ಕಂಬದ ಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಅಣ್ಣಯ್ಯರಿಂದ ನೋಟ್ ಬುಕ್ ಗಳ ವಿತರಣೆ
ಕನ್ನಡಪ್ರಭ ವಾರ್ತೆ, ತರೀಕೆರೆಬಡವರು ಮದ್ಯಮ ವರ್ಗದ ಮಕ್ಕಳು ಹಲವು ಸಮಸ್ಯೆಗಳೊಂದಿಗೆ ಸರ್ಕಾರಿ ಶಾಲೆಗೆ ಸೇರಿ ಅಲ್ಲಿ ವಿಧ್ಯಾಭ್ಯಾಸ ಪಡೆದು ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿ ಸಮಾಜದ ಆಸ್ತಿಯಾಗುತ್ತಾರೆ ಎಂದು ವರ್ಗಾವಣೆಗೊಂಡಿರುವ ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹೇಳಿದ್ದಾರೆ.
ಪಟ್ಟಣದ ಕಂಬದ ಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲೆ ಹಳೆಯ ವಿದ್ಯಾರ್ಥಿ ಅಣ್ಣಯ್ಯ ನೀಡಿದ ನೋಟ್ ಬುಕ್ ಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಖಾಸಗಿ ಶಾಲೆಗಳನ್ನು ನೋಡಿ ವಿದ್ಯಾರ್ಥಿಗಳು ಕೀಳರಿಮೆ ಬೆಳಸಿಕೊಳ್ಳಬಾರದು. ಸರ್ಕಾರಿ ಶಾಲೆಗಳಲ್ಲಿ ದೊರಯುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು. ತಾನು ಕಲಿತ ಶಾಲೆಗೆ ಏನಾದರೂ ಕೊಡಬೇಕು ಎಂಬ ಮನಸ್ಥಿತಿ ಪ್ರತಿಯೊಬ್ಬರೂ ಬೆಳಸಿಕೊಳ್ಳಬೇಕು ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಪರಶುರಾಮಪ್ಪ ಮಾತನಾಡಿ ಶಾಲೆಗಳು ಸಮಾಜದ ಪ್ರಮುಖ ಆಸ್ತಿ, ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆಗಳನ್ನು ಹೊಂದಿದ್ದಾರೆ. ಸಾರ್ವಜನಿಕರ ಸಹಕಾರ ಬೆಂಬಲವಿದ್ದರೆ, ಶಿಕ್ಷಕರ ಮನೋ ಸ್ಥೈರ್ಯ ಹೆಚ್ಚಾಗಲಿದೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್.ಅನಂತಪ್ಪ ಮಾತನಾಡಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಸೌಲಭ್ಯ ಗಳಿಗಾಗಿ ಅಜಿಂಪ್ರೇಂಜಿ 1500 ಕೋಟಿ ರು.ದಾನ ಮಾಡಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.ಸರ್ಕಾರಿ ನೌಕರ ಸಂಘದ ಕಾರ್ಯಾದ್ಯಕ್ಷ ಎಂ.ಬಿ.ರಾಮಚಂದ್ರಪ್ಪ ಮಾತನಾಡಿ ಪಟ್ಟಣದಲ್ಲಿ 2 ವರ್ಷಗಳ ಕಾಲ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಡಾ.ಕೆ.ಜೆ.ಕಾಂತರಾಜ್ ಜನಸಾಮಾನ್ಯರ ಒಡನಾಡಿಯಾಗಿದ್ದರು ಎಂದು ಹೇಳಿದರು.
ದಾನಿಗಳಾದ ಅಣ್ಣಯ್ಯ ಮಾತನಾಡಿ ಚಿಕ್ಕವಯಸ್ಸಿನಲ್ಲಿ ಬಡತನದ ಕಾರಣದಿಂದ ಶಿಕ್ಷಣ ಮುಂದುವರಿಸಲು ಸಾಧ್ಯ ವಾಗಿರಲಿಲ್ಲ, ಅದನ್ನು ಮನಗಂಡು ತಾವು ಓದಿದ ಶಾಲೆಗೆ ದಾನ ಮಾಡುವ ಮನಸ್ಥಿತಿಗೆ ಬರಲಾಯಿತು ಎಂದು ಹೇಳಿದರು.ವರ್ಗಾವಣೆಗೊಂಡ ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅದ್ಯಕ್ಷ ಧರಣೇಶ್, ಸಿ.ಆರ್.ಪಿ.ಶಿಲ್ಪಾ ಮಾತನಾಡಿದರು.
ಮಾನವ ಬಂಧುತ್ವ ವೇದಿಕೆ ಸಂಚಾಲಕ ಪರಶುರಾಮ್, ಉಪ ತಹಸೀಲ್ದಾರ್ ರೇವಣ್ಣ, ದಲಿತ ಮುಖಂಡರಾದ ರಾಜು, ಡಿ.ಎನ್.ಸುನೀಲ್, ರಾಮಚಂದ್ರ, ಶಾಲಾ ಶಿಕ್ಷಕರು ಇತರರಿದ್ದರು.23ಕೆಟಿಆರ್.ಕೆ.20ಃತರೀಕೆರೆ ಕಂಬದಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ದಾನಿಗಳಾದ ಅಣ್ಣಯ್ಯ ನೀಡಿದ ಉಚಿತ ನೋಟ್ ಬುಕ್ ಗಳನ್ನು ವರ್ಗಾವಣೆಗೊಂಡ ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ವಿತರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಪರಶುರಾಮಪ್ಪ ಇದ್ದರು.