್ಲ ಎನ್ನುವುದೇ ಆಶ್ಚರ್ಯ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ತಾಲೂಕು ಕೇಂದ್ರವಾಗಿ ದಶಕಗಳೇ ಕಳೆದಿದ್ದರೂ ತಾಲೂಕು ಕೇಂದ್ರ ಸ್ಥಾನ ದೇವರಹಿಪ್ಪರಗಿಯಲ್ಲಿಯೇ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲ!

ವಚನ ಸಾಹಿತ್ಯವನ್ನು ಸಂರಕ್ಷಿಸಿ ನಾಡಿಗೆ ಉಳಿಸಿಕೊಟ್ಟಂತ ಶರಣ ಮಡಿವಾಳ ಮಾಚಿದೇವರ ಹಾಗೂ ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾದ ಮೊಹರೆ ಹಣಮಂತ್ರಾಯರ ಜನ್ಮಸ್ಥಳವಾದ ದೇವರಹಿಪ್ಪರಗಿ ಪಟ್ಟಣದಲ್ಲಿ ಒಂದು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲವೇ ಇಲ್ಲ ಎನ್ನುವುದೇ ಆಶ್ಚರ್ಯ.ದೇವರಹಿಪ್ಪರಗಿ ಅಕ್ಕ-ಪಕ್ಕದ ಹಳ್ಳಿ ಹಾಗೂ ಪಟ್ಟಣದ ಬಡ ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿದ ಬಳಿಕ ಪ್ರೌಢಶಾಲೆ ಶಿಕ್ಷಣ ಪಡೆಯಬೇಕು. ಆದರೆ, ಇಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲದೇ ಖಾಸಗಿ ಪ್ರೌಢಶಾಲೆಗೆ ಹೋಗಬೇಕಾದ ಅನಿವಾರ್ಯತೆಯುಂಟಾಗಿದೆ. ಖಾಸಗಿ ಶಾಲೆಗಳು‌ ನಿಗದಿಪಡಿಸುವ ಶುಲ್ಕ ವಿಧಿಸಿ ಶಾಲೆಗೆ ಹೋಗಲೇ ಬೇಕಾಗಿದೆ. ಹೀಗಾಗಿ ಕನ್ನಡ ಮಾಧ್ಯಮದ ಪ್ರೌಢಶಾಲೆ ಸ್ಥಾಪಿಸಬೇಕು ಎನ್ನುವುದು ಶಿಕ್ಷಣ ಪ್ರೇಮಿಗಳ ಒಕ್ಕೊರಲಿನ ಬೇಡಿಕೆಯೂ ಹೌದು, ಆಗ್ರಹವೂ ಹೌದು.ಶಿಕ್ಷಣ ಪ್ರೇಮಿಗಳ ಬೇಡಿಕೆ ನಿನ್ನೆ, ಇಂದಿನದಲ್ಲ:

ಪಟ್ಟಣದಲ್ಲೊಂದು ಸರ್ಕಾರಿ ಪ್ರೌಢಶಾಲೆ ಬೇಕು ಎನ್ನುವ ಬೇಡಿಕೆ ಇಂದು, ನಿನ್ನೆದಲ್ಲ. ಇದು ಬಹಳ ವರ್ಷಗಳ ಬೇಡಿಕೆಯಾಗಿದ್ದು, ಇಲ್ಲಿಯವರಿಗೆ ಯಾವುದೇ ಬೇಡಿಕೆಯೂ ಪರಿಗಣನೆ ಆಗಿಲ್ಲ, ಈಡೇರಿಸುವ ಮಾತಂತೂ ದೂರದ್ದು. ಹಲವಾರು ಶಾಸಕರು ಈ ಕುರಿತು ಶಿಕ್ಷಣ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದ್ದರು. ಅವರಿಂದಲೂ ಈ ವರೆಗೆ ಕಾರ್ಯ ಸಾಧ್ಯವಾಗಲಿಲ್ಲ. ಗ್ರಾಮೀಣ ಭಾಗದಲ್ಲಿ ಹಲವು ಪ್ರೌಢಶಾಲೆಗಳಿದ್ದರೂ ಪಟ್ಟಣಕ್ಕೆ ಯಾರಿಂದಲೂ ಇಂದಿನ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತಿಲ್ಲ. ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಭಾಗದ ಶಾಸಕರು, ಸಂಸದರು ಹಾಗೂ ಉಸ್ತುವಾರಿ ಸಚಿವರು ಪ್ರಯತ್ನ ಮಾಡಿ ಇಲ್ಲೊಂದು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಮಂಜೂರು ಮಾಡಿಸುವ ಮೂಲಕ ಸ್ಥಳೀಯ ಬಡ ಹಾಗೂ ಹೆಣ್ಣು ಮಕ್ಕಳ ಪ್ರೌಢ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಿಕ್ಷಣ ಪ್ರೇಮಿಗಳ ಆಶಯ.ಸರ್ಕಾರ, ರಾಜಕೀಯ ನಾಯಕರ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಬಡ ಕುಟುಂಬದ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಾಲೆಗೆ ಹೋಗಬೇಕಾಗಿದ್ದು, ಖಾಸಗಿ ಶಾಲೆಯ ವೆಚ್ಚವು ಬಡಕುಟುಂಬದ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮಂಜೂರಾತಿಗೆ ವಿಶೇಷ ಕಾಳಜಿ ಹಾಗೂ ಇಚ್ಛಶಕ್ತಿ ತೊರಿಸುವರೇ ಕಾಯ್ದು ನೋಡಬೇಕಾಗಿದೆ.12 ಪ್ರೌಢಶಾಲೆಗಳಲ್ಲಿದ್ದರೂ ಖಾಸಗಿ, ಅನುದಾನಿತ ಪ್ರೌಢಶಾಲೆಗಳೇ!:

