- ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯಲ್ಲಿ ಸರ್ಕಾರಿ ಶಾಲೆ ನೂತನ ಕೊಠಡಿಗಳ ಉದ್ಘಾಟನೆ
ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸಿಸಿದ ಹಲವಾರು ವಿದ್ಯಾರ್ಥಿಗಳು ಇಂದು ದೇಶದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪೋಷಕರು ಕೀಳರಿಮೆ ತೊರೆದು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಉಪ್ಪಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಒದಗಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿ ಸಿದ್ದು ಆ ನಿಟ್ಟಿನಲ್ಲಿ ಶಾಲೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಒಗ್ಗಟ್ಟಾಗಿ ಮಕ್ಕಳನ್ನು ಕರೆತರುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.ಸರ್ವಜನಾಂಗದ ಶಾಂತಿಯ ತೋಟ ಎಂಬ ಸಂದೇಶ ಉಪ್ಪಳ್ಳಿ ಭಾಗಕ್ಕೆ ಬಹಳಷ್ಟು ಹೊಂದಿಕೊಳ್ಳಲಿದೆ. ಮಧ್ಯಮ ವರ್ಗದವರೇ ಹೆಚ್ಚಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಖಾಸಗೀ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ದಾಖಲಿಸ ಬೇಕು. ಜೊತೆಗೆ ಎಸ್‌ಡಿಎಂಸಿ ಸದಸ್ಯರೊಂದಿಗೆ ಚರ್ಚಿಸಿ ಆಂಗ್ಲ ಮಾಧ್ಯಮ ಶಿಕ್ಷಕರನ್ನು ನೇಮಿಸುವ ಗುರಿ ಹೊಂದಿದೆ ಎಂದು ಹೇಳಿದರು.
ನಗರಸಭಾ ಸದಸ್ಯ ಮುನೀರ್ ಮಾತನಾಡಿ, ಬಾಲ್ಯದಿಂದಲೇ ತಾವು ಸೇರಿದಂತೆ ಹಲವಾರು ಮಂದಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು. ಅಂದಿನಿಂದ ಇಂದಿನವರೆಗೂ ನೂತನ ಕಟ್ಟಡ ನಿರ್ಮಾಣವಾಗಿರಲಿಲ್ಲ. ಹಿಂದಿನ ಶಾಲೆ ಹಾಳಾಗಿ ದ್ದರ ಹಿನ್ನೆಲೆಯಲ್ಲಿ ನೂತನ ಕೊಠಡಿ ನಿರ್ಮಿಸಿ ಸರ್ಕಾರ ಮಕ್ಕಳಿಗೆ ಅನುಕೂಲ ಕಲ್ಪಿಸಿರುವುದು ಖುಷಿಯ ಸಂಗತಿ ಎಂದರು.
ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಶಾಲೆಗೆ ಶೌಚಾಲಯ ಅವಶ್ಯವಿರುವ ಹಿನ್ನೆಲೆಯಲ್ಲಿ 12.35 ಲಕ್ಷ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಖಲಂದರ್, ಶಾಲಾ ಎಸ್‌ಡಿಎಂಸಿ ಸದಸ್ಯ ಅಸೀಫ್, ಕಾಫಿ ಬೆಳೆಗಾರ ರಮೇಶ್ ಗೌಡ, ದಾನಿಗಳಾದ ಶಿವೇಗೌಡ, ಯುಸೂಫ್ ಹಾಜಿ, ಮುನೀರ್ ಭಾವ, ಖಲೀಂ ರಜ್ವಿ, ಹಳೇ ವಿದ್ಯಾರ್ಥಿಗಳಾದ ನಂದೀಶ್, ಸಹೀರ್ ಆಲಿ, ಜಮಾಲ್, ತನ್ವೀರ್, ಹರಿದಾಸ್, ಸುದೀಪ್, ಅನಿಲ್, ಕುಮಾರ್, ಶಾಲೆ ