ರೈತರ ಬೇಡಿಕೆ ಈಡೇರಿಕೆಗೆ ಸರ್ಕಾರ ಮುಂದಾಗಬೇಕು

KannadaprabhaNewsNetwork |  
Published : Nov 08, 2026, 02:15 AM IST
ಪೊಟೋ- ಲಕ್ಷ್ಮೆಶ್ವರ ತಾಲೂಕಿನ ವಿವಿಧ ರೈತಪರ ಹೋರಾಟಗಾರರು ಬರಗಾಲದ ಹಿನ್ನಲೆಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೆರವಣಿಗೆ ನಡೆಸಿದರು.  | Kannada Prabha

ಸಾರಾಂಶ

ಈ ವೇಳೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ, ಮಧ್ಯ ಕರ್ನಾಟಕದ ಒಣ ಬೇಸಾಯದ ರೈತರ ಸಂಕಷ್ಟಕ್ಕೂ ಸ್ಪಂದಿಸಬೇಕು.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಈ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವು, ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಈ ವೇಳೆ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ, ರೈತರನ್ನು ಒಗ್ಗೂಡಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುವುದರ ಜತೆಗೆ ಲಕ್ಷ್ಮೇಶ್ವರ ಬಂದ್ ಮಾಡಿ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಮುಖಂಡ ಹಾಗೂ ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಎಚ್ಚರಿಸಿದರು.

ಅವರು ಶನಿವಾರ ಪಟ್ಟಣದಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ, ವಿವಿಧ ರೈತರ ಸಂಘಟನೆಗಳ ಸಹಯೋಗದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ, ಮಧ್ಯ ಕರ್ನಾಟಕದ ಒಣ ಬೇಸಾಯದ ರೈತರ ಸಂಕಷ್ಟಕ್ಕೂ ಸ್ಪಂದಿಸಬೇಕು. ತುರ್ತು ಬೆಳೆ ಪರಿಹಾರ ಹೆಚ್ಚಳ, ೨೦೨೫-೨೬ನೇ ಸಾಲಿನ ಮೆಣಸಿನಕಾಯಿ ಬೆಳೆ ವಿಮೆ, ೨೦೨೬-೨೭ನೇ ಸಾಲಿನ ಮುಂಗಾರು ಬೆಳೆಗಳಿಗೆ ಮಧ್ಯಂತರ ವಿಮೆ ಪರಿಹಾರ, ಸಂಪೂರ್ಣ ಕೃಷಿ ಸಾಲ ಮನ್ನಾ, ಬ್ಯಾಂಕ್ ಸಾಲ ವಸೂಲಾತಿ ಸ್ಥಗಿತ, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಗೋಶಾಲೆಗಳ ಆರಂಭ ಹಾಗೂ ವಿದ್ಯುತ್ ಸಂಪರ್ಕ ಕಡಿತ ನಿಲ್ಲಿಸಬೇಕು. ಈ ವರ್ಷ ಮುಂಗಾರು, ಹಿಂಗಾರು ಮಳೆಯಿಲ್ಲದೇ ಜನ-ಜಾನುವಾರುಗಳಿಗೆ ಆಹಾರ, ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ದೂರದೃಷ್ಟಿಯ ಚಿಂತನೆ, ಯೋಜನೆಗಳ ಬಗ್ಗೆ ಅರಿವಿಲ್ಲ. ತಾಲೂಕಿನ ಕೆರೆಗಳು, ಬೋರ್‌ ವೆಲ್‌ಗಳು ಬತ್ತುತ್ತಿವೆ. ಕುಡಿಯುವ ನೀರಿನ ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಗ್ರಹಣ ಹಿಡಿದಿವೆ ಎಂದು ಆರೋಪಿಸಿದ ಅವರು ಬರ ಘೋಷಣೆ ಕೇವಲ ಕಾಗದಕ್ಕೆ ಸೀಮಿತವಾಗದೆ ಪರಿಹಾರ ಕಾರ್ಯಗಳು ತಕ್ಷಣ ರೈತರ ಕೈ ಸೇರಬೇಕು. ನ ೩೦ರೊಳಗೆ ಬರ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಲಕ್ಷ್ಮೇಶ್ವರ ಬಂದ್ ಹಾಗೂ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ರೂಪಿಸಲಾಗುವುದು ಎಂದರು.

