ಸರ್ಕಾರದಿಂದ ದಲಿತರ ಹಣ ದುರ್ಬಳಕೆ: ಬಿ.ವೈ.ವಿಜಯೇಂದ್ರ ಆರೋಪ

KannadaprabhaNewsNetwork |  
Published : Jul 29, 2025, 01:01 AM ISTUpdated : Jul 29, 2025, 03:30 AM IST
Siddaramaiah Vijayendra

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕಳೆದ ಎರಡೂವರೆ ವರ್ಷಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

 ಬೆಂಗಳೂರು :  ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕಳೆದ ಎರಡೂವರೆ ವರ್ಷಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ರಾಜ್ಯದಲ್ಲಿ ಶೋಷಿತ ಸಮುದಾಯವನ್ನು ಮತಬ್ಯಾಂಕಾಗಿ ಬಳಸಿಕೊಳ್ಳುತ್ತಿದೆ. ಆ ಸಮುದಾಯಗಳಿಗೆ ಹಿಂದಿನಿಂದಲೂ ವಂಚಿಸುತ್ತಾ ಬಂದಿದೆ ಎಂದು ಕಿಡಿಕಾರಿದರು.

ಶೋಷಿತ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವಿಚಾರಗಳಿಗೆ ಬಳಸಿಕೊಳ್ಳಬೇಕಾದ ಅನುದಾನವನ್ನು ಗ್ಯಾರಂಟಿಗಳಿಗೆ ವರ್ಗಾಯಿಸಿ ಆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಇದರ ವಿರುದ್ಧ ನಿರಂತರ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತಾ ಬಂದಿದೆ ಎಂದರು.

11,896 ಕೋಟಿ ರು. ಅನುದಾನ ವರ್ಗಾವಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೂ ಶೋಷಿತ ಸಮುದಾಯಗಳನ್ನು ವಂಚಿಸುವ ಕಾರ್ಯ ಮುಂದುವರೆಸಿದ್ದಾರೆ. 2025-26ರಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 11,896 ಕೋಟಿ ರು. ಅನುದಾನವನ್ನು ಮತ್ತೊಮ್ಮೆ ಇತರ ಕಾರ್ಯಕ್ರಮಗಳಿಗೆ ವರ್ಗಾಯಿಸಿದ್ದಾರೆ. ಈ ಮೂಲಕ ಸಮುದಾಯಗಳಿಗೆ ವಂಚಿಸುತ್ತಿದ್ದಾರೆ. ಈ ಕುರಿತು ಸದನದಲ್ಲಿ ಚರ್ಚೆ ಮಾಡಲಿದ್ದೇವೆ. ಸರ್ಕಾರದ ಕಿವಿ ಹಿಂಡುತ್ತೇವೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ತಲುಪಬೇಕು ಹಾಗೂ ನ್ಯಾಯ ಸಿಗಬೇಕು ಎಂದು ಬಿಜೆಪಿ ನಂಬಿದೆ. ಈ ನಿಟ್ಟಿನಲ್ಲಿ ಬಿಜೆಪಿ ಬಲವಾದ ಹೋರಾಟ ಸಂಘಟಿಸಲಿದೆ. ಬಿಜೆಪಿ ಶೋಷಿತ ಸಮುದಾಯಗಳ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹಿಂದುಳಿದ ವರ್ಗ, ಸಮುದಾಯದ ಕುರಿತು ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಮುಖಂಡರು ಅಹಿಂದವನ್ನು ಮುಂದಿಟ್ಟುಕೊಂಡು ರಾಜ್ಯದ ಜನರ ವಿಶ್ವಾಸ ಗೆದ್ದು ಅಧಿಕಾರಕ್ಕೆ ಬಂದಿದ್ದಾರೆ. ಅದರ ನೇತೃತ್ವ ಸಿದ್ದರಾಮಯ್ಯ ವಹಿಸಿದ್ದಾರೆ. ಈಗ ಅವರ ನೇತೃತ್ವದಲ್ಲೇ ಸಮುದಾಯಗಳಿಗೆ ಅನ್ಯಾಯ ಆಗುತ್ತಿರುವುದರಿಂದ ಅದನ್ನು ನಾವು ಪ್ರಶ್ನಿಸುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''