ಸರ್ಕಾರಿ ಭೂಮಿ ಅಕ್ರಮ ಪರಭಾರೆ: ಉನ್ನತ ಮಟ್ಟದ ತನಿಖೆಗಾಗಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಗ್ರಹ

KannadaprabhaNewsNetwork |  
Published : Jan 09, 2024, 02:00 AM IST
8ಕೆಎಂಎನ್ ಡಿ33ಡಾ.ಕೆ.ಅನ್ನದಾನಿ | Kannada Prabha

ಸಾರಾಂಶ

ಮಳವಳ್ಳಿ ತಾಲೂಕಿನಲ್ಲಿ 1999ರಿಂದಲೂ ನಡೆದಿರುವ ಭೂ ಅಕ್ರಮಗಳ ಸಮಗ್ರ ತನಿಖೆಗೆ ನಡೆಯಬೇಕು. ಅಕ್ರಮ ಖಾತೆ ಪ್ರಕರಣದಲ್ಲಿ ಬರೀ ಸಿಬ್ಬಂದಿ ಮಾತ್ರ ಭಾಗಿಯಾಗಿಲ್ಲ. ಬದಲಾಗಿ ದೊಡ್ಡ ದೊಡ್ಡ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆಗಳಿವೆ. ತಾವು ಧ್ವನಿ ಎತ್ತಿದ ಮೇಲೆ ತಾಲೂಕಿನಲ್ಲಿ 200 ಎಕರೆಯನ್ನು ಸರ್ಕಾರ ವಶಕ್ಕೆ ಪಡೆದಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನಲ್ಲಿ ನಡೆದಿರುವ ಸರ್ಕಾರಿ ಭೂಮಿ ಅಕ್ರಮಪರಭಾರೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಜನವರಿ 10 ರಂದು ಪಟ್ಟಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಜಂಟಿಯಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜಂಟಿ ಹೋರಾಟದ ಸಂಬಂಧ ಬಿಜೆಪಿ ಮುಖಂಡರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ತಾಲೂಕು ಕಚೇರಿ ಎದುರು ನಡೆಯುವ ಹೋರಾಟದಲ್ಲಿ ಭೂ ರಹಿತರು, ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ಅಕ್ರಮ ಭೂ ಪರಭಾರೆಯಲ್ಲಿ ನಮ್ಮದೇ ಪಕ್ಷದವರು ಭಾಗಿಯಾಗಿದ್ದರೂ ಸಹ ತಪ್ಪಿಸ್ಥರಿಗೆ ಶಿಕ್ಷೆಯಾಗಲಿ. ತನಿಖೆಯಲ್ಲಿ ಅದು ಕಂಡುಬಂದರೆ ಅವರ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೂರಾರು ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಪರಭಾರೆಯಾಗಿದೆ. ತಾಲೂಕು ಆಡಳಿತದಲ್ಲಿ ಸಾಕಷ್ಟು ಭ್ರಷ್ಟಚಾರ ನಡೆಯುತ್ತಿದೆ. ಸರ್ಕಾರಿ ಖರಾಬು, ಗೋಮಾಳ, ಬೀಳು ಸೇರಿದಂತೆ ಅನೇಕ ಸರ್ಕಾರಿ ಆಸ್ತಿಗಳನ್ನು ಕೆಲವು ಪ್ರಭಾವಿಗಳಿಗೆ ಆರ್ ಟಿಸಿ ಮತ್ತು ಎಂಆರ್ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ 1999ರಿಂದಲೂ ನಡೆದಿರುವ ಭೂ ಅಕ್ರಮಗಳ ಸಮಗ್ರ ತನಿಖೆಗೆ ನಡೆಯಬೇಕು. ಅಕ್ರಮ ಖಾತೆ ಪ್ರಕರಣದಲ್ಲಿ ಬರೀ ಸಿಬ್ಬಂದಿಗಳು ಮಾತ್ರ ಭಾಗಿಯಾಗಿಲ್ಲ. ಬದಲಾಗಿ ದೊಡ್ಡ ದೊಡ್ಡ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆಗಳಿವೆ. ತಾವು ಧ್ವನಿ ಎತ್ತಿದ ಮೇಲೆ ತಾಲೂಕಿನಲ್ಲಿ 200 ಎಕರೆಯನ್ನು ಸರ್ಕಾರ ವಶಕ್ಕೆ ಪಡೆದಿದೆ ಎಂದು ಹೇಳಿದರು.

ತಾಲೂಕಿನ ಭೂರಹಿತ ಕೃಷಿ ಕಾರ್ಮಿಕರು, ಬಡರೈತರು ಫಾರಂ ನಂ.53, 57ರಲ್ಲಿ ಅರ್ಜಿ ಸಲ್ಲಿಸಿ ಭೂಮಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಇಂಥ ಅಕ್ರಮ ಖಾತೆಗಳು ನಡೆದಿರುವುದು ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಅಕ್ರಮ ಖಾತೆ ಪ್ರಕರಣದಲ್ಲಿ ಬರೀ ಸಿಬ್ಬಂದಿಗಳು ಮಾತ್ರ ಭಾಗಿಯಾಗಿಲ್ಲ, ಬದಲಾಗಿ ದೊಡ್ಡ ದೊಡ್ಡ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆಗಳಿವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನನ್ನ ಅವಧಿಯಲ್ಲಿ ಗಾಂಜಾ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಅನೇಕ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಆರೋಪಿಸುತ್ತಿದ್ದ ಶಾಸಕರು ಒಂದೇ ಒಂದು ಆ ತರದ ಪ್ರಕರಣಗಳು ನಡೆದಿದ್ದರೆ ಸಾಕ್ಷಿ ನೀಡಲಿ ಎಂದು ಸವಾಲು ಹಾಕಿದರು.

ನಿಮ್ಮ ಅವಧಿಯಲ್ಲಿ ಎಷ್ಟು ಜೂಜು, ಗಾಂಜಾ ಮತ್ತು ಅಕ್ರಮ ಮದ್ಯ ಮಾರಾಟ, ವೇಶ್ಯಾವಾಟಿಕೆ ಪ್ರಕರಣಗಳು ಬೆಳಕಿಗೆ ಬಂದಿದೆ ಎನ್ನುವುದು ಕಾಣುತ್ತಿಲ್ಲವೇ. ನಿಮ್ಮ ಸರ್ಕಾರ ಬಂದ ಏಳೆಂಟು ತಿಂಗಳಲ್ಲಿ ಅಕ್ರಮ ಖಾತೆಗಳ ಪ್ರಕರಣ ಬೆಳಕಿಗೆ ಬಂದಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎನ್.ಕೃಷ್ಣ ಮಾತನಾಡಿ, ಈ‌ ಹೋರಾಟದ ಬಿಜೆಪಿ ಸಂಪೂರ್ಣ ಭಾಗಿಯಾಗಲಿದೆ ಎಂದು ತಿಳಿಸಿದರು.

ಈ ವೇಳೆ ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಬಿ.ರವಿ ಕಂಸಾಗರ, ಪುರಸಭೆ ಸದಸ್ಯರಾದ ರವಿ, ಸಿದ್ದರಾಜು, ಜಿಪಂ ಮಾಜಿ ಸದಸ್ಯ ಹನುಮಂತು, ನಾಗೇಂದ್ರ, ಚಿಕ್ಕಣ್ಣ, ಪ್ರಸಾದ್, ಕಾಂತರಾಜು, ನಾಗೇಶ್ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