ಸರ್ಕಾರದಿಂದ ಬ್ರ್ಯಾಂಡ್ ಉಡುಪಿ ಘನತೆಗೆ ಧಕ್ಕೆ ತರುವ ಯತ್ನ: ಯಶ್ಪಾಲ್ ಆಕ್ರೋಶ

KannadaprabhaNewsNetwork |  
Published : Jun 14, 2025, 02:37 AM IST
.ಯಶ್‌ಪಾಲ್‌ | Kannada Prabha

ಸಾರಾಂಶ

ಈ ಕಾರ್ಯಪಡೆ ರಚನೆಯ ನಿರ್ಧಾರದಿಂದ ಸರ್ಕಾರವೇ ತನ್ನ ಗೃಹ ಇಲಾಖೆಯ ವೈಫಲ್ಯವನ್ನು ಒಪ್ಪಿಕೊಂಡಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ ಕೇವಲ 3 ಜಿಲ್ಲೆಗಳಿಗೆ ಮಾತ್ರ ಈ ಕಾರ್ಯಪಡೆಯನ್ನು ರಚಿಸಿದ್ದು, ಇಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಪರೋಕ್ಷವಾಗಿ ದೇಶಕ್ಕೆ ಸಂದೇಶ ನೀಡಿದಂತಾಗಿದೆ ಎಂದು ಯಶ್ಪಾಲ್ ಸುವರ್ಣ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಸಂಘರ್ಷ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ಕಾರ್ಯ ಪಡೆಯ ವ್ಯಾಪ್ತಿಗೆ ಉಡುಪಿ ಜಿಲ್ಲೆಯನ್ನು ಸೇರ್ಪಡೆಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಉಡುಪಿ ಜಿಲ್ಲೆಯ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಆದರೆ ಈ ಕಾರ್ಯಪಡೆಯ ಮೂಲಕ ಉಡುಪಿ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.ಈ ಕಾರ್ಯಪಡೆ ರಚನೆಯ ನಿರ್ಧಾರದಿಂದ ಸರ್ಕಾರವೇ ತನ್ನ ಗೃಹ ಇಲಾಖೆಯ ವೈಫಲ್ಯವನ್ನು ಒಪ್ಪಿಕೊಂಡಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ ಕೇವಲ 3 ಜಿಲ್ಲೆಗಳಿಗೆ ಮಾತ್ರ ಈ ಕಾರ್ಯಪಡೆಯನ್ನು ರಚಿಸಿದ್ದು, ಇಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಪರೋಕ್ಷವಾಗಿ ದೇಶಕ್ಕೆ ಸಂದೇಶ ನೀಡಿದಂತಾಗಿದೆ ಎಂದವರು ಆರೋಪಿಸಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೋಮು ಸಂಘರ್ಷ ನಡೆದಿಲ್ಲ, ನೆರೆಯ ಜಿಲ್ಲೆಗಳಲ್ಲಿ ಕೋಮು ಸಂಘರ್ಷ ನಡೆದಾಗಲು, ಉಡುಪಿ ಜಿಲ್ಲೆಯ ಜನತೆ ಸಂಯಮ ಹಾಗೂ ರಾಷ್ಟ್ರೀಯವಾದಿ ಚಿಂತನೆಯ ಮೂಲಕ ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಿದೆ. ಈಗ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ಈ ಕಾರ್ಯಪಡೆಯನ್ನು ಉಡುಪಿ ಜಿಲ್ಲೆಯ ಜನತೆಯ ಮೇಲೆ ಹೇರುವ ಮೂಲಕ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ ಎಂದವರು ಟೀಕಿಸಿದ್ದಾರೆ.ರಾಜಕೀಯ ಪ್ರೇರಿತವಾದ ವಿಶೇಷ ಕಾರ್ಯಪಡೆಯ ರಚನೆಯ ನಿರ್ಧಾರದಿಂದ ಉಡುಪಿ ಜಿಲ್ಲೆಯನ್ನು ಕೋಮು ಹಿಂಸೆ ಪೀಡಿತ ಜಿಲ್ಲೆ ಎಂದು ರಾಷ್ಟ್ರಮಟ್ಟದಲ್ಲಿ ಬಿಂಬಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸುತ್ತಿದೆ. ಇದರಿಂದ ಜಿಲ್ಲೆಯ ಆರ್ಥಿಕ, ಶಿಕ್ಷಣ, ಪ್ರವಾಸೋದ್ಯಮ, ಧಾರ್ಮಿಕ ಕೇಂದ್ರಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಜಿಲ್ಲೆಗೆ ಉದ್ಯಮಿಗಳು, ಐಟಿ ಕಂಪೆನಿಗಳು ಹೂಡಿಕೆಗೆ ಹಿಂದೇಟು ಹಾಕಿ, ಇಲ್ಲಿನ ಜನರಿಗೆ ಉದ್ಯೋಗಾವಕಾಶಗಳು ತಪ್ಪಿ ಹೋಗಲಿವೆ ಎಂದ ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.ಮೊದಲು ಸರ್ಕಾರ ಕೋಮು ಸಂಘರ್ಷಕ್ಕೆ ಕಾರಣವಾಗಿರುವ ಕರಾವಳಿ ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ನಡೆಯುತ್ತಿರುವ ಗೋವುಗಳ ಕಳ್ಳತನವನ್ನು ತಡೆಯಲು ಗೋ ಹಂತಕರ ವಿರುದ್ಧ ಗೋವು ಕಳ್ಳತನ ನಿಗ್ರಹ ವಿಶೇಷ ಕಾರ್ಯಪಡೆಯನ್ನು ಆರಂಭಿಸಲಿ.ಸರ್ಕಾರ ವಿಶೇಷ ಕಾರ್ಯಪಡೆಯ ವ್ಯಾಪ್ತಿಯಿಂದ ಉಡುಪಿ ಜಿಲ್ಲೆಯನ್ನು ತಕ್ಷಣ ಕೈಬಿಡಬೇಕು ಹಾಗೂ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಅಭಿವೃದ್ದಿಯ ದೃಷ್ಟಿಯಿಂದ ವಿಶೇಷ ಕಾರ್ಯಪಡೆಯ ಔಚಿತ್ಯವನ್ನು ಪುನರ್ ವಿಮರ್ಶೆ ಮಾಡಿ ರದ್ದು ಮಾಡಬೇಕು. ಇಲ್ಲದಿದ್ದಲ್ಲಿ ಉಡುಪಿಯ ಪ್ರಜ್ಞಾವಂತ ನಾಗರಿಕರು ಜಿಲ್ಲೆಯ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಒಕ್ಕೊರಲಿನಿಂದ ವಿರೋಧಿಸಿ ಎಚ್ಚರಿಕೆ ನೀಡುವ ಸಂದರ್ಭ ಬರಲಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