ಜೀರೋ ಹೇಳಿಕೆಗೆ ಆಡಳಿತ, ವಿಪಕ್ಷ ಸದಸ್ಯರ ಜಟಾಪಟಿ!

KannadaprabhaNewsNetwork |  
Published : Nov 27, 2025, 02:15 AM IST
465 | Kannada Prabha

ಸಾರಾಂಶ

ಸಣ್ಣ ಸಣ್ಣ ಪಾಲಿಕೆಗಳಲ್ಲೂ ಎಲ್‌ಇಡಿ ಬಲ್ಬ ಅಳವಡಿಸಲಾಗಿದೆ. ಆದರೆ 2019ರಲ್ಲೇ ಪಾಲಿಕೆಯಲ್ಲಿ ಯೋಜನೆ ಪ್ರಸ್ತಾಪವಿದ್ದರೂ ಈ ವರೆಗೂ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಅಳವಡಿಸಿಲ್ಲ.

ಹುಬ್ಬಳ್ಳಿ:

ಜಿಲ್ಲಾ ಉಸ್ತುವಾರಿ ಸಚಿವರು ಜೀರೋ ಎಂಬ ಹೇಳಿಕೆ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಗಿ ರಾಜಕೀಯ ಕೇಸರೆಚಾಟವೂ ನಡೆಯಿತು. ಕೊನೆಗೆ ಮೇಯರ್‌ ಜ್ಯೋತಿ ಪಾಟೀಲ, ಅಭಿವೃದ್ಧಿ ಪರವಾಗಿ ಮಾತನಾಡಿ. ಯಾವುದೇ ಪಕ್ಷ ಅಥವಾ ವ್ಯಕ್ತಿಗಳ ಬಗ್ಗೆ ಚರ್ಚೆ ಬೇಡ ಎಂದು ತಿಳಿಗೊಳಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಸಭಾನಾಯಕ ಈರೇಶ ಅಂಚಟಗೇರಿ, ಸಣ್ಣ ಸಣ್ಣ ಪಾಲಿಕೆಗಳಲ್ಲೂ ಎಲ್‌ಇಡಿ ಬಲ್ಬ ಅಳವಡಿಸಲಾಗಿದೆ. ಆದರೆ 2019ರಲ್ಲೇ ಪಾಲಿಕೆಯಲ್ಲಿ ಯೋಜನೆ ಪ್ರಸ್ತಾಪವಿದ್ದರೂ ಈ ವರೆಗೂ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಅಳವಡಿಸಿಲ್ಲ ಎಂದರು. ಈ ಕುರಿತು ಉಸ್ತುವಾರಿ ಸಚಿವರ ಬಳಿ ನಿಯೋಗ ತೆಗೆದುಕೊಂಡು ಹೋಗುವ ಕುರಿತು ಚರ್ಚಿಸಲಾಯಿತು. ಆಗ ಅಂಚಟಗೇರಿ, ಈ ಕುರಿತು ಸಚಿವರಿಗೆ ಸಾಕಷ್ಟು ಮನವಿ ಸಲ್ಲಿಸಲಾಗಿದೆ. ಅವರಿಂದ ಸಭೆ ನಡೆಸಲು ಆಗುತ್ತಿಲ್ಲ. ಅವರು ಜೀರೋ ಎಂದರು.