ಕೃಷಿಕ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ ಮಾತನಾಡಿ ರೈತರು ಭಿಕ್ಷುಕರಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಬರ ಪರಿಹಾರ ಒದಗಿಸುವ ಜವಾಬ್ದಾರಿ ಹೊಂದಿವೆ. ವಿರೋಧ ಪಕ್ಷದ ಸಂಸದರು, ಶಾಸಕರು ಕೂಡ ರೈತರ ಪರವಾಗಿ ಧ್ವನಿ ಎತ್ತಬೇಕು. ಜಿಲ್ಲಾಧಿಕಾರಿಗಳು ವಿಪತ್ತು ನಿರ್ವಹಣಾ ಕ್ರಮಗಳನ್ನು ತ್ವರಿತಗೊಳಿಸಿ ನ. ೩೦ರೊಳಗೆ ಪರಿಹಾರೋಪಾಯ ಕಲ್ಪಿಸಬೇಕು. ರೈತರ ಒಗ್ಗಟ್ಟಿನ ಹೋರಾಟಕ್ಕೆ ಸರ್ಕಾರ ಮಣಿಯಲೇಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರೈತರ ನ್ಯಾಯಯುತ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಈ ವೇಳೆ ರೈತ ಮುಖಂಡ ಹೊನ್ನಪ್ಪ ವಡ್ಡರ, ತಾಲೂಕಾ ಕೃಷಿಕ ಸಮಾಜ ನವದೆಹಲಿ ಸಂಘದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ, ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ್ರ. ರೈತ ಮುಖಂಡ ನಾಗರಾಜ ಚಿಂಚಲಿ, ಬಸವರಾಜ ಹಿರೇಮನಿ ಮಾತನಾಡಿದರು

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕಿಸಾನ. ಜಾಗೃತಿ ಸಂಘ ಜಿಲ್ಲಾ ಗೌರವಾಧ್ಯಕ್ಷ ಟಾಕಪ್ಪ ಸಾತಪುತೆ, ನಿಂಬಣ್ಣ ಮಡಿವಾಳರ, ಚನ್ನಬಸನಗೌಡ ಉದ್ದನಗೌಡ್ರ, ಪ್ರಕಾಶ ಗುತ್ತಲ, ಶಿವನಗೌಡ್ರ ಆಡರಕಟ್ಟಿ, ಮಲ್ಲಿಕಾರ್ಜುನ ಅಂಕಲಿ, ಶಿವಣ್ಣ ಬನ್ನಿಮಟ್ಟಿ, ಈರಪ್ಪ ಮಾಗಡಿ, ಬಸವರಾಜ ಕರೆಯತ್ತಿನ, ಜುಂಜನಗೌಡ ನರಸಮ್ಮನವರ, ಬಸವರಾಜ ಪ್ಯಾಟಿ, ಶಿವಾನಂದ ಬನ್ನಿಮಟ್ಟಿ, ಶಂಕರ ಬ್ಯಾಡಗಿ, ನಾಮದೇವ ಮಾಂಡ್ರೆ, ಚಂದ್ರು ಮಾಗಡಿ, ಬಸವರಾಜ ಜಾಲಗಾರ, ಸಿದ್ದು ಪೂಜಾರ, ಮುತ್ತಣ್ಣ ನೀರಲಗಿ, ನಾಗಪ್ಪ ಓಂಕಾರಿ, ಗುರಪ್ಪ ಮುಳಗುಂದ, ಮಂಜುನಾಥ ಮುಳಗುಂದ ಮಹಾಂತೇಶ ಉಮಚಗಿ, ಪವನ ಬಂಕಾಪುರ, ಲಕ್ಷ್ಮವ್ವ ಕರೆಯತ್ತಿನ, ನೀಲಮ್ಮ ಕೊಂಗಿ, ಶಾಂತವ್ವ ಹಾಲನಗೌಡ್ರ ಸೇರಿದಂತೆ ಲಕ್ಷ್ಮೇಶ್ವರ ಹಾಗೂ ಸುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ಪಟ್ಟಣದ ಶಿಗ್ಲಿ ಕ್ರಾಸ್‌ ಬಳಿಯಿಂದ ಹತ್ತಾರು ಎತ್ತು ಚಕ್ಕಡಿ, ಹಲಗೆ ಸದ್ದಿನೊಂದಿಗೆ ಪ್ರಾರಂಭವಾದ ಮೆರವಣಿಗೆ ಮುಖ್ಯ ಬಜಾರ್ ರಸ್ತೆಯ ಮೂಲಕ ತಹಸೀಲ್ದಾರರ ಕಚೇರಿವರೆಗೆ ಸಾಗಿ ಅಲ್ಲಿ ಸಭೆಯಾಗಿ ಮಾರ್ಪಟ್ಟಿತು. ಮೆರವಣಿಗೆಯಲ್ಲಿ ರೈತರ ಬೇಡಿಕೆ ಈಡೇರಿಕೆಗಳ ಘೋಷಣೆ ಮೊಳಗಿತು. ಮನವಿ ಸ್ವೀಕರಿಸಿದ ತಹಸೀಲ್ದಾರ ಧನಂಜಯ ಎಂ, ಅವರು ರೈತರ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡಲಾಗುತ್ತದೆ. ಅಲ್ಲದೇ ನ.೧೧ ರಂದು ಮಧ್ಯಾಹ್ನ ೩ಕ್ಕೆ ತಹಸೀಲ್ದಾರ ಕಚೇರಿಯಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ರೈತರ ಸಭೆ ಮಾಡಲಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