ಶಬರಿಮಲೆ ಚಿನ್ನಕ್ಕೆ ಕನ್ನ ಪ್ರಕರಣ । ಬೆಂಗ್ಳೂರು, ಬಳ್ಳಾರೀಲಿ ಕೇರಳ ಎಸ್‌ಐಟಿ ದಾಳಿ

| N/A | Published : Oct 26 2025, 02:00 AM IST / Updated: Oct 26 2025, 04:38 AM IST

Sabarimale Gold
ಶಬರಿಮಲೆ ಚಿನ್ನಕ್ಕೆ ಕನ್ನ ಪ್ರಕರಣ । ಬೆಂಗ್ಳೂರು, ಬಳ್ಳಾರೀಲಿ ಕೇರಳ ಎಸ್‌ಐಟಿ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚಗಳ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಕೇರಳ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ದಾಳಿ ನಡೆಸಿದೆ.

 ಪಟ್ಟಣಂತಿಟ್ಟ (ಕೇರಳ)/ಬಳ್ಳಾರಿ: ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚಗಳ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಕೇರಳ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ದಾಳಿ ನಡೆಸಿದೆ. ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿಯ ಬೆಂಗಳೂರು ನಿವಾಸ ಮತ್ತು ಬಳ್ಳಾರಿಯ ಗೋವರ್ಧನ್‌ ಎಂಬುವರ ಒಡೆತನದ ಬಳ್ಳಾರಿಯ ರೊದ್ದಂ ಜ್ಯುವೆಲರ್ಸ್‌ ಮೇಲೆ ದಾಳಿ ನಡೆದಿದ್ದು, ಪೊಟ್ಟಿ ನಿವಾಸದಿಂದ 2 ಲಕ್ಷ ರು. ನಗದು ಹಾಗೂ ಚಿನ್ನದಂಗಡಿಯಿಂದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.

‘2019ರಲ್ಲಿ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚಗಳನ್ನು ಮರುಲೇಪನ ಮಾಡುವುದಾಗಿ ಪೊಟ್ಟಿ ತೆಗೆದುಕೊಂಡು ಹೋಗಿದ್ದ. ಬಳ್ಳಾರಿಯ ಗೋವರ್ಧನ್‌ ಎಂಬ ಚಿನ್ನದ ವ್ಯಾಪಾರಿ ಇದಕ್ಕೆ ಧನಸಹಾಯ ಮಾಡಿದ್ದ’ ಎಂದು ಅವು ಹೇಳಿವೆ.

ಮರುಲೇಪನದ ಬಳಿಕ ಚಿನ್ನದಲ್ಲಿ ಸುಮಾರು 4 ಕೆಜಿ ಇಳಿಕೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶ್ರೀರಾಮಪುರದಲ್ಲಿರುವ ಪೊಟ್ಟಿಯ ನಿವಾಸ ಮತ್ತು ಆತ ಈ ಹಿಂದೆ ಅರ್ಚಕನಾಗಿದ್ದ ಅದೇ ಪ್ರದೇಶದ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಅಧಿಕಾರಿಗಳು ಶೋಧ ನಡೆದ್ದಾರೆ. ಈ ವೇಳೆ 2 ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.

ಇದೇ ವೇಳೆ, ಗೋವರ್ಧನ್‌ನ ಬಳ್ಳಾರಿಯ ರೊದ್ದಂ ಚಿನ್ನದಂಗಡಿಯಿಂದ 400 ಗ್ರಾಂ ತೂಕದ ಕೆಲವು ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ ಹಾಗೂ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ತಾವು ಕರೆದಾಗ ಬಂದು ವಿಚಾರಣೆಗೆ ಹಾಜರಾಗಬೇಕು ಎಂದು ಎಸ್ಐಟಿ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ವಶಪಡಿಸಿಕೊಂಡ ಚಿನ್ನ ದೇಗುಲಕ್ಕೆ ಸೇರಿದ ಚಿನ್ನವೇ ಅಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಕೆಲವು ಮಾಧ್ಯಮಗಳು ಇದು ದೇಗುಲದ ಚಿನ್ನ ಎಂದು ವರದಿ ಮಾಡಿವೆ.

ನಮ್ಮ ಆರೋಪ ನಿಜವಾಗಿದೆ- ಕಾಂಗ್ರೆಸ್:

‘ಚಿನ್ನವನ್ನು ಶ್ರೀಮಂತ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿದೆ ಎಂಬ ನಮ್ಮ ಆರೋಪ ನಿಜವಾಗಿದೆ’ ಎಂದು ಕೇರಳದ ಕಾಂಗ್ರೆಸ್‌ ಮುಖಂಡ ಹಾಗೂ ವಿಪಕ್ಷ ನಾಯಕ ವಿ.ಡಿ. ಸತೀಶನ್‌ ಅವರು ಬಳ್ಳಾರಿಯ ಚಿನ್ನದಂಗಡಿಯಲ್ಲಿ ಚಿನ್ನ ಸಿಕ್ಕ ವಿಷಯ ಉಲ್ಲೇಖಿಸಿ ಹೇಳಿದ್ದಾರೆ. ಇದಲ್ಲದೆ, ದೇವಸ್ವಂ ಮಂತ್ರಿ ವಾಸವನ್ ರಾಜೀನಾಮೆ ಕೊಡಬೇಕು ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯನ್ನು (ಟಿಡಿಬಿ) ವಿಸರ್ಜನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಚಿನ್ನ ಮೌಲ್ಯಮಾಪನ ಶುರು:

