ನಾಡುಮಾಸ್ಕೇರಿ ಭಾಗಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜ್: ಶಾಸಕ ದಿನಕರ ಶೆಟ್ಟಿ

KannadaprabhaNewsNetwork | Published : Jan 17, 2024 1:46 AM

ಸಾರಾಂಶ

ನಾಡುಮಾಸ್ಕೇರಿ ಭಾಗಕ್ಕೆ ಸರ್ಕಾರಿ ಪದವಿ ಕಾಲೇಜು ಒದಗಿಸುವ ಕನಸು ಹೊಂದಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರ ಜತೆಗೆ ಮಾತನಾಡಲಾಗಿದೆ. ಮುಂದಿನ ದಿನದಲ್ಲಿ ಇದು ನೆರವೇರುವ ವಿಶ್ವಾಸವಿದೆ.

ಗೋಕರ್ಣ:

ನಾಡುಮಾಸ್ಕೇರಿ ಭಾಗಕ್ಕೆ ಸರ್ಕಾರಿ ಪದವಿ ಕಾಲೇಜು ಒದಗಿಸುವ ಕನಸು ಹೊಂದಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರ ಜತೆಗೆ ಮಾತನಾಡಲಾಗಿದೆ. ಮುಂದಿನ ದಿನದಲ್ಲಿ ಇದು ನೆರವೇರುವ ವಿಶ್ವಾಸವಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ನಾಡುಮಾಸ್ಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ ಸಂಪರ್ಕ ಮುಂತಾದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ ಎಂದರು. ಈ ಶಾಲೆ ತಾಲೂಕಿನ ಅತ್ಯುತ್ತಮ ಪ್ರೌಢಶಾಲೆಗಳಲ್ಲಿ ಒಂದಾಗಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ ಶಿಕ್ಷಕರು ನೀಡುತ್ತಿರುವ ಗುಣಮಟ್ಟದ ಶಿಕ್ಷಣವೇ ಕಾರಣ. ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಬೆಳೆಸುವ ಮಹತ್ತರ ಕಾರ್ಯ ಶಿಕ್ಷಕರದ್ದಾಗಿದೆ. ಇದರಲ್ಲಿ ಪಾಲಕರೂ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.ಶಾಲೆಗೆ ಕೊಡುಗೆ ನೀಡಿದ ನಿವೃತ್ತ ನ್ಯಾಯಾಧೀಶರಾದ ಡಾ. ಎಸ್‌.ಆರ್. ನಾಯಕ, ಶಿಕ್ಷಕರಾದ ವೀಣಾ ನಾಯಕ, ನಿವೃತ ಶಿಕ್ಷಕರಾದ ಗೋವಿಂದ ವಿ. ನಾಯಕ, ಶಿಕ್ಷಕ ಬೀರಣ್ಣ ಗಾಂವಕರ, ಗೌರಮ್ಮ ನಾಯಕ, ಶಿಕ್ಷಣ ಪ್ರೇಮಿ ಶ್ರೀನಿವಾಸ ಡಿ. ನಾಯಕ ಅವರನ್ನು ಶಾಸಕರು ಸನ್ಮಾನಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.ಗ್ರಾಪಂ ಅಧ್ಯಕ್ಷ ಈಶ್ವರ ವಿ. ಗೌಡ, ಉಪಾಧ್ಯಕ್ಷೆ ವಿಜಯಾ ನಾಯಕ, ತಾಪಂ ಇಒ ರಾಜೇಂದ್ರ ಎಲ್. ಭಟ್, ಗ್ರಾಪಂ ಸದಸ್ಯರಾದ ರಾಜೇಶ ನಾಯಕ, ಎಲ್ಜಿನ್ ಫರ್ನಾಂಡಿಸ್‌, ಸವಿತಾ ನಾಯ್ಕ, ನಿವೃತ್ತ ಶಿಕ್ಷಕರಾದ ಹೊನ್ನಪ್ಪ ಗುನಗಾ ಹಾಗೂ ಮಾಣೇಶ್ವರ ನಾಯಕ, ಮುಖ್ಯಾಧ್ಯಾಪಕಿ ಡಾ. ಪದ್ಮಾ ನಾಯಕ, ಶ್ರೀನಿವಾಸ ನಾಯಕ, ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಸದಸ್ಯರಾದ ದಯಾ ಮೆಹತ ಹಾಗೂ ನಾಗರಾಜ್ ತಾಂಡೆಲ್, ಮಹೇಶ ಶೆಟ್ಟಿ, ಗಣೇಶ ಪಂಡಿತ, ನಾಗರಾಜ ಎಸ್. ನಾಯಕ, ಮಹೇಶ ನಾಯಕ ದೇವರಬಾವಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Share this article