ಏಡ್ಸ್‌ ಸೋಂಕಿತರ ಉನ್ನತ ಚಿಕಿತ್ಸೆಗೆ ಸರ್ಕಾರ ಆದ್ಯತೆ

KannadaprabhaNewsNetwork |  
Published : Jan 13, 2024, 01:31 AM IST
ಶಿಕಾರಿಪುರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಸಂವಿಧಾನದಡಿ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಹಜ ರೀತಿಯಲ್ಲಿ ಬದುಕುವ ಹಕ್ಕನ್ನು ಕರುಣಿಸಲಾಗಿದೆ. ಅಂತೆಯೇ, ಏಡ್ಸ್ ಸೋಂಕಿತರು, ಎಚ್‌ಐವಿ ಪೀಡಿತರು ಸೂಕ್ತ ಚಿಕಿತ್ಸೆ ಪಡೆಯಲು ಶ್ರಮಿಸಲಾಗುತ್ತಿದೆ. ಅವರು ನಿರ್ಭಯವಾಗಿ ಪರಿಪೂರ್ಣ ಜೀವನ ನಡೆಸಲು ಹೆಚ್ಚಿನ ಆದ್ಯತೆಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಆರ್‌.ಸಿ.ಎಚ್ ಕಾರ್ಯಕ್ರಮಾಧಿಕಾರಿ ಡಾ.ನಾಗರಾಜ ನಾಯ್ಕ ಶಿಕಾರಿಪುರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಹಜ ರೀತಿಯಲ್ಲಿ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಏಡ್ಸ್ ಸೋಂಕಿತರು ಸೂಕ್ತ ಚಿಕಿತ್ಸೆ ಪಡೆದು, ನಿರ್ಭಯವಾಗಿ ಪರಿಪೂರ್ಣ ಜೀವನ ನಡೆಸಲು ಸರ್ಕಾರ ಆದ್ಯತೆ ನೀಡಿ, ಆರೋಗ್ಯ ಇಲಾಖೆ ಮೂಲಕ ಉನ್ನತ ಚಿಕಿತ್ಸೆ ಕಲ್ಪಿಸಿಕೊಟ್ಟಿದೆ ಎಂದು ಜಿಲ್ಲಾ ಆರ್‌.ಸಿ.ಎಚ್ ಕಾರ್ಯಕ್ರಮಾಧಿಕಾರಿ ಡಾ.ನಾಗರಾಜ ನಾಯ್ಕ ಹೇಳಿದರು.

ಪಟ್ಟಣದ ಕೆ.ಎಚ್.ಬಿ ಬಡಾವಣೆಯಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ನಡೆದ ಸೀಮಂತ ಕಾರ್ಯಕ್ರಮ ಹಾಗೂ ತಾಯಿಯಿಂದ ಮಗುವಿಗೆ ಎಚ್ಐವಿ,ಸಿಫಿಲಿಸ್ ಮತ್ತು ಹೆಪಟೈಟಿಸ್ ಹರಡುವಿಕೆಯ ನಿರ್ಮೂಲನಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಏಡ್ಸ್ ಕಾಯಿಲೆ ಬಗ್ಗೆ ಜನತೆಯಲ್ಲಿ ತೀವ್ರ ಆತಂಕ ಅಂಜಿಕೆಯಿದೆ. ಹಲವು ಗ್ರಾಮಗಳಲ್ಲಿ ರೋಗಿಯನ್ನು ಗ್ರಾಮದಿಂದ ಹೊರಗೆ ಹಾಕುತ್ತಿದ್ದಾರೆ. ಇತ್ತೀಚಿನ ವರ್ಷದಲ್ಲಿ ಸರ್ಕಾರ ಏಡ್ಸ್ ಸಂಪೂರ್ಣ ನಿರ್ಮೂಲನೆಗಾಗಿ ಉನ್ನತ ಚಿಕಿತ್ಸೆ ಜತೆಗೆ ಸೋಂಕಿತರಿಗೆ ವಿಶೇಷ ಯೋಜನೆ, ಆರೈಕೆಯನ್ನು ಮನೆಗೆ ತಲುಪಿಸುತ್ತಿರುವ ದಿಸೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ಸಂವಿಧಾನ ನೀಡಿದ್ದು, ಎಚ್ಐವಿ ಸೋಂಕಿತರು ಎಲ್ಲರ ರೀತಿಯಲ್ಲಿ ಸಹಜವಾಗಿ ಪರಿಪೂರ್ಣ ಜೀವನ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

ಎಚ್ಐವಿ ಸೋಂಕಿತರ ಸಾವು ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಮಾನಸಿಕ ಸ್ಥೈರ್ಯದ ಜತೆಗೆ ಗುಣಮಟ್ಟದ ಚಿಕಿತ್ಸೆ ಪಡೆದು ಆಹಾರಶೈಲಿ, ಜೀವನಶೈಲಿ ಬದಲಾಯಿಸಿಕೊಂಡು ಎಲ್ಲರ ರೀತಿಯ ಸಹಜವಾದ ಪರಿಪೂರ್ಣ ಬದುಕು ಅನುಭವಿಸಲು ಸಾಧ್ಯ ಎಂದರು.

