ರೋಣ: ಪ್ರತಿಯೊಂದು ಕ್ಷೇತ್ರದ ಪ್ರಗತಿಗೆ ಶಿಕ್ಷಣ ಬುನಾದಿಯಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಅವರು ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ವಿವೇಕ ಯೋಜನೆಯ ಸರ್ಕಾರಿ ಪ್ರೌಢಶಾಲೆಯ ಎರಡು ನೂತನ ಕೊಠಡಿಗಳ ಉದ್ಘಾಟನೆ ಹಾಗೂ ₹ 16 ಲಕ್ಷ ವೆಚ್ಚದಲ್ಲಿ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ವಿವೇಕ ಯೋಜನೆಯ ಅಡಿ ಕುರಹಟ್ಟಿ ಗ್ರಾಮದ ಪ್ರೌಢಶಾಲೆಗೆ ಈಗಾಗಲೇ ಎರಡು ಕೊಠಡಿ ನಿರ್ಮಿಸಿ ಕೊಟ್ಟಿದ್ದು, ಇದರಂತೆ ₹ 16 ಲಕ್ಷ ವೆಚ್ಚದಲ್ಲಿ ಮತ್ತೊಂದು ಕೊಠಡಿ ನಿರ್ಮಿಸಲಾಗುವುದು. ಗ್ರಾಮದ ಶೈಕ್ಷಣಿಕ ಪ್ರಗತಿಗೆ ಎರಡು ಎಕರೆ ಭೂಮಿ ದಾನ ಮಾಡಿದ ದೇಸಾಯಿ ಕುಟುಂಬದ ಸಾಮಾಜಿಕ ಕಳಕಳಿ ಪ್ರಶಂಸನೀಯ. ಮುಖ್ಯಮಂತ್ರಿಗಳು ನೀಡಿದ ವಿಶೇಷ ಅನುದಾನದಲ್ಲಿ ಮತ್ತೆರಡು ಕೊಠಡಿಗಳನ್ನು ಶಾಲೆಗೆ ನಿರ್ಮಿಸಿಕೊಡಲಾಗುವುದು. ಗ್ರಾಮ ಪಂಚಾಯ್ತಿ ಕೂಡಾ ಶಾಲೆ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸರ್ಕಾರಿ ಶಾಲೆಯ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಕೊತಬಾಳ ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಗಂಗಾಧರ ಸ್ವಾಮೀಜಿ, ಡಿಡಿಪಿಐ ಎಮ್. ಐ. ರಡ್ಡೇರ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವರಾಜ ನವಲಗುಂದ, ಯುಸೂಫ ಇಟಗಿ, ಭೂದಾನಿ ರಾಮಚಂದ್ರನಾಯ್ಕ ದೇಸಾಯಿ, ಕುರಹಟ್ಟಿ ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಗ್ರಾ ಪಂ ಮಾಜಿ ಅಧ್ಯಕ್ಷ ಟಿ.ಎಸ್. ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಶಂಕರಗೌಡ ಪಾಟೀಲ, ಉಪಾಧ್ಯಕ್ಷೆ ರೇಣುಕಾ ಹುಯಿಲಗೋಳ, ಗ್ರಾಪಂ ಸದಸ್ಯರಾದ ಸೀತಮ್ಮ ಅರಮನಿ ಸೇರಿದಂತೆ ಶಾಲೆಯ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದ್ದರು.