ಇನ್ನೊಂದೆಡೆ ಶಬರಿಮಲೆ ದೇಗುಲದಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ನೇಮಿಸಿರುವ ನ್ಯಾ। ಕೆ.ಟಿ.ಶಂಕರನ್‌ ಅವರು ದೇಗುಲದ ಖಜಾನೆಗಳ ಮೌಲ್ಯಮಾಪನ ಆರಂಭಿಸಿದ್ದಾರೆ.

ಬಿಜೆಪಿ ಪ್ರತಿಭಟನೆ:

ಚಿನ್ನಕಳವು ಪ್ರಕರಣ ಖಂಡಿಸಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ತಿರುವನಂತಪುರದಲ್ಲಿ ಬಿಜೆಪಿ ಹಗಲಿರುಳು ಪ್ರತಿಭಟನೆ ಆರಂಭಿಸಿದೆ.

ದೇವರ ಚಿನ್ನ ಕಳವು

ಶಬರಿಮಲೆ ದೇಗುಲದ ಗರ್ಭಗುಡಿ ಬಾಗಿಲು, ದ್ವಾರಪಾಲಕ ವಿಗ್ರಹಗಳ ಕವಚಕ್ಕೆ ಚಿನ್ನ ಮರುಲೇಪನಕ್ಕೆ ನಿರ್ಧರಿಸಲಾಗಿತ್ತು

ಈ ಕೆಲಸವನ್ನು ಬೆಂಗಳೂರಿನ ಉನ್ನಿಕೃಷ್ಣನ್‌ ಪೊಟ್ಟಿ ವಹಿಸಿಕೊಂಡಿದ್ದ. ಈ ಕೆಲಸಕ್ಕೆ ಬಳ್ಳಾರಿ ಉದ್ಯಮಿ ನೆರವು ನೀಡಿದ್ದರು

ಚಿನ್ನಮರುಲೇಪನದ ಬಳಿಕ ತೂಕ ಮಾಡಿದಾಗ ಬಾಗಿಲು, ವಿಗ್ರಹಗಳ ತೂಕದಲ್ಲಿ 4 ಕೆಜಿ ಚಿನ್ನ ಇಳಿಕೆಯಾಗಿದ್ದು ಕಂಡಬಂದಿತ್ತು

ಈ ಕುರಿತು ತನಿಖೆ ನಡೆದು ಇತ್ತೀಚೆಗೆ ಪ್ರಮುಖ ಆರೋಪಿ ಪೊಟ್ಟಿಯನ್ನು ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ದಾಲಿ ನಡೆದಿದೆ

ನನಗೂ ಚಿನ್ನ ಕಳವಿಗೂ ಸಂಬಂಧವಿಲ್ಲ: ವ್ಯಾಪಾರಿಕೇರಳ ಎಸ್‌ಐಟಿ ದಾಳಿ ಬಗ್ಗೆ ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಳ್ಳಾರಿ ರೊದ್ದಂ ಜ್ಯುವೆಲರ್ಸ್‌ನ ಮಾಲೀಕ ಗೋವರ್ಧನ, ‘ಶಬರಿಮಲೆ ದೇಗುಲದಲ್ಲಾಗಿರುವ ಕಳ್ಳತನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಸಹ ಅಯ್ಯಪ್ಪನ ಭಕ್ತ. ಅಯ್ಯಪ್ಪ ದೇವಾಲಯಕ್ಕೆ ಸಾಕಷ್ಟು ದಾನ ಮಾಡುತ್ತಾ ಬಂದಿದ್ದೇನೆ. ಚಿನ್ನ ಕದಿಯುವ ಅಗತ್ಯತೆ ಇಲ್ಲ. ದೇವರು ನನಗೆ ಸಾಕಷ್ಟು ನೀಡಿದ್ದಾನೆ. ಹೊಸ ಚಿನ್ನದ ಲೇಪಿತ ಬಾಗಿಲನ್ನು ತಯಾರಿಸಲು ವೈಯಕ್ತಿಕವಾಗಿ 35 ಲಕ್ಷ ರು. ಖರ್ಚು ಮಾಡಿದ್ದೇನೆ. ಎಸ್‌ಐಟಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವೆ. ಕರೆದರೆ ವಿಚಾರಣೆಗೆ ತೆರಳುವೆ’ ಎಂದು ತಿಳಿಸಿದರು.

Read more Articles on