ಸರ್ಕಾರಿ ಶಾಲಾ ಮಕ್ಕಳಿಗಿಲ್ಲ ಪಠ್ಯಪುಸ್ತಕ ಭಾಗ್ಯ!

KannadaprabhaNewsNetwork |  
Published : Jul 23, 2026, 01:30 AM IST
ಪೊಟೋ: 22ಜಿಪಿಟಿ01 | Kannada Prabha

ಸಾರಾಂಶ

ತಾಳಗುಪ್ಪ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡು ಎರಡು ತಿಂಗಳು ಕಳೆಯುತ್ತಾ ಬಂದರೂ ಸಾಗರ ತಾಲೂಕು ಭಾಗದ ಹಲವು ಶಾಲೆಯ 2 ರಿಂದ 9ನೇ ತರಗತಿವರೆಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ಪಠ್ಯ ಪುಸ್ತಕ ನೀಡಲು ಶಿಕ್ಷಣ ಇಲಾಖೆ ವಿಫಲವಾಗಿದೆ.

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡು ಎರಡು ತಿಂಗಳು ಕಳೆಯುತ್ತಾ ಬಂದರೂ ಸಾಗರ ತಾಲೂಕು ಭಾಗದ ಹಲವು ಶಾಲೆಯ 2 ರಿಂದ 9ನೇ ತರಗತಿವರೆಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ಪಠ್ಯ ಪುಸ್ತಕ ನೀಡಲು ಶಿಕ್ಷಣ ಇಲಾಖೆ ವಿಫಲವಾಗಿದೆ.

ಶಾಲಾ ಮಕ್ಕಳಿಗೆ ಹಲವು ಭಾಗ್ಯಗಳನ್ನು ನೀಡಿರುವ ರಾಜ್ಯ ಸರ್ಕಾರ ಕಳೆದ ಎರಡು ದಶಕಗಳಿಂದ ಯಾವ ಮಾನದಂಡವನ್ನೂ ಇಟ್ಟುಕೊಳ್ಳದೆ ಶಾಲಾ ಪ್ರಾರಂಭದ ದಿನದಂದೇ ಎಲ್ಲಾ ತರಗತಿಯ ಮಕ್ಕಳಿಗೂ ಉಚಿತ ಪಠ್ಯಪುಸ್ತಕವನ್ನು ಪೂರೈಸುತ್ತಿದೆ. ರಾಜ್ಯ ಪಠ್ಯ ಪುಸ್ತಕ ಸಂಘವು ಪಠ್ಯ ಪುಸ್ತಕ ವಿತರಿಸುವ ಹೊಣೆ ಹೊಂದಿದ್ದು , ಪ್ರತಿವರ್ಷವೂ ಒಂದಿಲ್ಲೊಂದು ತೊಡಕು ಮಾಡುತ್ತಿದೆ ಎಂಬ ಆಪಾದನೆ ಕೇಳಿಬರುತ್ತಿದೆ.

ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದ ಕಲಿಕೆ ಪ್ರಾರಂಭಗೊಂಡಿದೆ. ಹಲವು ಮಕ್ಕಳು ಮಾಧ್ಯಮವನ್ನು ಬದಲಿಸಿಕೊಂಡಿದ್ದಾರೆ. ಖಾಸಗಿ ಶಾಲೆಯಲ್ಲಿ ದಾಖಲೆಯಾಗಿದ್ದ ಮಕ್ಕಳೂ ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ. ಆದರೆ, ಶಾಲೆ ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಹೊಸ ದಾಖಲಾತಿ ಆದ ಶಾಲಾ ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ಕೈಸೇರಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ:

ಶಿಕ್ಷಣ ಇಲಾಖೆಯು ಕಳೆದ ವರ್ಷದ ದಾಖಲಾತಿಯನ್ನು ಅನುಸರಿಸಿ ಪಠ್ಯ ಪುಸ್ತಕ ಪೂರೈಸುವ ಕ್ರಮ ಹೊಂದಿದೆ ಎನ್ನಲಾಗಿದೆ. ಜಿಲ್ಲೆಯ ಶಾಲಾ ಮುಖ್ಯ ಶಿಕ್ಷಕರು ಶಾಲಾ ಪ್ರಾರಂಭದ ದಿನಗಳಲ್ಲಿಯೇ ತಮ್ಮ ಶಾಲೆಯಲ್ಲಿ ಹೊಸದಾಗಿ ದಾಖಲಾದ ಮಕ್ಕಳ ಅಂಕಿ ಅಂಶವನ್ನು ತಾಲೂಕು ಮಟ್ಟದ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಿ ಅಗತ್ಯ ಪಠ್ಯ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದರೂ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳದೆ ಹಳೆಯ ಪುಸ್ತಕಗಳನ್ನು ಸಂಗ್ರಹದ ಬುಕ್ ಬ್ಯಾಂಕಿನಿಂದ ಮಕ್ಕಳಿಗೆ ನೀಡಿ ಎಂಬ ಮೌಖಿಕ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ , ಮಕ್ಕಳ ಕೈಗೆ ಸಿಕ್ಕಿರುವ ಪುಸ್ತಕಗಳನ್ನು ಅವರು ನೀಡುವ ಮುನ್ನವೇ ಹರಿದು ಚಿಂದಿಯಾಗಿರುವುದು ಕಂಡು ಬಂದಿದೆ.

ಪ್ರಸ್ತುತ ಸಾಗರ ತಾಲೂಕಿನಲ್ಲಿ ಸರ್ಕಾರಿ ಶಾಲೆ 311, ಅನುದಾನ ಸಹಿತ 25 ಶಾಲೆ, ಅನುದಾನ ರಹಿತ 41 ಶಾಲೆ, 9 ಮೊರಾರ್ಜಿ,ಅಂಬೇಡ್ಕರ್ ವಸತಿ ಶಾಲೆಗಳು ಸೇರಿದಂತೆ ಒಟ್ಟು 386 ಶಾಲೆಗಳಿವೆ. ಈ ಶಾಲೆಗಳಲ್ಲಿ ಒಂದು ಮತ್ತು 10ನೇ ತರಗತಿಗಳಿಗೆ ಪುಸ್ತಕಗಳ ಕೊರತೆ ಇಲ್ಲ. 2ನೇ ತರಗತಿಗೆ 64,3ನೇ ತರಗತಿಗೆ 82, 4 ನೇ ತರಗತಿಗೆ 55, 5ನೇ ತರಗತಿಗೆ 58, 6ನೇ ತರಗತಿಗೆ 328, (ಇಂಗ್ಲಿಷ್ ಮೀಡಿಯಂ, 7ನೇ ತರಗತಿಗೆ 223 (ಇಂಗ್ಲಿಷ್ ಮೀಡಿಯಂ) 9ನೇ ತರಗತಿಗೆ ಪಠ್ಯ ಪುಸ್ತಕ ಕೊರತೆ ಇದೆ. ಸಾಗರ ಬಿಇಒ ರವರು ಡಿಡಿಪಿಐ ಕಚೇರಿಗೆ ಪುಸ್ತಕ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಿ, ಪೂರೈಕೆಗೆ ಕಾಯುತ್ತಿದ್ದಾರೆ ಎನ್ನಲಾಗಿದೆ.

---------------------ಕೋಟ್‌ಗಳು....

ಸರ್ಕಾರ ಗುಣಮಟ್ಟದ ಕಲಿಕೆಯನ್ನು ಸರ್ಕಾರಿ ಶಾಲೆಯಲ್ಲಿ ಕಲ್ಪಿಸಿದೆ. ಶಿಕ್ಷಕರ ಕೊರತೆ ಇದ್ದರೂ ಕರ್ತವ್ಯ ನಿರತ ಶಿಕ್ಷಕರು ಉತ್ತಮ ಪಾಠ ಪ್ರವಚನ ನೀಡುತ್ತಿದ್ದಾರೆ. ಖಾಸಗಿ ಶಾಲೆಯತ್ತ ಮುಖ ಮಾಡಿದ್ದ ಪೋಷಕರೂ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಆಸಕ್ತರಾಗಿದ್ದಾರೆ. ಆದರೆ ಅಧಿಕಾರಿಗಳ ನಡೆ ಖಾಸಗಿ ಶಾಲೆಯವರಿಗೆ ಅನೂಕೂಲ ಕಲ್ಪಿಸುವಂತಿದೆ.

-ಹೆಸರು ಹೇಳಲಿಚ್ಛಿಸದ ಪೋಷಕರು.

------------------------

ಜುಲೈ 21 ರಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿದ್ದು, ನೋಡಲ್ ಅಧಿಕಾರಿಗಳಿಂದ ಯಾವ್ಯವ ಶಾಲೆಗಳಲ್ಲಿ ಎಷ್ಟು ಮಕ್ಕಳಿಗೆ ಪುಸ್ತಕ ಕೊರತೆ ಇದೆ ಎಂಬುದನ್ನು ಖಚಿತಪಡಿಸಿಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

-ಮಂಜುನಾಥ ಡಿಡಿಪಿಐ ಶಿವಮೊಗ್ಗ ಜಿಲ್ಲಾ.

---------------------

ಶಾಲೆಗಳಲ್ಲಿನ ಹಿಂದಿನ ದಾಖಲಾತಿ ಅನುಸರಿಸಿ ಪಠ್ಯಪುಸ್ತಕ ಪೂರೈಕೆ ಆಗುತ್ತದೆ.ಈ ವರ್ಷ ಇಂಗ್ಲಿಷ್ ಮಾಧ್ಯಮ ಪ್ರಾರಂಭಗೊಂಡಿದ್ದರಿಂದ ದಾಖಲಾತಿ ಪ್ರಮಾಣ ಹೆಚ್ಚಿದೆ. ತಾಲೂಕಿನಲ್ಲಿ ಕೊರತೆ ಇರುವ ಪುಸ್ತಕಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಸರಬರಾಜು ಆಗುತ್ತದೆ.

-ಸದಾನಂದ ಸ್ವಾಮಿ. ಬಿಇಒ ಸಾಗರ.

-------------

ಪೊಟೋ: 22ಜಿಪಿಟಿ01

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಗ್ಮಾ ಟೆಕ್‌ಫೆಸ್ಟ್- ರಾಷ್ಟ್ರಮಟ್ಟದ ಎಐ ಹ್ಯಾಕಥಾನ್‌
ನೆಟ್ಟ ಗಿಡ ಸಂರಕ್ಷಿಸಿ, ಪೋಷಣೆಎಲ್ಲರ ಜವಾಬ್ದಾರಿ: ಸುಕನ್ಯಾ