ಪೊಲೀಸ್‌ ಕಮಿಷನರೇಟ್‌ ವಿರುದ್ಧ ಆಡಳಿತ-ವಿಪಕ್ಷಗಳ ಸಮರ!

KannadaprabhaNewsNetwork |  
Published : May 08, 2026, 02:30 AM IST
ಫೋಟೋವಿವರ- (7ಎಚ್‌ಪಿಟಿ2)ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪಿಎಂ ಸ್ವನಿಧಿ ಯೋಜನೆಯಡಿ ಸ್ಟ್ರೀಟ್ ಫುಡ್ ಹಬ್ ಸ್ಥಾಪನೆಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿದರು | Kannada Prabha

ಸಾರಾಂಶ

ಪೊಲೀಸ್‌ ಕಮಿಷನರೇಟ್‌ನಲ್ಲಿ ಕಮಿಷನರ್‌, ಡಿಸಿಪಿ, ಎಸಿಪಿಯಂತಹ ಅಧಿಕಾರಿಗಳು ಎರಡು ವರ್ಷಕ್ಕೊಮ್ಮೆ ವರ್ಗ ಆಗಿಯೇ ಆಗುತ್ತಾರೆ. ಆದರೆ, ಕಮಿಷನರೇಟ್‌ ಹಾಗೂ ಠಾಣೆಗಳಲ್ಲಿ ದೊಡ್ಡ ದೊಡ್ಡ ತಿಮಿಂಗಲುಗಳಿವೆ. ದಶಕಗಳಿಂದ ಅಲ್ಲೇ ಠಿಕಾಣಿ ಹೂಡಿವೆ. ಅವುಗಳನ್ನು ಬದಲಾಯಿಸಬೇಕು ಎಂಬ ಆಗ್ರಹವೂ ಕೆಳಹಂತದ ಅಧಿಕಾರಿಗಳ ಕುರಿತಂತೆ ಕೇಳಿ ಬರುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಆಡಳಿತ ಪಕ್ಷದ ಶಾಸಕರೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್‌ ಅಧಿಕಾರಿಗಳನ್ನು ವರ್ಗಾಯಿಸಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ!

ಹುಬ್ಬಳ್ಳಿ-ಧಾರವಾಡ ಇತಿಹಾಸದಲ್ಲೇ ಇಂಥ ಘಟನೆ ನಡೆದಿರುವುದು ಇದೇ ಮೊದಲು. ಯಾವುದೇ ಸರ್ಕಾರವಿರಲಿ ವಿರೋಧ ಪಕ್ಷದ ಶಾಸಕರು, ಸಂಸದರು, ಅಲ್ಲಿನ ಅವ್ಯವಸ್ಥೆ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಬಗ್ಗೆ ಕಿಡಿಕಾರುವುದು; ಆರೋಪಿಸುವುದು ಮಾಮೂಲಿ. ಆದರೆ, ಆಡಳಿತ ಪಕ್ಷದ ಶಾಸಕರೊಬ್ಬರು ಹೀಗೆ ಆರೋಪಿಸುವ ಜತೆಗೆ ಅಧಿಕಾರಿಗಳ ವರ್ಗಾವಣೆಗೆ ಆಗ್ರಹಿಸುತ್ತಿದ್ದಾರೆ ಎಂದರೆ ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಆಗಿರುವುದೇನು?:

ಇತ್ತೀಚೆಗೆ ಧಾರವಾಡದಲ್ಲಿ ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಮಾದಕ ವ್ಯಸನಿಯೆಂದು ಆತನನ್ನು ಪೊಲೀಸರು ಬಂಧಿಸಿದ್ದರು. ಆದರೆ, ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತ ಮಾದಕ ವಸ್ತು ಸೇವಿಸಿರಲಿಲ್ಲ. ಆದರೆ ಆ ಕೇಸ್‌ನಿಂದ ಆತನನ್ನು ಹೊರತರಬೇಕೆಂದರೆ ದುಡ್ಡು ಕೊಡಬೇಕು ಎಂದು ಕಿರುಕುಳ ನೀಡಿದ್ದರು. ಆದರೆ, ವಿದ್ಯಾರ್ಥಿ ಬಳಿ ಹಣವಿಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆಯಿಂದ ಪೊಲೀಸರ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸ್‌ ಪೇದೆ, ಓರ್ವ ಪಿಐ ಅಮಾನತು ಮಾಡಿದರೂ ಜನರ ಆಕ್ರೋಶ ಕಡಿಮೆಯಾಗಿರಲಿಲ್ಲ. ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಪೊಲೀಸ್‌ ಕಮಿಷನರೇಟ್‌ನ ಕಾರ್ಯವೈಖರಿಗೆ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು. ಆಗ, ಶಾಸಕ ಪ್ರಸಾದ ಅಬ್ಬಯ್ಯ ಕೂಡ ತಮ್ಮದೇ ಸರ್ಕಾರದ ಆಡಳಿತ ಎಂಬುದನ್ನು ಲೆಕ್ಕಿಸದೇ ಕಮಿಷನರೇಟ್‌ ಕಾರ್ಯವೈಖರಿಗೆ ಕಿಡಿಕಾರಿದರು. ಗಾಂಜಾ, ಡ್ರಗ್ಸ್‌ ಹಾವಳಿ ಅವಳಿನಗರದಲ್ಲಿ ಬೇರು ಬಿಟ್ಟಿದೆ. ಕ್ರಿಕೆಟ್‌ ಬೆಟ್ಟಿಂಗ್‌ ಎಗ್ಗಿಲ್ಲದೇ ನಡೆಯುತ್ತಿದೆ. ಗನ್‌ ಲೈಸನ್ಸ್‌ಗೆಲ್ಲ ಪೊಲೀಸರು ದುಡ್ಡು ಫಿಕ್ಸ್‌ ಮಾಡಿದ್ದಾರೆ ಎಂಬೆಲ್ಲ ದೂರುಗಳು ಬರುತ್ತಿವೆ. ಇಲ್ಲಿರುವ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಬಹಿರಂಗವಾಗಿ ಹೇಳಿದರು. ಈ ಮೂಲಕ ಆಡಳಿತ ಮತ್ತು ವಿಪಕ್ಷಗಳೆರಡು ಕಮಿಷನರೇಟ್‌ ವಿರುದ್ಧ ಸಮರ ಸಾರಿದಂತಾಗಿದೆ.