ಜೀರೋ ಹೇಳಿಕೆಯಿಂದ ಕುಪಿತಗೊಂಡ ವಿಪಕ್ಷ ಸದಸ್ಯರು ಕೆರಳಿದರು. ಈ ಜೀರೋ ಎನ್ನಬೇಡಿ. ನಮ್ಮ ಸಚಿವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಿಮ್ಮ ಕೇಂದ್ರ ಸಚಿವರೇ ಜೀರೋ ಎಂದು ವಿಪಕ್ಷ ನಾಯಕರಾದ ಇಮ್ರಾನ್‌ ಎಲಿಗಾರ, ಸುವರ್ಣ ಕಲ್ಲಕುಂಟ್ಲಾ ಸೇರಿದಂತೆ ಹಲವರು ಆರೋಪಿಸಿದರು. ಆಗ ರಾಮಪ್ಪ ಬಡಿಗೇರ, ನಾನು ಮೇಯರ್‌ ಇದ್ದಾಗ ಸಿಎಂ, ಸಚಿವರು ಸೇರಿದಂತೆ ಶಾಸಕರಿಗೆ ಈ ಕುರಿತು ಎಷ್ಟು ಮನವಿ ಸಲ್ಲಿಸಿದ್ದೇನೆ ಎಂಬ ಲೆಕ್ಕ ನೀಡಿದರು. ಆಗ ಮತ್ತಷ್ಟು ಜಟಾಪಟಿ ನಡೆಯಿತು.

ಕೊನೆಗೆ ಮೇಯರ್‌, ಇಲ್ಲಿ ಅಭಿವೃದ್ಧಿ ಪರವಾಗಿ ಚರ್ಚಿಸಿ. ರಾಜಕೀಯ ಪಕ್ಷ ಅಥವಾ ನಾಯಕರ ಬಗ್ಗೆ ವೈಯಕ್ತಿಕವಾಗಿ ಹೇಳಿಕೆ ನೀಡಬೇಡಿ ಎಂದು ಹೇಳುವ ಮೂಲಕ ರಾಜಕೀಯ ಕೇಸರೆಚಾಟಕ್ಕೆ ಬ್ರೇಕ್‌ ಹಾಕಿದರು.

ತಿಂಗಳಲ್ಲಿ ಕೆಲಸ:

ಒಂದು ತಿಂಗಳೊಳಗೆ ಎಲ್‌ಇಡಿ ಬಲ್ಬ್‌ ಅಳವಡಿಸುವ ಕೆಲಸ ಶುರುವಾಗಬೇಕು. ಇದಕ್ಕೆ ತಪ್ಪಿದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಈ ನಿಟ್ಟಿನಲ್ಲಿ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಮೇಯರ್‌ ಸೂಚಿಸಿದರು.

ಜತೆಗೆ ಮುಂದಿನ ವಾರದೊಳಗೆ ವಿಪಕ್ಷ ನಾಯಕರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸಿ ಸಭೆ ನಿಗದಿಪಡಿಸಲಿ. ಸರ್ವಪಕ್ಷದ ಸದಸ್ಯರ ನಿಯೋಗ ತೆಗೆದುಕೊಂಡು ಹೋಗಿ ಸಚಿವರೊಂದಿಗೆ ಎಲ್‌ಇಡಿ ಬಲ್ಬ್‌ ಸೇರಿದಂತೆ ವಿವಿಧ ಅಭಿವೃದ್ಧಿ ವಿಷಯ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ಸದಸ್ಯರಿಗೆ ₹ 35 ಲಕ್ಷ ಅನುದಾನ

ಸದಸ್ಯರಿಗೆ ಪಾಲಿಕೆ ವತಿಯಿಂದ ಸಿವಿಲ್ ಕಾಮಗಾರಿಗೆ ₹ 25 ಲಕ್ಷ ಹಾಗೂ ಎಲೆಕ್ಟ್ರಿಕ್ ವರ್ಕ್‌ಗಳಿಗೆ ₹ 10 ಲಕ್ಷ ಅನುದಾನ ನೀಡಲಾಗುವುದು ಎಂದು ಮೇಯರ್‌ ಘೋಷಿಸಿದರು. ಆಗ ವಿಪಕ್ಷ ನಾಯಕರು ₹ 50 ಲಕ್ಷ ನಿಗದಿ ಮಾಡುವಂತೆ ಆಗ್ರಹಿಸಿದರು. ಆಗ ಮೇಯರ್‌, ಘೋಷಿಸಿರುವ ಅನುದಾನದಲ್ಲಿ ಕಾಮಗಾರಿ ಆರಂಭಿಸಿ ಎಂದು ಹೇಳಿದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