ಬೆಂಕಿ ಬಿದ್ದಾಗ ಬಸ್‌ ಚಾಲಕ ಮುಖ್ಯಬಾಗಿಲಿನಿಂದಲೇ ಪರಾರಿ!

| N/A | Published : Oct 26 2025, 02:00 AM IST / Updated: Oct 26 2025, 04:34 AM IST

Bus Fire

ಸಾರಾಂಶ

ಶುಕ್ರವಾರ 20 ಜನರನ್ನು ಬಲಿ ಪಡೆದ ಹೈದರಾಬಾದ್‌-ಬೆಂಗಳೂರು ಬಸ್‌ಗೆ ಬೆಂಕಿ ತಗುಲಿದ ವೇಳೆ, ಬಸ್ ಚಾಲಕನು ಬಸ್‌ನ ಮುಖ್ಯ ಬಾಗಿಲಿನಿಂದಲೇ ಹೊರಹೋಗಿದ್ದ. ಬಳಿಕ ಮಲಗಿದ್ದ ಇನ್ನೊಬ್ಬ ಚಾಲಕನ್ನನು ಎಬ್ಬಿಸಿದ್ದ.   ಇಬ್ಬರೂ ರಾಡ್‌ನಿಂದ ಕಿಟಕಿ ಗಾಜು ಒಡೆದು ಪ್ರಯಾಣಿಕರನ್ನು ರಕ್ಷಿಸಲು ಯತ್ನಿಸಿದ್ದರು. 

 ಕರ್ನೂಲ್‌ (ಆಂಧ್ರಪ್ರದೇಶ) :  ಶುಕ್ರವಾರ 20 ಜನರನ್ನು ಬಲಿ ಪಡೆದ ಹೈದರಾಬಾದ್‌-ಬೆಂಗಳೂರು ಬಸ್‌ಗೆ ಬೆಂಕಿ ತಗುಲಿದ ವೇಳೆ, ಬಸ್ ಚಾಲಕನು ಬಸ್‌ನ ಮುಖ್ಯ ಬಾಗಿಲಿನಿಂದಲೇ ಹೊರಹೋಗಿದ್ದ. ಬಳಿಕ ಮಲಗಿದ್ದ ಇನ್ನೊಬ್ಬ ಚಾಲಕನ್ನನು ಎಬ್ಬಿಸಿದ್ದ. ನಂತರ ಇಬ್ಬರೂ ಸೇರಿ ರಾಡ್‌ನಿಂದ ಕಿಟಕಿ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ರಕ್ಷಿಸಲು ಯತ್ನಿಸಿದ್ದರು. ಬೆಂಕಿ ಹೆಚ್ಚಾದ ಕಾರಣ ಭೀತಿಯಿಂದ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಬೆಂಗೂರಿಗೆ ಬರುತ್ತಿದ್ದ ಬಸ್‌ಗೆ ಕರ್ನೂಲ್‌ ಬಳಿ ಬೆಂಕಿ ಹೊತ್ತಿಕೊಂಡಿತ್ತು. ಇದು ಗಮನಕ್ಕೆ ಬಂದ ತಕ್ಷಣ ಚಾಲಕ ಲಕ್ಷ್ಮಯ್ಯ ಮುಖ್ಯ ಬಾಗಿಲಿನಿಂದ ಜಿಗಿದು ಹೊರಗೆ ಓಡಿದ್ದ. ತಾನು ಬೆಂಕಿಯಿಂದ ತಪ್ಪಿಸಿಕೊಂಡು, ಹೊರಗಿನ ಲಗೇಜ್ ರ‍್ಯಾಕ್‌ನಲ್ಲಿ ಮಲಗಿದ್ದ ಸಹಚಾಲಕನನ್ನು ಎಬ್ಬಿಸಿದ್ದ. ಅಷ್ಟರಲ್ಲಾಗಲೇ ಬೆಂಕಿ ತೀವ್ರವಾಗಿದ್ದು, ಬಸ್‌ನ ಒಳಪ್ರವೇಶಿಸುವುದು ಅಸಾಧ್ಯವಾಗಿತ್ತು. ಹಾಗಾಗಿ ಇಬ್ಬರೂ ಸೇರಿ ಟಯರ್‌ ಬದಲಿಸಲು ಬಳಸುವ ರಾಡ್‌ಗಳನ್ನು ತೆಗೆದುಕೊಂಡು ಕಿಟಕಿಗಳನ್ನು ಒಡೆಯತೊಡಗಿದರು. ಇದರಿಂದ ಹಲವು ಪ್ರಯಾಣಿಕರು ಹೊರಬರಲು ಸಾಧ್ಯವಾಯಿತು ಎಂದು ಕರ್ನೂಲ್‌ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಾಂತ ಪಾಟೀಲ್‌ ಮಾಹಿತಿ ನೀಡಿದ್ದಾರೆ. ಬೆಂಕಿ ಧಗಧಗಿಸಿದ್ದನ್ನು ಕಂಡು ಭೀತರಾದ ಲಕ್ಷ್ಮಯ್ಯ ಸ್ಥಳದಿಂದ ಓಡಿ ಹೋಗಿದ್ದರು. ಇಬ್ಬರೂ ಚಾಲಕರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆ ಮಾಡಿದ್ದರಿಂದ ಲಕ್ಷ್ಮಯ್ಯನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಕ್ರಮವಾಗಿ ಸ್ಲೀಪರ್ ಕೋಚ್‌ ಆಗಿ ಮಾರ್ಪಾಡು