ತಿಮಿಂಗಲುಗಳಿವೆ ಎಚ್ಚರಿಕೆ:

ಪೊಲೀಸ್‌ ಕಮಿಷನರೇಟ್‌ನಲ್ಲಿ ಕಮಿಷನರ್‌, ಡಿಸಿಪಿ, ಎಸಿಪಿಯಂತಹ ಅಧಿಕಾರಿಗಳು ಎರಡು ವರ್ಷಕ್ಕೊಮ್ಮೆ ವರ್ಗ ಆಗಿಯೇ ಆಗುತ್ತಾರೆ. ಆದರೆ, ಕಮಿಷನರೇಟ್‌ ಹಾಗೂ ಠಾಣೆಗಳಲ್ಲಿ ದೊಡ್ಡ ದೊಡ್ಡ ತಿಮಿಂಗಲುಗಳಿವೆ. ದಶಕಗಳಿಂದ ಅಲ್ಲೇ ಠಿಕಾಣಿ ಹೂಡಿವೆ. ಅವುಗಳನ್ನು ಬದಲಾಯಿಸಬೇಕು ಎಂಬ ಆಗ್ರಹವೂ ಕೆಳಹಂತದ ಅಧಿಕಾರಿಗಳ ಕುರಿತಂತೆ ಕೇಳಿ ಬರುತ್ತಿದೆ.

ಏನೇ ಆಗಲಿ ಒಟ್ಟಿನಲ್ಲಿ ಕಮಿಷನರೇಟ್‌ ಕಾರ್ಯವೈಖರಿ ಬಗ್ಗೆ ಆಡಳಿತದ ಶಾಸಕರೇ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದರಿಂದ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಬಾಕ್ಸ್‌...

ಆಕ್ರೋಶ ಮೊದಲಲ್ಲ:

ಎರಡು ವರ್ಷ ಹಿಂದೆ ಹಾಡಹಗಲೇ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆ ನಡೆದಾಗಲೂ ಪೊಲೀಸ್‌ ವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆಗ ಡಿಸಿಪಿ ಸೇರಿದಂತೆ ನಾಲ್ವರು ಅಧಿಕಾರಿಗಳ ಅಮಾನತು ಮಾಡಲಾಗಿತ್ತು. ನಂತರ ಕೆಲವೇ ದಿನಗಳಲ್ಲಿ ಆಯುಕ್ತರನ್ನು ಇಲ್ಲಿಂದ ಎತ್ತಂಗಡಿ ಮಾಡಲಾಗಿತ್ತು. ಆದರೆ, ಆಗೇನೂ ಶಾಸಕರಾಗಲಿ, ಜನಪ್ರತಿನಿಧಿಗಳಾಗಲಿ ಪೊಲೀಸ್‌ ಕಮಿಷನರೇಟ್‌ ವಿರುದ್ಧ ಬಹಿರಂಗ ಸಮರ ಸಾರಿರಲಿಲ್ಲ. ಆದರೆ ಈಗ ಆಡಳಿತ ಮತ್ತು ವಿಪಕ್ಷಗಳೆರಡು ಬಹಿರಂಗವಾಗಿ ಪೊಲೀಸ್‌ ಕಮಿಷನರೇಟ್‌ ವಿರುದ್ಧ ಸಮರ ಸಾರಿದಂತಾಗಿದೆ.ಕೋಟ್‌...

ಪೊಲೀಸ್‌ ಕಮಿಷನರೇಟ್‌ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಷ್ಟೇ ಅಲ್ಲ ಆಡಳಿತ ಹಾಗೂ ವಿರೋಧ ಪಕ್ಷಗಳೆರಡು ಆಕ್ರೋಶ ವ್ಯಕ್ತಪಡಿಸುತ್ತಿವೆ. ಅಂದರೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದರ್ಥವಲ್ಲವೇ? ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು.

ಶಂಕರ ಪಾಟೀಲ, ಸಾರ್ವಜನಿಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಶೋಕಮಾತಾ ಚರ್ಚಿನ ಧರ್ಮಗುರುಗಳಾಗಿ ವಂ| ಡೆನಿಸ್ ಡೆಸಾ ಅಧಿಕಾರ ಸ್ವೀಕಾರ
ತೊಟ್ಟಂ ಸಂತ ಅನ್ನಮ್ಮ ಚರ್ಚಿನ ನೂತನ ಧರ್ಮಗುರುಗಳಾಗಿ ವಂ| ಹೆನ್ರಿ ಮಸ್ಕರೇನ್ಹಸ್ ಅಧಿಕಾರ ಸ್ವೀಕಾರ