ಹೊಸಪೇಟೆ: ಜಿಲ್ಲೆಯಲ್ಲಿನ ಸಫಾಯಿ ಕರ್ಮಚಾರಿ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ಒದಗಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಮುನ್ನೆಲೆಗೆ ತರಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮ್ಯಾನುಯಲ್ ಸ್ಕ್ಯಾವೆಂಜರ್ ಕಾರ್ಮಿಕರಿಗೆ ಕಾಲಕಾಲಕ್ಕೆ ನಿರಂತರವಾಗಿ ಆರೋಗ್ಯ ತಪಾಸಣೆ ನಡೆಸಬೇಕು. ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಗ್ಲೌಸ್, ಬೂಟು ಇನ್ನಿತರೆ ಅತ್ಯಾಧುನಿಕ ಸುರಕ್ಷಿತ ಪರಿಕರಗಳನ್ನು ಒದಗಿಸಬೇಕು. ಈ ವೃತ್ತಿಯಲ್ಲಿರುವ ಕಾರ್ಮಿಕರನ್ನು ಗುರುತಿಸಿ ಸರ್ಕಾರದ ಯೋಜನೆಗಳು ಹಾಗೂ ಶೈಕ್ಷಣಿಕ ಸಾಲ, ಸೌಲಭ್ಯ ನೀಡುವ ಮೂಲಕ ಸಮಾಜದ ಮುನ್ನೆಲೆಗೆ ತರಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಇತ್ತೀಚೆಗೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಅನಧಿಕೃತವಾಗಿ ಕಾರ್ಮಿಕರ ಗುರುತಿನ ಚೀಟಿ ಬಳಸಿಕೊಂಡು ಅನಾಮಿಕ ವ್ಯಕ್ತಿಗಳು ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಾನೂನಾತ್ಮಕ ಅಪರಾಧ. ಕಾರ್ಮಿಕರಿಗೆ ವೈಯಕ್ತಿಕ ಸಮಸ್ಯೆಗಳಿದ್ದಲ್ಲಿ ಸ್ವಯಂ ನಿವೃತ್ತಿ ಪಡೆಯಬಹುದು. ತಮ್ಮ ಗುರುತಿನ ಚೀಟಿ ನೀಡಿ ಬೇರೊಬ್ಬರಿಗೆ ಕರ್ತವ್ಯಕ್ಕೆ ನಿಯೋಜಿಸುವಂತಿಲ್ಲ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಅಥವಾ ಮರುಕಳಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಸದಸ್ಯರೊಬ್ಬರು ಮಾತನಾಡಿ, ಜಿಲ್ಲೆಯಲ್ಲಿ 8 ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕಾರ್ಮಿಕರಿದ್ದು, ಕೆಲವರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಮಂಜೂರಾಗಿದೆ. ನಿವೇಶನ ಕೊರತೆಯಿಂದ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತ್ವರಿತವಾಗಿ ನಿವೇಶನ ಗುರುತಿಸಿ ಜಾಗ ಕಲ್ಪಿಸಿಕೊಟ್ಟಲ್ಲಿ ಮನೆ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಮಲಪನಗುಡಿ ಗ್ರಾಪಂ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಗುರುತಿಸಿ ಹಂಚಿಕೆ ಮಾಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಎಸ್ಪಿ ಎಸ್.ಜಾಹ್ನವಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ. ಕಾಳೆ ಇದ್ದರು.