ಕಾಳಿ ನದಿಗೆ ತ್ಯಾಜ್ಯ-ನೀರು ಶುದ್ಧೀಕರಣ ಬದಲು ಪರ್ಯಾಯ ಮಾರ್ಗ

| Published : Oct 26 2025, 02:00 AM IST

ಕಾಳಿ ನದಿಗೆ ತ್ಯಾಜ್ಯ-ನೀರು ಶುದ್ಧೀಕರಣ ಬದಲು ಪರ್ಯಾಯ ಮಾರ್ಗ
Share this Article
  • FB
  • TW
  • Linkdin
  • Email

ಸಾರಾಂಶ

ಕಾಳಿ ನದಿಗೆ ಸೇರುವ ತ್ಯಾಜ್ಯ, ಕೊಳಚೆ ನೀರಿನ ಸ್ಥಳಗಳನ್ನು ಗುರುತಿಸಿ, ನೀರನ್ನು ಶುದ್ಧೀಕರಿಸಲು ಘಟಕ ಸ್ಥಾಪನೆಯ ಬದಲಿಗೆ ₹4.50 ಕೋಟಿ ವೆಚ್ಚದಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳುವ ನಿರ್ಧಾರವನ್ನ ದಾಂಡೇಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾಡಲಾಯಿತು.

ದಾಂಡೇಲಿ: ದಾಂಡೇಲಿ ನಗರಸಭೆಯ ಸಾಮಾನ್ಯ ಸಭೆ ನಗರಸಭಾಧ್ಯಕ್ಷ ಅಷ್ಪಾಕ್‌ ಶೇಖ್‌ ಅಧ್ಯಕ್ಷತೆಯಲ್ಲಿ ನಗರಸಭಾ ಭವನದಲ್ಲಿ ಶುಕ್ರವಾರ ನಡೆಯಿತು.

ಈ ಸಂದರ್ಭದಲ್ಲಿ ನದಿಗೆ ಸೇರುವ ತ್ಯಾಜ್ಯ, ಕೊಳಚೆ ನೀರಿನ ಸ್ಥಳಗಳನ್ನು ಗುರುತಿಸಿ, ನೀರನ್ನು ಶುದ್ಧೀಕರಿಸಲು ಘಟಕ ಸ್ಥಾಪನೆಯ ಬದಲಿಗೆ ₹4.50 ಕೋಟಿ ವೆಚ್ಚದಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳುವ ನಿರ್ಧಾರ ಮಾಡಲಾಯಿತು. ನಗರದ ಶೇ. 50 ಮನೆಗಳಿಗೆ ನಗರಸಭೆಯಿಂದ ಉಚಿತ ಯುಜಿಡಿ ಸಂಪರ್ಕ ಒದಗಿಸಬೇಕು ಎಂದು ಸದಸ್ಯ ನಂದೀಶ್ ಮುಂಗರವಾಡಿ ಹೇಳಿದರು. ಈಗಿರುವ ವ್ಯವಸ್ಥೆಯಲ್ಲಿ ಯುಜಿಡಿ ಸಂಪರ್ಕ ಒದಗಿಸುವುದೇ ದೊಡ್ಡ ಸವಾಲಾಗಿದೆ. ಒಂದು ವೇಳೆ ಕೊಟ್ಟರೂ ಸಫಲವಾಗುವ ಸಾಧ್ಯತೆ ತೀರ ಕಡಿಮೆ ಎಂದ ಸದಸ್ಯ ಮೋಹನ್ ಹಲವಾಯಿ ಹೇಳಿದರು. ಯುಜಿಡಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ, ಯುಜಿಡಿ ಪೈಪ್‌ಗಳಿಂದ ನೀರು ಮುಂದಕ್ಕೆ ಹೋಗುತ್ತಿಲ್ಲ. ಒಂದು ವೇಳೆ ಪೈಪ್‌ಗಳು ಜಾಮ್ ಆದರೆ ಇಡೀ ದಾಂಡೇಲಿ ನಗರವೇ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸದಸ್ಯ ಸಂಜು ನಂದ್ಯಾಳಕರ್ ಎಚ್ಚರಿಸಿದರು.

ಕನ್ನಡ ರಾಜ್ಯೋತ್ಸವ ಆಚರಣೆಗೆ ಒಂದು ಲಕ್ಷ ರು.ಗಳಿಗೆ ಮಂಜುರಾತಿ ನೀಡಲಾಯಿತು. ನಗರಸಭೆ ಸಿಬ್ಬಂದಿ ಆದಿ ನಾರಾಯಣ ಮತ್ತು ಶ್ರೀನಿವಾಸ್ ಹರಿಜನ್ ಅವರನ್ನು ಆರೋಗ್ಯ ನಿರೀಕ್ಷಕ ತರಬೇತಿಗೆ ನಿಯೋಜನೆ ಮಾಡಲು ಅನುಮತಿ ನೀಡಲಾಯಿತು. ಅ. 2025ರಿಂದ ಅ. 2026ರ ಅವಧಿಗೆ ದಾಂಡೇಲಿಯ ಸಂಡೆ ಮಾರುಕಟ್ಟೆಯ ಮಳಿಗೆಗಳನ್ನು ಹರಾಜು ಮಾಡಲು ಟೆಂಡರ್ ಕರೆಯುವುದು. ನಂದಗೋಕುಲ ಉದ್ಯಾನದ ಮುಂಭಾಗದಲ್ಲಿರುವ ನಿವೇಶನಗಳಲ್ಲಿ ಬಾಡಿಗೆ ರೂಪದಲ್ಲಿ ವಾಸವಿರುವ ಜನರು ಕೂಡಲೇ ಮನೆಗಳನ್ನು ಖಾಲಿ ಮಾಡಬೇಕು, ಇಲ್ಲದಿದ್ದರೆ ಇನ್ನೂ ಕೆಲವೇ ದಿನಗಳಲ್ಲಿ ಮನೆಗಳನ್ನು ಖಾಲಿ ಮಾಡಲು ಅಂತಿಮ ನೋಟಿಸ್ ಜಾರಿ ಮಾಡುವ ನಿರ್ಣಯ ಕೈಗೊಳ್ಳಲಾಯಿತು.

ಚರಂಡಿ ಸ್ವಚ್ಛತೆ ಸರಿಯಾಗಿ ನಡೆಯುತ್ತಿಲ್ಲ, ಹೀಗಿರುವಾಗ ಲಕ್ಷಾಂತರ ರು.ಗಳನ್ನು ವ್ಯಯಿಸುವ ಅವಶ್ಯಕತೆ ಏನಿದೆ ಎಂದು ಸದಸ್ಯ ಮೌಲಾಲಿ ಮುಲ್ಲಾ ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆ ಗುಜರಿ ವಾಹನ ಮತ್ತು ವಸ್ತುಗಳನ್ನು ಬಹಿರಂಗ ಹರಾಜು ಮಾಡಿ ಬಂದ ಹಣದ ಕುರಿತು ನಂದೀಶ್ ಮುಂಗರವಾಡಿ ಅನುಮಾನ ವ್ಯಕ್ತ ಪಡಿಸಿದರು.

ನಗರಸಭೆ ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ರಾಮಾಲಿಂಗ ಜಾಧವ್, ಪೌರಾಯುಕ್ತ ವಿವೇಕ್ ಬನ್ನೆ ಇದ್ದರು.