ಆದಾಯ ಹೆಚ್ಚಳ ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದೊಂದಿಗೆ ಬಿಎಂಟಿಸಿ ಜಾರಿ ಮಾಡಿರುವ ಯುಪಿಐ ಆಧಾರಿತ ವ್ಯವಸ್ಥೆ ಬಳಸಿ ನಿಗಮಕ್ಕೆ ಸೇರಬೇಕಾದ ಹಣ ತಮ್ಮ ಖಾತೆಗೆ ವರ್ಗಾಯಿಸುತ್ತಿದ್ದ ಮೂವರು ನಿರ್ವಾಹಕರನ್ನು ನಿಗಮ ಅಮಾನತು ಮಾಡಿದೆ.
ಬೆಂಗಳೂರು : ಆದಾಯ ಹೆಚ್ಚಳ ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದೊಂದಿಗೆ ಬಿಎಂಟಿಸಿ ಜಾರಿ ಮಾಡಿರುವ ಯುಪಿಐ ಆಧಾರಿತ ವ್ಯವಸ್ಥೆ ಬಳಸಿ ನಿಗಮಕ್ಕೆ ಸೇರಬೇಕಾದ ಹಣ ತಮ್ಮ ಖಾತೆಗೆ ವರ್ಗಾಯಿಸುತ್ತಿದ್ದ ಮೂವರು ನಿರ್ವಾಹಕರನ್ನು ನಿಗಮ ಅಮಾನತು ಮಾಡಿದೆ.
ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದೊಂದಿಗೆ ಬಿಎಂಟಿಸಿ ಹಲವು ತಿಂಗಳಿನಿಂದ ಯುಪಿಐ ಆಧಾರಿತ ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಿದೆ. ಅದರಿಂದಾಗಿ ಪ್ರಯಾಣಿಕರು ನಗದು ಬದಲು ಯುಪಿಐ ಮೂಲಕ ಪ್ರಯಾಣ ದರ ಪಾವತಿಸುವ ಪ್ರಮಾಣ ಹೆಚ್ಚಾಗಿದೆ. ಆದರೆ, ಈ ಯುಪಿಐ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ನಿರ್ವಾಹಕರಾದ ಸುರೇಶ್, ಅಶ್ವಕ್ ಖಾನ್ ಮತ್ತು ಚಾಲಕ ಕಂ ನಿರ್ವಾಹಕ ಮಂಚೇಗೌಡ ಅವರು ಪ್ರಯಾಣಿಕರಿಗೆ ತಮ್ಮ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಅನ್ನು ನೀಡಿ ಪ್ರಯಾಣಿಕರು ಪಾವತಿಸುತ್ತಿದ್ದ ಪ್ರಯಾಣ ಶುಲ್ಕ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
1.04 ಲಕ್ಷ ರು. ವಂಚನೆ:
ಈ ಮೂವರು ಒಟ್ಟಾರೆ 1.04 ಲಕ್ಷ ರು.ಗಳನ್ನು ಬಿಎಂಟಿಸಿ ಬ್ಯಾಂಕ್ ಖಾತೆಗೆ ಹೋಗಬೇಕಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಅಕ್ರಮಕ್ಕೆ ಸಂಬಂಧಿಸಿ ಇದೀಗ ಮೂವರನ್ನೂ ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಜತೆಗೆ ಇಲಾಖಾ ವಿಚಾರಣೆಗೂ ಆದೇಶಿಸಲಾಗಿದೆ. ಇನ್ನು, ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬಿಎಂಟಿಸಿ ಬಸ್‌ಗಳಲ್ಲಿ ಡೈನಾಮಿಕ್ ಕ್ಯೂಆರ್ ವ್ಯವಸ್ಥೆ
ಯುಪಿಐ ವ್ಯವಸ್ಥೆ ದುರ್ಬಳಕೆ ತಡೆಗೆ ಬಿಎಂಟಿಸಿ ಬಸ್‌ಗಳಲ್ಲಿ ಡೈನಾಮಿಕ್ ಕ್ಯೂಆರ್ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ. ಅದರಂತೆ ಹಣ ಪಾವತಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಅದು ನೇರವಾಗಿ ಬಿಎಂಟಿಸಿಯ ಲಿಂಕ್‌ಗೆ ಹೋಗಲಿದ್ದು, ಅದರ ಮೂಲಕ ಪ್ರಯಾಣ ಪಾವತಿಸಬಹುದಾಗಿದೆ. ಅದರಿಂದಾಗಿ ಅಕ್ರಮ ತಡೆಯಬಹುದಾಗಿದ್ದು, ಈ ವ್ಯವಸ್ಥೆ ಜಾರಿಗೆ ನಿಗಮ ಮುಂದಾಗಿದೆ.