ಪ್ರತಿ ಗರ್ಭಿಣಿ ಮಹಿಳೆ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವ ಸಂದರ್ಬದಲ್ಲಿ ಪ್ರಥಮವಾಗಿ ಎಚ್ಐವಿ ಸಹಿತ ಎಲ್ಲ ವಿಧದ ರಕ್ತತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದ್ದು ಇದರೊಂದಿಗೆ ಪತಿಯ ರಕ್ತ ತಪಾಸಣೆ ಮೂಲಕ ಜನಿಸುವ ಮಗುವಿಗೆ ಮಾರಕ ಕಾಯಿಲೆ ಹರಡದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ. ಸೋಂಕಿತರ ಹೆಸರು ವಿಳಾಸ ಗೌಪ್ಯವಾಗಿಸಿ ಆಪ್ತ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡಲಾಗುವುದು. ಏಡ್ಸ್ ಸೋಂಕಿತರಿಗೆ ಸರ್ಕಾರ ಮನೆ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದೆ ಎಂದು ತಿಳಿಸಿದರು.

ಸಿಫಿಲಿಸ್, ಹೆಪಟೈಟಿಸ್-ಬಿ ಕಾಯಿಲೆಗೆ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಜನನಿ ಶಿಶು ಸುರಕ್ಷಾ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಿದೆ. ಸೂಕ್ತ ಲಸಿಕೆ, ಮಾತ್ರೆ ಮೂಲಕ ಶಾಶ್ವತ ಪರಿಹಾರ ಪಡೆದು ಸಮತೋಲನ ಆಹಾರ ಪದ್ಧತಿ ಮೂಲಕ ಎಲ್ಲರ ರೀತಿ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದರು.

ಪುರಸಭಾ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ರೂಪಕಲಾ ಹೆಗ್ಡೆ ಮಾತನಾಡಿ, ಗರ್ಭಿಣಿ ಮಹಿಳೆಯರು ನಿರ್ಲಕ್ಷ್ಯ ವಹಿಸದೇ ಸಕಾಲಕ್ಕೆ ಸೂಕ್ತ ತಪಾಸಣೆ ಚಿಕಿತ್ಸೆ ಮೂಲಕ ಭವಿಷ್ಯದ ಸದೃಢ ಸಮಾಜಕ್ಕೆ ಆರೋಗ್ಯವಂತ ಮಕ್ಕಳ ಕೊಡುಗೆ ನೀಡಬೇಕು. ತಾಯಿಯಿಂದ ಮಾತ್ರ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯಲಿದ್ದು, ಜನ್ಮ ನೀಡುವ ಮುನ್ನಾ ಸಂಸ್ಕಾರವಂತರಾಗಿ ರೂಪಿಸಲು ಪ್ರಯತ್ನಿಸುವಂತೆ ತಿಳಿಸಿದರು.

ಆಸ್ಪತ್ರೆ ತಜ್ಞವೈದ್ಯ ಡಾ.ಶಿವಾನಂದ್ ಮಾತನಾಡಿ, ಆಸ್ಪತ್ರೆಯಲ್ಲಿ ಸುಸೂತ್ರದ ಹೆರಿಗೆಗೆ ಅಗತ್ಯವಾದ ಸಕಲ ಸೌಲಭ್ಯವಿದ್ದು, ಇಬ್ಬರು ಅರಿವಳಿಕೆ ತಜ್ಞರು, 4 ಪ್ರಸೂತಿ ತಜ್ಞರು, 3 ಮಕ್ಕಳ ತಜ್ಞರಿದ್ದಾರೆ ನೂತನ ಆಸ್ಪತ್ರೆಗೆ ಹೊಸ ಕೊಠಡಿ, ಬಸ್ ಸೇವೆ ಶೀಘ್ರದಲ್ಲಿಯೇ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ನವೀದ್‌ ಖಾನ್, ಜಿಲ್ಲಾ ಕೆಎಫ್‌ಡಿ ಕಾರ್ಯಕ್ರಮಾಧಿಕಾರಿ ಡಾ.ಹರ್ಷವರ್ಧನ್, ತಜ್ಞವೈದ್ಯ ಡಾ. ಕೆ.ಎನ್. ಗುರುದತ್‌, ಡಾ.ರವಿ, ಡಾ.ಅನಿಲ್‌ಕುಮಾರ್, ಡಾ.ಶ್ವೇತಾ, ಡಾ.ಲಕ್ಷ್ಮೀ, ಲೀಲಾ ಲಮಾಣಿ, ಸುರೇಶ್, ಮಮತಾ ಮತ್ತಿತರರು ಉಪಸ್ಥಿತರಿದ್ದರು.

ಗರ್ಭಿಣಿ ಸ್ತ್ರೀಯರಿಗೆ ಶಾಸ್ತ್ರೋಕ್ತವಾಗಿ ಸೀಮಂತ ನಡೆಸಲಾಯಿತು. ಕಾರ್ಯಕ್ರಮಕ್ಕೆ ಅಗತ್ಯ ವಸ್ತುಗಳನ್ನು ದಾನ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಕೀರ್ತಿ, ಭಾರತಿ ಪ್ರಾರ್ಥಿಸಿದರು. ಹರೀಶ್ ಸ್ವಾಗತಿಸಿ, ಚಂದ್ರಶೇಖರ್ ನಿರೂಪಿಸಿ, ವಂದಿಸಿದರು.

- - - -12 ಕೆ.ಎಸ್.ಕೆ.ಪಿ1:

ಶಿಕಾರಿಪುರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮವನ್ನು ಡಾ.ನಾಗರಾಜ್ ನಾಯ್ಕ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!