- ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
- ಧಾರವಾಡದಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ, ಲ್ಯಾಪ್‌ಟಾಪ್ ವಿತರಣೆ ಕನ್ನಡಪ್ರಭ ವಾರ್ತೆ ಧಾರವಾಡಸಮಾಜದಲ್ಲಿ ಅಸಮಾನತೆ ತೊಲಗಿ ಸಮಾನತೆ ನೆಲೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಪರ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಇಲ್ಲಿಯ ಕರ್ನಾಟಕ ಕಲಾ ಕಾಲೇಜು ಆವರಣದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾಡಳಿತದ ವತಿಯಿಂದ ವಿಶೇಷ ಚೇತನರಿಗೆ ಮೋಟಾರು ಚಾಲಿತ ತ್ರಿಚಕ್ರ ವಾಹನ, ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ ಹಾಗೂ ಗಿಗ್ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.ಸಮಾಜದಲ್ಲಿ ಶೇ. 90ರಷ್ಟು ಸಂಪತ್ತು ಕೇವಲ ಶೇ. 10ರಷ್ಟು ಜನರಲ್ಲಿ ಕೇಂದ್ರೀಕೃತವಾಗಿದೆ. ಹೀಗಾಗಿ, ಅಸಮಾನತೆ ಎದ್ದು ಕಾಣುತ್ತಿದೆ. ಅದನ್ನು ತೊಲಗಿಸುವುದೇ ಸರ್ಕಾರದ ಕರ್ತವ್ಯ ಎಂದರು. ಎಲ್ಲರಿಗೂ ರಾಜಕೀಯ ಲಾಭ
ನಮಗೆ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಬಂದಿದೆ. ಆದರೆ, ಅದು ಯಶಸ್ವಿಯಾಗಬೇಕಾದರೆ ಸಮಾಜದಲ್ಲಿನ ಅಸಮಾನತೆ ತೊಡೆದುಹಾಕಬೇಕು. ಇಲ್ಲದಿದ್ದರೆ ಶತಶತಮಾನಗಳಿಂದ ನರಳುತ್ತಿರುವರು ಒಂದು ದಿನ ಪ್ರಜಾಪ್ರಭುತ್ವ ಸೌಧವನ್ನು ಧ್ವಂಸ ಮಾಡಲಿದ್ದಾರೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕಾದರೆ ಅಸಮಾನತೆ ತೊಡೆದುಹಾಕಲೇಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಅವರ ಮಾರ್ಗದಲ್ಲಿಯೇ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ. ಕೆಲವರಿಗೆ ಮಾತ್ರವಲ್ಲದೇ ರಾಜಕೀಯ ಸ್ವಾತಂತ್ರ್ಯ ಲಾಭ ಎಲ್ಲರಿಗೂ ಸಿಗಬೇಕು ಎಂಬುದು ನಮ್ಮ ಆಶಯ. ಆದ್ದರಿಂದ ಉಳ್ಳವರು ಅವರಿಗೆ ಸಹಾಯ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.ರೈತರನ್ನು ಬಿಟ್ಟರೆ ಕಾರ್ಮಿಕರೇ ಎರಡನೇ ಸ್ಥಾನದಲ್ಲಿರುವರು. ಅನ್ನದಾತ ರೈತ, ಸಮಾಜ ಕಟ್ಟುವರು ಕಾರ್ಮಿಕರು. ಕೆಲವರಷ್ಟೇ ಕಾಯಕ ಮಾಡಬಾರದು. ಎಲ್ಲರೂ ಮಾಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಕಾಯಕ- ದಾಸೋಹ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಇಲ್ಲಿ ಜಾತಿ, ಧರ್ಮವನ್ನು ನಾವು ನೋಡುತ್ತಿಲ್ಲ ಎಂದರು ಮುಖ್ಯಮಂತ್ರಿಗಳು.