ಕರ್ನೂಲ್‌: ಶುಕ್ರವಾರ ಬೆಂಕಿಗೆ ಆಹುತಿಹಾದ ಹೈದರಾಬಾದ್‌-ಬೆಂಗಳೂರು ಕಾವೇರಿ ಟ್ರಾವೆಲ್ಸ್‌ ಬಸ್ಸನ್ನು ಅಕ್ರಮವಾಗಿ ಸ್ಲೀಪರ್ ಕೋಚ್‌ ಆಗಿ ಪರಿವರ್ತಿಸಲಾಗಿತ್ತು ಎಂದು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ. ವೆಮುರಿ ವಿನೋದ್ ಕುಮಾರ್ ಅವರ ಒಡೆತನದ ಮತ್ತು ದಿಯು ದಮನ್‌ನ ನೋಂದಣಿ DD01 N9490 ಸಂಖ್ಯೆ ಇದ್ದ ಈ ಬಸ್ ಮೂಲತಃ ಸೀಟರ್ ಕೋಚ್ ಆಗಿತ್ತು. ನಂತರ ಒಡಿಶಾಗೆ ನೋಂದಣಿ ಬದಲಿಸಿ ಸ್ಲೀಪರ್‌ ಆಗಿ ಮಾರ್ಪಡಿಸಲಾಗಿತ್ತು. ಆದರೂ ಇದರ ಮೇಲೆ ಕ್ರಮವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

ದುರಂತಕ್ಕೆ ಮುನ್ನ ತೂರಾಡುತ್ತಿದ್ದ ಬೈಕ್ ಚಾಲಕ!

