ಏಪ್ರಿಲ್‌ನಲ್ಲಿ ಇಪಿಎಫ್‌ಒ ಆ್ಯಪ್ ಬಿಡುಗಡೆ
ಬ್ಯಾಂಕ್ ಖಾತೆಗೆ ಪಿಎಫ್ ಹಣ ವರ್ಗಾವಣೆ ಸುಲಭಪಿಟಿಐ ನವದೆಹಲಿ
ನೌಕರರ ಭವಿಷ್ಯ ನಿಧಿಯ ಹಣವನ್ನು ಬ್ಯಾಂಕ್ ಖಾತೆಗೆ ಸುಲಭವಾಗಿ ವರ್ಗಾಯಿಸಲು ಅನುಕೂಲವಾಗುವಂತೆ ಹೊಸ ಆ್ಯಪ್‌ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ. ಈ ಆ್ಯಪ್‌ನಲ್ಲಿ ಯುಪಿಐ ಮೂಲಕ ಪಿಎಫ್ ಹಣವನ್ನು ಸುಲಭವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಬಹುದು. ಸದ್ಯ ಇದರ ಪರೀಕ್ಷೆ ಹಾಗೂ ಸುಧಾರಣೆ ನಡೆಯುತ್ತಿದೆ. ಪ್ರಸ್ತುತ ಪಿಎಫ್ ಹಣವನ್ನು ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಪೋರ್ಟಲ್ ಅಥವಾ ಉಮಂಗ್ ಆ್ಯಪ್‌ನಲ್ಲಿ ನಿರ್ವಹಿಸಬಹುದಾಗಿದೆ. ಆ ಹಣವನ್ನು ಪಡೆಯಬೇಕಾದರೆ ಅದಕ್ಕೆ ಮೊದಲು ಅರ್ಜಿ ಸಲ್ಲಿಸಬೇಕು. ಇದು ಸುದೀರ್ಘ ಪ್ರಕ್ರಿಯೆಯಾಗಿದೆ. ಇದನ್ನು ಸರಳ ಹಾಗೂ ಕ್ಷಿಪ್ರಗೊಳಿಸಲು ಹೊಸ ಆ್ಯಪ್ ಪರಿಚಯಿಸಲಾಗುತ್ತಿದೆ. ಇದರಡಿ, ಲಿಂಕ್ ಆಗಿರುವ ಯುಪಿಐ ಪಿನ್ ಸಂಖ್ಯೆ ಬಳಸಿ ಲಭ್ಯ ಇರುವ ಪಿಎಫ್ ಮೊತ್ತವನ್ನು ಪರಿಶೀಲಿಸಬಹುದು ಹಾಗೂ ಅದನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.ಅನಾರೋಗ್ಯ, ಶಿಕ್ಷಣ, ಮದುವೆ, ಮನೆ ಖರೀದಿಯಂತಹ ಉದ್ದೇಶಗಳಿಗೆ ತುರ್ತಾಗಿ ಹಣ ಬೇಕಾದಲ್ಲಿ, ಯುಪಿಐ ಮೂಲಕ ಆದು ಬೇಡಿಕೆಯಿಟ್ಟ 3 ದಿನಗಳ ಒಳಗಾಗಿ ಬ್ಯಾಂಕ್‌ಗೆ ಜಮೆಯಾಗಲಿದೆ. ಇದರ ಮೊತ್ತವನ್ನು ಈಗಾಗಲೇ 1 ಲಕ್ಷ ರು.ನಿಂದ 5 ಲಕ್ಷ ರು.ಗೆ ಏರಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪಿಎಫ್‌ನ ನಿರ್ದಿಷ್ಟ ಮೊತ್ತವನ್ನು ಫ್ರೀಜ್ ಮಾಡಿ, ಉಳಿದದ್ದನ್ನು ಬ್ಯಾಂಕುಗಳ ಮೂಲಕ ಪಡೆಯಲು ಸಂಬಂಧಿಸಿದಂತೆ ಕಾರ್ಮಿಕ ಸಚಿವಾಲಯ ಕೆಲಸ ಮಾಡುತ್ತಿದೆ.
ಇಪಿಎಫ್‌ಒ ಅಭಿವೃದ್ಧಿಪಡಿಸಿರುವ ಈ ಆ್ಯಪ್‌ನ 100 ಖಾತೆಗಳನ್ನು ಪ್ರಸ್ತುತ ಪರೀಕ್ಷಿಸಿ, ಅಗತ್ಯ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಇದು ಏಪ್ರಿಲ್‌ನಲ್ಲಿ ಬಳಕೆಗೆ ಲಭ್ಯವಾಗಲಿದೆ.