ಕಾರ್ಮಿಕ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ದೇಶದಲ್ಲಿ 2.6 ಕೋಟಿ ವಿಕಲಚೇತನರಿದ್ದು, ಈ ಪೈಕಿ ಶೇ. 7.6ರಷ್ಟು 0-6 ವರ್ಷದೊಳಗಿನ ಮಕ್ಕಳಿದ್ದಾರೆ. ಅವರ ಕಲ್ಯಾಣಕ್ಕೆ ಬದ್ಧರಾಗಿ ಕೆಲಸ ಮಾಡಬೇಕಾಗಿದೆ. ಖಾಸಗಿ ಸಂಸ್ಥೆಗಳಲ್ಲಿ ಶೇ. 5ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು.ಶಾಸಕರಾದ ಎನ್.ಎಚ್. ಕೋನರೆಡ್ಡಿ, ಪ್ರಸಾದ ಅಬ್ಬಯ್ಯ, ವಿಪ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಕಾರ್ಮಿಕ ಇಲಾಖೆ ಆಯುಕ್ತ ಎಂ.ಎಸ್. ಚಿದಾನಂದ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮತ್ತಿತರರು ಇದ್ದರು. ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ ಮೋಹಿಸಿನ್ ಸ್ವಾಗತಿಸಿದರು.ಸಿಎಂ ವಿತರಣೆ ಮಾಡಿದ ಪ್ರಮುಖ ಐದು ಯೋಜನೆಗಳು
1) ರಾಜ್ಯ ಸರ್ಕಾರದ 2023-24 ನೇ ಸಾಲಿನ ಆಯ್ಯ-ವ್ಯಯದಲ್ಲಿ ಗಿಗ್ (ಡೆಲಿವರಿ ಕಾರ್ಯ) ಕಾರ್ಮಿಕರಿಗೆ ಘೋಷಿಸಿರುವ ಯೋಜನೆಯ ಫಲಾನುಭವಕ್ಕಾಗಿ ನೋಂದಣಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ. ರಾಜ್ಯದಲ್ಲಿ ಅಂದಾಜು ಸುಮಾರು 3 ಲಕ್ಷಕ್ಕಿಂತ ಹೆಚ್ಚು ಗಿಗ್ ಕಾರ್ಮಿಕರಿದ್ದು, ಅವರಿಗೆ ಇದರ ಲಾಭ ಸಿಗಲಿದೆ.2) ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನಾ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ.
3) ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವಿಶೇಷವಾಗಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ 225 ವಿದ್ಯಾರ್ಥಿಗಳಿಗೆ ಕಾರ್ಮಿಕ ಇಲಾಖೆಯಿಂದ ಉಚಿತವಾಗಿ ಲ್ಯಾಪ್‍ಟ್ಯಾಪ್ ವಿತರಣೆ.4) ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ಹೆರಿಗೆ ಸೌಲಭ್ಯವಾದ ತಾಯಿ, ಲಕ್ಷ್ಮೀ ಬಾಂಡ್, ಅಪಘಾತ, ಮರಣ ಪರಿಹಾರ ಹಾಗೂ ಮದುವೆ ಸಹಾಯಧನ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳಿಂದ ಮಂಜೂರಾತಿ ಆದೇಶಗಳ ವಿತರಣೆ.
5) ವಿವಿಧ ಸಂಸ್ಥೆಗಳ ಸಿಎಸ್‍ಆರ್ ನಿಧಿಯಲ್ಲಿ ಏಕಕಾಲಕ್ಕೆ ಜಿಲ್ಲೆಯ 550 ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ.550 ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆರಾಜ್ಯದಲ್ಲಿಯೇ ಮೊದಲ ಬಾರಿಗೆ ಏಕಕಾಲಕ್ಕೆ 550 ವಿಶೇಷಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು. ರಾಜ್ಯದ ವಿವಿಧ ರೀತಿಯ ಕೈಗಾರಿಕೆಗಳು, ಕಾರ್ಖಾನೆಗಳು, ಸಂಸ್ಥೆಗಳು ಸೇರಿದಂತೆ ಸುಮಾರು 130 ಕಂಪನಿಗಳು ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ 525 ಹಾಗೂ ಸಂತೋಷ ಲಾಡ್ ಫೌಂಡೇಷನ್‌ನಿಂದ 25 ಸೇರಿದಂತೆ ಒಟ್ಟು 550 ತ್ರಿಚಕ್ರ ವಾಹನಗಳನ್ನು ಅರ್ಹ ಹಾಗೂ ಅತ್ಯಂತ ಅಗತ್ಯವಿರುವ ವಿಶೇಷಚೇತನರಿಗೆ ವಿತರಿಸಲಾಯಿತು. ಇದರಲ್ಲಿ 10 ಎಲೆಕ್ಟ್ರಿಕಲ್ ತ್ರಿಚಕ್ರ ವಾಹನಗಳು ಸೇರಿವೆ. ಫಲಾನುಭವಿಗಳಾದ ಜಿಲ್ಲೆಯ ವಿವಿಧ ತಾಲೂಕುಗಳ ಪೈಕಿ ಅಣ್ಣಿಗೇರಿ-37, ನವಲಗುಂದ-77, ಕುಂದಗೋಳ-58, ಕಲಘಟಗಿ-113, ಅಳ್ನಾವರ-16, ಧಾರವಾಡ-128, ಹುಬ್ಬಳ್ಳಿ-99 ಮತ್ತು ಲಾಡ್ ಫೌಂಡೇಷನ್‌ನಿಂದ-25 ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.
ಸಿಎಸ್‌ಆರ್ ನಿಧಿಯ ಒಟ್ಟು 525 ಫಲಾನುಭವಿಗಳಲ್ಲಿ 356 ಪುರುಷ ಹಾಗೂ 169 ಮಹಿಳೆಯರಿದ್ದಾರೆ. ಪ್ರತಿ ತ್ರಿಚಕ್ರ ವಾಹನದ ಅಂದಾಜು ಮೊತ್ತ ₹1.25 ಲಕ್ಷಗಳಾಗಿದ್ದು, ಒಟ್ಟು ₹7 ಕೋಟಿ ಮೊತ್ತದ ತ್ರಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.