ಹೈದರಾಬಾದ್‌: ಕರ್ನೂಲ್‌ನಲ್ಲಿ ಅಗ್ನಿ ದುರಂತಕ್ಕೀಡಾದ ಹೈದರಾಬಾದ್‌-ಬೆಂಗಳೂರು ಬಸ್‌ಗೆ ಡಿಕ್ಕಿ ಹೊಡೆದ ಬೈಕ್‌ ಸವಾರ ಪಾನಮತ್ತನಾಗಿದ್ದ ಎಂಬ ಶಂಕೆ ವ್ಯಕ್ತವಾಗಿದೆ.ಬಸ್‌ಗೆ ಡಿಕ್ಕಿ ಹೊಡೆಯುವುದಕ್ಕೂ ಪೂರ್ವದಲ್ಲಿ, ಅಂದರೆ ಬೆಳಗಿನ ಜಾವ 2:23ಕ್ಕೆ ಬೈಕ್‌ ಸವಾರ ಬಿ. ಶಿವಶಂಕರ್‌ (22) ಪೆಟ್ರೋಲ್‌ ಬಂಕ್‌ಗೆ ಬಂದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶಿವಶಂಕರ್‌ ಬೈಕ್‌ನಲ್ಲಿ ಹಿಂಬದಿ ಸವಾರನ ಜೊತೆ ಪೆಟ್ರೋಲ್‌ ಬಂಕ್‌ಗೆ ಬರುತ್ತಾನೆ. ಬೈಕ್‌ನಿಂದ ಇಳಿದ ಜೊತೆಗಾರ ಇಂಧನ ತುಂಬಿಸಲು ಸಿಬ್ಬಂದಿಯನ್ನು ಹುಡುಕುತ್ತಾ ತೆರಳುತ್ತಾನೆ, ಅವನ ಹಿಂದೆಯೇ ಶಿವಶಂಕರ್‌ ಸಹ ಹೋಗುತ್ತಾನೆ. ಸಿಬ್ಬಂದಿ ಇರದ ಕಾರಣ ಸಿಟ್ಟಿಗೆದ್ದು ಒಮ್ಮೆ ಕೂಗಾಡುತ್ತಾನೆ. ಮರಳಿ ವಾಲಾಡುತ್ತಾ ಬಂದು ಒಬ್ಬನೇ ಬೈಕ್‌ ಏರುತ್ತಾನೆ. ಶಿವಶಂಕರ್‌ ತನ್ನ ದೇಹದ ಮೇಲೆ ನಿಯಂತ್ರಣ ಸಾಧಿಸಲಾಗದ ಸ್ಥಿತಿಯಲ್ಲಿ, ಬೈಕ್‌ ಅನ್ನು ಓಲಾಡಿಸುತ್ತಾ ಒಬ್ಬನೇ ಪೆಟ್ರೋಲ್‌ ಬಂಕ್‌ನಿಂದ ತೆರಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆತ ಮದ್ಯ ಅಥವಾ ಇತರ ಮಾದಕ ದ್ರವ್ಯಗಳನ್ನು ಸೇವಿಸಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಬಸ್‌ನಲ್ಲಿದ್ದ 234 ಮೊಬೈಲ್‌ ಸ್ಫೋಟಿಸಿ ಹೆಚ್ಚಿದ ಬೆಂಕಿ

ಹೈದರಾಬಾದ್‌: ಶುಕ್ರವಾರ ಕರ್ನೂಲ್‌ನಲ್ಲಿ ಅಗ್ನಿ ಅವಘಡಕ್ಕೀಡಾಗಿ 20 ಮಂದಿಯನ್ನು ಬಲಿ ಪಡೆದ ಹೈದರಾಬಾದ್-ಬೆಂಗಳೂರು ಖಾಸಗಿ ಬಸ್‌ನಲ್ಲಿ 234 ಸ್ಮಾರ್ಟ್‌ಫೋನ್‌ಗಳಿದ್ದವು. ಅವು ಸ್ಫೋಟಗೊಂಡಿದ್ದರಿಂದ ಜ್ವಾಲೆ ಮತ್ತಷ್ಟು ತೀವ್ರವಾಗಿ ವ್ಯಾಪಿಸಿತು ಎಂಬ ಸಂಗತಿ ತನಿಖೆ ವೇಳೆ ಬಹಿರಂಗವಾಗಿದೆ.ಹೈದರಾಬಾದ್‌ ಮೂಲದ ಉದ್ಯಮಿ ಮಂಗನಾಥ್‌ ಎಂಬುವವರು ಸುಮಾರು 46 ಲಕ್ಷ ರು. ಬೆಲೆ ಬಾಳುವ 234 ಸ್ಮಾರ್ಟ್‌ಫೋನ್‌ಗಳನ್ನು ಈ ಬಸ್‌ ಮೂಲಕ ಬೆಂಗಳೂರಿನ ಇ-ಕಾಮರ್ಸ್‌ ಕಂಪನಿಯೊಂದಕ್ಕೆ ಪಾರ್ಸಲ್‌ ಮಾಡಿದ್ದರು. ಇವುಗಳ ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಬೆಂಕಿ ಕೆನ್ನಾಲಿಗೆ ಚಾಚಿತು ಎಂದು ತಿಳಿದುಬಂದಿದೆ. ಬ್ಯಾಟರಿ ಸ್ಫೋಟವಾದ ಸದ್ದನ್ನು ಕೇಳಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ಗೆ ಬೆಂಕಿ ತಗುಲಿ ಶುಕ್ರವಾರ 20 ಪ್ರಯಾಣಿಕರು ಅಸುನೀಗಿದ್ದರು.

