ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸ್ತುತ ಪ್ರಪಂಚದಲ್ಲಿ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಬಗ್ಗೆ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಯುಷ್ ಇಲಾಖೆ ಆಯುಕ್ತ ಡಾ. ಶ್ರೀನಿವಾಸಲು ತಿಳಿಸಿದರು.ನಗರದ ಕಲಾಮಂದಿರದಲ್ಲಿ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯು ಶನಿವಾರ ಆಯೋಜಿಸಿದ್ದ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ಬಗ್ಗೆ ಜನರಿಗೆ ವಿಶ್ವಾಸ ಮತ್ತು ಗೌರವ ತರುವಂತಹ ಕೆಲಸಗಳನ್ನು ವಿದ್ಯಾರ್ಥಿಗಳು ಮಾಡಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.ಇಂದು ಆರೋಗ್ಯವಿದ್ದರಷ್ಟೇ ಉತ್ತಮ ಜೀವನ ನಡೆಸಲು ಸಾಧ್ಯ. ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚು ಒತ್ತು ನೀಡಿ ಉತ್ತಮ ವೈದ್ಯರಾಗಲು ಪ್ರಯತ್ನಿಸಬೇಕು. ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ನಿಮ್ಮಲ್ಲಿರುವ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಉತ್ತಮ ಸಂಸ್ಕಾರ, ಕರುಣೆ, ಶಿಸ್ತನ್ನು ಅಳವಡಿಸಿಕೊಂಡು ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಬೇಕು ಎಂದರು.ಕೇಂದ್ರ ಆಯುಷ್ ಸಚಿವಾಲಯದ ಸಿಸಿಆರ್ ವೈಎನ್ ನಿರ್ದೇಶಕ ಡಾ. ರಾಘವೇಂದ್ರ ರಾವ್ ಮಾತನಾಡಿ, ವೈದ್ಯ ವೃತ್ತಿ ಪವಿತ್ರವಾಗಿದ್ದು, ತುಂಬು ಹೃದಯದಿಂದ ರೋಗಿಗಳ ಸೇವೆ ಮಾಡಬೇಕು. ಅಲೋಪತಿಗೆ 200 ವರ್ಷಗಳ ಇತಿಹಾಸವಿದ್ದರೆ ಪ್ರಕೃತಿ ಚಿಕಿತ್ಸೆಗೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ಜೊತೆಗೆ ಇಂದು ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ನಾನಾ ವೈದ್ಯಕೀಯ ಪದ್ಧತಿಗಳ ಪ್ರಯೋಜನ ರೋಗಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ವೈದ್ಯರು ಉತ್ತಮ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು. ಪ್ರಕೃತಿ ಚಿಕಿತ್ಸೆ ಬಗ್ಗೆ ಆಳವಾದ ಜ್ಞಾನವನ್ನು ಗಳಿಸಬೇಕು. ರೋಗಿಗಳಿಗೆ ಆಪ್ತ ಸಮಾಲೋಚನೆ ಮೂಲಕ ಪ್ರಾಚೀನ ಪದ್ಧತಿ ಬಗ್ಗೆ ವಿಶ್ವಾಸ ಬರುವಂತೆ ಮಾಡಬೇಕು. ಸದಾ ನಗು ಮೊಗದೊಂದಿಗೆ ಮಾನವೀಯತೆಯಿಂದ ಸೇವೆ ನೀಡಬೇಕು ಎಂದು ಅವರು ತಿಳಿಸಿದರು.ಇದೇ ವೇಳೆ 31 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು. ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಪ್ರಾಂಶುಪಾಲ ಡಾ.ಕೆ.ಎಸ್. ರಾಧಾಕೃಷ್ಣ ರಾಮರಾವ್, ಸಹಾಯಕ ಪ್ರಾಧ್ಯಾಪಕರಾದ ಅನಿತಾ, ಕೆಂಪೇಗೌಡ ಮೊದಲಾದವರು ಇದ್ದರು.