ಕನ್ನಡಪ್ರಭ ವಾರ್ತೆ ಮೇಲುಕೋಟೆ
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಜಮೀನು ವ್ಯಾಜ್ಯಗಳಿಗೆ ಸಂಬಂದಿಸಿದ ಹಳೇ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡಿ ಎಂದು ನಮ್ಮ ಸರ್ಕಾರ ಸೂಚನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಮೇಲುಕೋಟೆಯಲ್ಲಿ ನೂತನ ನಾಡ ಕಚೇರಿ ಕಟ್ಟಡವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯರೊಂದಿಗೆ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಬಾಕಿ ಇದ್ದ 10 ಸಾವಿರ ಪ್ರಕರಣಗಳನ್ನು ಒಂದೇ ವರ್ಷದಲ್ಲಿ ಇತ್ಯರ್ಥಗೊಳಿಸಲಾಗಿದೆ. ರಾಜ್ಯಾದ್ಯಂತ ಈ ಆಂದೋಲನ ಮುಂದುವರೆಯುತ್ತದೆ ಎಂದರು.
ನಮ್ಮದು ರೈತಪರ ಸರ್ಕಾರ, ರೈತರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಜಿಲ್ಲೆಯಲ್ಲಿ ಜಮೀನು ಸರ್ವೇಗೆ ಸಂಬಂಧಿಸಿದಂತೆ ವರ್ಷಕ್ಕೆ ನೂರು 1 ರಿಂದ 5 ಸೇವೆ ಮಾಡುವುದು ಕಷ್ಟವಾಗಿತ್ತು. ಆದರೆ, ಕಂದಾಯ ಇಲಾಖೆ ಸಚಿವರು ಮತ್ತು ಜಿಲ್ಲಾಡಳಿತದ ಸಹಕಾರದಿಂದ ಒಂದೇ ವಾರದಲ್ಲಿ 270ಕ್ಕೂ ಹೆಚ್ಚು ಒನ್ ಟು ಫೈ ಇತ್ಯರ್ಥ ಮಾಡಿ ಸ್ಕ್ಯಚ್ ಪೋಡಿ ಆಖಾರಬಂದ್ ಎಲ್ಲವನ್ನೂ ಒಂದೇ ದಾಖಲೆಯಲ್ಲಿ ನೀಡುತ್ತಿದ್ದೇವೆ ಎಂದರು.ಜಿಲ್ಲೆಯ ಜನತೆ ಸರ್ಕಾರದೊಂದಿಗೆ ಸಹಕರಿಸಿದರೆ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ವೇಗವಾಗಿ ನಡೆಯುತ್ತದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಈ ಹಿಂದೆಯೇ ನಿರ್ಮಾಣಗೊಂಡ ನಾಡ ಕಚೇರಿಯನ್ನು ಈಗ ಉದ್ಘಾಟಿಸುವ ಕಾಲ ಕೂಡಿ ಬಂದಿದೆ. ಮೇಲುಕೋಟೆ ಸುತ್ತಮುತ್ತಲಿನ ಗ್ರಾಮಸ್ಥರು ರೈತರು ಗ್ರಾಮ ಸೇವೆಗಳಿಗಾಗಿ ಪಾಂಡವಪುರಕ್ಕೆ ಹೋಗುವ ಅವಶ್ಯಕತೆ ಇಲ್ಲ ಎಂದರು.ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮ ಸೇವೆಗಳನ್ನು ನಾಡ ಕಚೇರಿ ಮೂಲಕ ಪಡೆದುಕೊಳ್ಳಬಹುದು. ರೈತರು ಏನೇ ಸಮಸ್ಯೆ ಬಂದರೂ ನನ್ನನ್ನು ಸಂಪರ್ಕಿಸಬಹುದು. ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂದರು.
ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್, ಪಾಂಡವಪುರ ತಹಸೀಲ್ದಾರ್ ಸಂತೋಷ್, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಗ್ರಾಪಂ ಸದಸ್ಯೆ ಭಾಗ್ಯಮ್ಮ ಕಾಡೇನಹಳ್ಳಿ ರಾಮಚಂದ್ರು, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.