ವನ್ಯಜೀವಿ ತಜ್ಞ ಗುಬ್ಬಿ ಪತ್ರಕ್ಕೆ ಸ್ಪಂದಿಸಿದ ಸರ್ಕಾರ

KannadaprabhaNewsNetwork | Published : Apr 16, 2025 12:40 AM

ಸಾರಾಂಶ

ವನ್ಯಜೀವಿ ತಜ್ಞ ಡಾ.ಸಂಜಯ್‌ ಗುಬ್ಬಿ ಬರೆದ ಪತ್ರಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರು ಕಳೆದ ಮಾ.24ರಂದು ಪತ್ರ ಬರೆದಿರುವುದು.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪರಿಸರ ಸೂಕ್ಷ್ಮ ವಲಯಗಳ (ಕೋ-ಸೆನ್ಸಿಟಿವ್‌ ಜೋನ್)‌ ಪರಿಮಿತಿಯಲ್ಲಿ ಬರುವ ಹಳ್ಳಿಗಳಿಗೆ ಗ್ರಾಮೀಣಾಭಿವೃದ್ಧಿ ಯೋಜನೆಗಳಡಿ ಆದ್ಯತೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಿಗೆ ವನ್ಯಜೀವಿ ತಜ್ಞ ಡಾ.ಸಂಜಯ್‌ ಗುಬ್ಬಿ ಪತ್ರಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸ್ಪಂದಿಸಿದೆ.

ಸ್ವಚ್ಛ ಭಾರತ್‌ ಮಿಷನ್(ಗ್ರಾ) ಯೋಜನೆಯಡಿ ಪರಿಸರ ಸೂಕ್ಷ್ಮ ವಲಯಗಳ (ಇಕೋ-ಸೆನ್ಸಿಟಿವ್‌ ಜೋನ್) ಪರಿಮಿತಿಯಲ್ಲಿ ಬರುವ ಗ್ರಾಮಗಳಿಗೆ ಶೌಚಾಲಯ ನಿರ್ಮಾಣ ಕುರಿತು ಅಗತ್ಯ ಕ್ರಮ ವಹಿಸುವಂತೆ ರಾಜ್ಯದ ಎಲ್ಲಾ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ವನ್ಯಜೀವಿ ತಜ್ಞ ಡಾ.ಸಂಜಯ್‌ ಗುಬ್ಬಿ ಪತ್ರಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕರು ಕಳೆದ ಮಾ.24ರಂದು ರಾಜ್ಯ ಎಲ್ಲಾ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಅಗತ್ಯ ಕ್ರಮಕ್ಕೆ ಕೋರಿದ್ದಾರೆ.

ಪತ್ರದಲ್ಲೇನಿದೆ?:

ಪರಿಸರ ಸೂಕ್ಷ್ಮ ವಲಯಗಳ (ಇಕೋ-ಸೆನ್ಸಿಟಿವಸ್‌ ಜೋನ್)‌ ಪರಿಮಿತಿಯಲ್ಲಿ ಬರುವ ಹಳ್ಳಿಗಳಿಗೆ ಗ್ರಾಮೀಣಾಭಿವೃದ್ಧಿ ಯೋಜನೆಗಳಡಿ ಶೌಚಾಲಯ ಸೌಲಭ್ಯ ಒದಗಿಸುವ ಕುರಿತು ಆದ್ಯತೆ ನೀಡುವಂತೆ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ ಖರ್ಗೆಗೆ ಕಳೆದ 2024 ರ ಜು.11 ಎಂದು ಪತ್ರ ಬರೆದು ಮನವಿ ಮಾಡಿದ್ದರು. ಅದರಂತೆ ಸದರಿ ವಿಷಯದ ಕುರಿತು ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಯೋಜನೆಯಡಿ ಪರಿಸರ ಸೂಕ್ಷ್ಮ ವಲಯಗಳ(ಇಕೋ-ಸೆನ್ಸಿಟಿವ್‌ ಜೋನ್)‌ ಪರಿಮಿತಿಯಲ್ಲಿ ಬರುವ ಗ್ರಾಮಗಳಿಗೆ ಶೌಚಾಲಯ ನಿರ್ಮಾಣ ಕುರಿತು ಕ್ರಮವಹಿಸುವಂತೆ ಪತ್ರದ ಮೂಲಕ ಕೋರಲಾಗಿದೆ.

