ಕನ್ನಡಪ್ರಭ ವಾರ್ತೆ ರಾಮನಾಥಪುರ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಒಂದೊಂದು ದೊಡ್ಡದಾದ ಕನಸು ಹೊಂದಬೇಕು, ಆ ಕನಸನ್ನು ನನಸು ಮಾಡಲು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಶ್ರದ್ಧೆ ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಬೇಕೆಂದು ನಿವೃತ್ತ ಅಪರ ಅಬಕಾರಿ ಆಯುಕ್ತರಾದ ಎಚ್ ಪಿ ಈರಪ್ಪ ತಿಳಿಸಿದರು. ಹೋಬಳಿಯ ಹನ್ಯಾಳಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಮಕ್ಕಳ ಮನೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶ್ರೀ ಪ್ರಸನ್ನ ವೀರಭದ್ರೇಶ್ವರ ಸ್ವಾಮಿ ಚಾರಿಟಬಲ್ ಟ್ರಸ್ಟ್ ಕೇರಳಾಪುರ ವತಿಯಿಂದ ಸುಮಾರು 1 ಲಕ್ಷ ರು. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಬ್ಯಾಗ್‌ಗಳನ್ನು ವಿತರಿಸಿ ಮಾತನಾಡುತ್ತಾ, ಇದೇ ಮೊದಲ ಬಾರಿ ನಮ್ಮ ತಂದೆತಾಯಿ ಹೆಸರಿನಲ್ಲಿ 19 ವರ್ಷಗಳ ಹಿಂದೆ ನೀಡಿದ ಭೂಮಿಯಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ನನಗೆ ಮಾತನಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ. ವಿದ್ಯಾರ್ಥಿ ಜೀವನ ತುಂಬಾ ಅಮೂಲ್ಯವಾದದ್ದು. ಪ್ರತಿನಿತ್ಯ ವೃತ್ತ ಪತ್ರಿಕೆ ಓದುವ ಹವ್ಯಾಸ ಬೆಳಸಿಕೊಂಡು, ಗುರುಗಳು ಹೇಳಿಕೊಟ್ಟ ಪಾಠಪ್ರವಚನಗಳನ್ನು ಚನ್ನಾಗಿ ಅರ್ಥೈಸಿಕೊಂಡು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿ ಉದ್ಯೋಗ ಗಿಟ್ಟಿಸಿಕೊಂಡು ಬಾಳನ್ನು ಹಸನು ಮಾಡಿಕೊಳ್ಳಬೇಕು. ಹಾಗೆಯೇ ಓದಿದ ಶಾಲೆಗಳಿಗೆ, ಹುಟ್ಟೂರಿಗೆ ಕೈಯಲ್ಲಾದ ಕೊಡುಗೆಗಳನ್ನು ನೀಡುವುದರ ಮೂಲಕ ಋಣ ತೀರಿಸಬೇಕೆಂದು ವಿದ್ಯಾರ್ಥಿಗಳಿಗೆ ಹಿತ ವಚನ ಹೇಳಿದರು.ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಉಪನಿರ್ದೇಶಕರಾದ ಅಶೋಕ ಎಚ್ ಇ ಅವರು ಮಾತನಾಡಿ, ಹನ್ಯಾಳು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದ ಗ್ರಾಮ, ಈ ಗ್ರಾಮದಲ್ಲಿ ಹುಟ್ಟಿದ ಈರಪ್ಪ ನವರು ಕಷ್ಟ ಪಟ್ಟು ಓದಿ ದೊಡ್ಡ ಹುದ್ದೆಯನ್ನು ಅಲಂಕರಿಸಿ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ, ಈ ನಿಟ್ಟಿನಲ್ಲಿ ನಮ್ಮೂರಿನ ಸರ್ಕಾರಿ ಪ್ರೌಢಶಾಲೆ ನಿರ್ಮಾಣ ಮಾಡಲು ಹೆದ್ದಾರಿ ಪಕ್ಕದಲ್ಲಿರುವ ತಮ್ಮ ತೋಟವನ್ನೆ ದಾನ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ, ಪ್ರಸಕ್ತ ಸಾಲಿನ ಹನ್ಯಾಳು ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಗ್‌ಗಳನ್ನು ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು. ಈ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿ ವೇದಿಕೆಯು ಕೆಲಸ ಮಾಡುತ್ತಿದ್ದು ಉಭಯ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುತ್ತಿದೆ ಹಾಗೆಯೇ ಉಭಯ ಶಾಲೆಗಳ ಶಿಕ್ಷಕರು ಸಹ ಉತ್ತಮವಾಗಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದು ಗಮನಾರ್ಹ ಎಂದರು.
ಈ ಸಂದರ್ಭದಲ್ಲಿ ಈರಪ್ಪ ದಂಪತಿಗೆ, ಟ್ರಸ್ಟಿಗಳಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಕನ್ಯಾ ರಾಮಚಂದ್ರ ವಹಿಸಿದ್ದರು. ಟ್ರಸ್ಟಿಗಳಾದ ಪರಮೇಶ್ವರಪ್ಪ, ಸಂಗಮೇಶ್, ಸುಕನ್ಯಾ ಈರಪ್ಪ, ಚೈತನ್ಯ, ಹೆಮಲತಾ ಮಹಾದೇವ್, ಶಾಂತವೀರಯ್ಯ, ನಿವೃತ್ತ ಶಿಕ್ಷಕರಾದ ಲಕ್ಕೇಗೌಡ, ಹಿರಿಯ ವಿದ್ಯಾರ್ಥಿ ವೇದಿಕೆಯ ಸದಸ್ಯರಾದ ಪವನ್, ಗಿರೀಶ್, ಹನುಮೇಶ್, ಯಶು ಮತ್ತು ಮಕ್ಕಳ ಮನೆ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಫಲಾನುಭವಿಗಳಾದ ಮಕ್ಕಳು ಉಪಸ್ಥಿತರಿದ್ದರು.