ಪಟ್ಟಣದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಗಳಲ್ಲಿ ಅನುದಾನಿತ ಪ್ರೌಢಶಾಲೆಗಳು-04, ಖಾಸಗಿ ಪ್ರೌಢಶಾಲೆಗಳು-08 ಒಟ್ಟು-12 ಪ್ರೌಢಶಾಲೆಗಳಿವೆ. ದೇವರಹಿಪ್ಪರಗಿ ಪಟ್ಟಣದಲ್ಲಿಯೇ ಒಟ್ಟು 5 ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ತಾಲೂಕು ಕೇಂದ್ರ ಸ್ಥಾನದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲ. ಹೀಗಾಗಿ ಪಟ್ಟಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಖಾಸಗಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಖಾಸಗಿ ಪ್ರೌಢಶಾಲೆಯೇ ಗತಿ ಎನ್ನುವಂತಾಗಿದೆ.

ದೇವರಹಿಪ್ಪರಗಿ ತಾಲೂಕಿನಲ್ಲಿ ಒಟ್ಟು 158 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದು, ಸರ್ಕಾರಿ-103, ಅನುದಾನಿತ-14, ಖಾಸಗಿ-40 ಹಾಗೂ ಇತರೆ-1 ಇದೆ. ಇದರಲ್ಲಿ 10ನೇ ತರಗತಿಯ ಕಲಿಸುವ 26 ಪ್ರೌಢಶಾಲೆಗಳಿದ್ದು, ತಾಲೂಕಿನಲ್ಲಿ ಒಟ್ಟು 24,805 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.ಕನ್ನಡ ಮಾಧ್ಯಮ ಸರ್ಕಾರಿ ಪ್ರೌಢಶಾಲೆಯ ಬೇಡಿಕೆ ಬಗ್ಗೆ ನನಗೆ ಈಗ ಗೊತ್ತಾಗಿದೆ. ಈ ಕುರಿತು ಅಧಿಕಾರಿಗಳ ಜೊತೆ ಮಾತನಾಡಿ ವರದಿ ತರಿಸಿದ ನಂತರ ಸರ್ಕಾರದ ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹಾಕಿ ಬಡ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪ್ರೌಢಶಾಲೆ ಪ್ರಾರಂಭಕ್ಕೆ ಪ್ರಯತ್ನಿಸುತ್ತೇನೆ.

-ರಾಜುಗೌಡ ಪಾಟೀಲ ಕುದುರಿಸಾಲವಾಡಗಿ , ಶಾಸಕರು ದೇವರಹಿಪ್ಪರಗಿ ಮತಕ್ಷೇತ್ರ.

ದೇವರಹಿಪ್ಪರಗಿ ಪಟ್ಟಣಕ್ಕೊಂದು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಬೇಕೆನ್ನುವುದು ಬಹು ವರ್ಷಗಳ ಬೇಡಿಕೆಯಾಗಿದೆ. ತಾಂತ್ರಿಕ ಸಮಸ್ಯೆಗಳ ಕುರಿತು ಶಾಸಕರ ಜೊತೆ ಮಾತನಾಡಿ ಈ ಬಾರಿ ಪ್ರೌಢಶಾಲೆ ಸ್ಥಾಪನೆಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

-ಆರೀಫ್ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಂದಗಿ.

ದೇವರಹಿಪ್ಪರಗಿ ಪಟ್ಟಣದಲ್ಲಿ ಅನೇಕ ವರ್ಷಗಳ ಹಿಂದೆಯೇ ಕನ್ನಡ ಮಾಧ್ಯಮದ ಪ್ರೌಢಶಾಲೆ ಪ್ರಾರಂಭವಾಗಬೇಕಿತ್ತು. ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾದ ಮೊಹರೆ ಹಣಮಂತ್ರಾಯರು ಹಾಗೂ ವಚನ ಸಾಹಿತ್ಯವನ್ನು ಸಂರಕ್ಷಿಸಿ ನಾಡಿಗೆ ಊಹಿಸಿಕೊಟ್ಟಂತಹ ಶರಣ ವೀರ ಗಣಾಚಾರಿ, ಮಡಿವಾಳ ಮಾಚಿದೇವರ ಜನಿಸಿದ ಊರಲ್ಲಿ ಕನ್ನಡ ಮಾಧ್ಯಮದ ಪ್ರೌಢಶಾಲೆ ಪ್ರಾರಂಭಿಸಿ ಕನ್ನಡದ ಉಳಿವಿಗೆ ಹಾಗೂ ಬಡ ಮಕ್ಕಳ ಏಳಿಗೆಗೆ ಕಾರಣವಾಗುವಂತಹ ಕೆಲಸವಾಗಲಿ. ಈ ಭಾಗದ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಸರ್ಕಾರದ ಗಮನ ಸೆಳೆದು ಕನ್ನಡ ಮಾಧ್ಯಮದ ಪ್ರೌಢಶಾಲೆ ಸ್ಥಾಪಿಸಬೇಕು.

ಜಿ.ಪಿ.ಬಿರಾದಾರ, ಕಸಾಪ ತಾಲೂಕು ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