ಬೆಂಕಿ ದುರಂತ ಹಿನ್ನೆಲೆ: ತೆಲಂಗಾಣದಲ್ಲಿ ಬಸ್‌ಗಳ ತಪಾಸಣೆ ತೀವ್ರ

ಹೈದರಾಬಾದ್‌: ಕರ್ನೂಲ್‌ನಲ್ಲಿ ಭೀಕರ ಬಸ್‌ ಅಗ್ನಿ ದುರಂತ ಸಂಭವಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ತೆಲಂಗಾಣ ಸರ್ಕಾರ ಖಾಸಗಿ ಬಸ್‌ಗಳ ತೀವ್ರ ತಪಾಸಣೆ ಆರಂಭಿಸಿದೆ. ಹಲವಾರು ಬಾರಿ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ ಬಸ್‌ ಒಂದನ್ನು ವಶಪಡಿಸಿಕೊಳ್ಳುವ ಮೂಲಕ ಇತರ ಬಸ್‌ ಮಾಲಕರಿಗೂ ಎಚ್ಚರಿಕೆ ರವಾನಿಸಿದೆ.ಹೈದರಾಬಾದ್‌ನಿಂದ ಪ್ರತಿದಿನ ಸುಮಾರು 500 ಅಂತಾರಾಜ್ಯ ಖಾಸಗಿ ಬಸ್‌ಗಳು ಕಾರ್ಯನಿರ್ವಹಿಸುತ್ತವೆ. ಶನಿವಾರ ಬೆಳಿಗ್ಗೆ ಹಲವು ಬಸ್‌ಗಳ ತಪಾಸಣೆ ಮಾಡಿ, 54 ವರದಿಗಳನ್ನು ಸಿದ್ಧಪಡಿಸಲಾಗಿದೆ. ಅಗ್ನಿಶಾಮಕ ಯಂತ್ರವಿಲ್ಲದಿರುವುದು, ತೆರಿಗೆ ಪಾವತಿಸದಿರುವುದು ಮತ್ತು ಸರಕು ಸಾಗಿಸುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆ ಮಾಡಿದ್ದ ಬಸ್ಸೊಂದನ್ನು ಮೆಡ್ಚಲ್-ಮಲ್ಕಜ್‌ಗಿರಿ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ ಚಾಲಕರು ಮತ್ತು ಮಾಲಕರು ವಾಹನದ ಸುವ್ಯವಸ್ಥೆ ವಿಚಾರದಲ್ಲಿ ನಿರ್ಲಕ್ಷ್ಯ ತೋರದಂತೆ ತೆಲಂಗಾಣ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್‌ ಶುಕ್ರವಾರ ಎಚ್ಚರಿಸಿದ್ದರು.

Read more Articles on