ಮನವಿಯಲ್ಲೇನಿತ್ತು?:

ರಾಜ್ಯದ ರಾಷ್ಟ್ರೀಯ ಉದ್ಯಾನ,ಹುಲಿ ಯೋಜನಾ ಪ್ರದೇಶಗಳು, ವನ್ಯಜೀವಿ ಧಾಮಗಳ ಒಳಗಿನ ಹಾಗು ಸುತ್ತಲಿನ ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಪರಿಸರ ಸಂರಕ್ಷಣಾ ಕಾಯಿದೆ 1986 ರಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯದ 1.275 ಹಳ್ಳಿಗಳು ಮತ್ತು 13.19 ಚದರ ಕಿಮಿ (32,60,308 ಎಕರೆ) ಪ್ರದೇಶ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತವೆ. ಇದರೊಡನೆ 20 ವನ್ಯಜೀವಿ ಧಾಮಗಳ ಪರಿಸರ ಸೂಕ್ಷ್ಮ ವಲಯವನ್ನು ಗುರುತಿಸಿ ಅಧಿಸೂಚನೆ ಹೊರಡಿಸಿದರೆ ಪರಿಸರ ಸೂಕ್ಷ್ಮ ವಲಯಕ್ಕೆ ಬರುವ ಹಳ್ಳಿಗಳ ಸಂಖ್ಯೆ ಮತ್ತು ಪ್ರದೇಶ ವ್ಯಾಪ್ತಿ ಹೆಚ್ಚಾಗಲಿದೆ.

ಪರಿಸರ ಸೂಕ್ಷ್ಮ ವಲಯದ ಘೋಷಣೆ ಮುಖ್ಯ ಉದ್ದೇಶ ಕಾರ್ಖಾನೆಗಳು, ಗಣಿಗಾರಿಕೆ, ಜಲ್ಲು ಗಣಿಗಾರಿಕೆ, ಅನಿರ್ಬಂಧಿತ ಪ್ರವಾಸೋದ್ಯಮ ಇಂತರ ಚಟುವಟಿಕೆಗಳ ಪರಿಣಾಮಗಳಿಂದ ವನ್ಯಜೀವಿ ಆವಾದ ಸ್ಥಾನಗಳ ಮೇಲೆ ಆಗುವ ಒತ್ತಡವನ್ನು ತಡೆಯುವುದು. ಆದರೆ ಕೆಲ ಇತರೆ ನಿರ್ಬಂಧನೆಗಳಿಂದ ಸ್ಥಳೀಯ ಜನರು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅದರೊಡನೆ ಈ ಹಳ್ಳಿಗಳು ಕಾಡಿನ ಬದಿಯಲ್ಲೇ ಇರುವುದರಿಂದ ಇಲ್ಲಿ ಮಾನವ-ಸಂಘರ್ಷ ಕೂಡ ಹೆಚ್ಚಿರುತ್ತದೆ. ಮತ್ತು ವನ್ಯಜೀವಿ ಸಂರಕ್ಷಣೆಯ ಬೆಳೆಯನ್ನು ಸ್ಥಳೀಯ ಜನರ ಈ ಕಾರಣಗಳಿಂದ ಪರಿಸರ ಸೂಕ್ಷ್ಮ ವಲಯ ಮತ್ತು ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಿತ ಪ್ರದೇಶ, ವನ್ಯಜೀವಿ ಧಾಮಗಳ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜನರಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡುತ್ತಿದೆ.

ಹಾಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಜಾರಿಗೊಳಿಸುವ ಯೋಜನೆಗಳನ್ನ (ಉದಾ: ಶೌಚಾಲಯ ನಿರ್ಮಾಣ, ಬೀದಿ ನಾಯಿಗಳ ಸಂತಾನ ನಿಯಂತ್ರಣ, ಸಾವಯವ ಕೃಷಿ, ಕುಡಿಯುವ ನೀರಿನ ಯೋಜನೆ, ಸೋಲಾರ್‌ ವಿದ್ಯುಧೀಕರಣ, ಶಾಲೆಗಳು, ಕೆರೆಗಳ ಪುನರುಜ್ಜೀವನ) ಪರಿಸರ ಸೂಕ್ಷ್ಮ ಪ್ರದೇಶಗಳ ಅಡಿಯಲ್ಲಿ ಬರುವ ಹಳ್ಳಿಗೆಳಿಗೆ ಆದ್ಯತೆ ನೀಡಿದರೆ ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ಸೂಕ್ಷ್ಮ ವಲಯಗಳ ಬಗ್ಗೆ ಜನರಲ್ಲಿ ಸಕಾರಾತ್ಮಕ ಭಾವನೆಯನ್ನು ಮೂಡಿಸಲು ಸಹಾಯವಾಗುತ್ತದೆ ಮತ್ತು ಅರಣ್ಯ ಇಲಾಖೆಯ ಕಾರ್ಯ ಚಟುವಟಿಕೆಗಳಿಗೂ ಬೆಂಬಲ ನೀಡಿದಂತಾಗುತ್ತದೆ.

Share this article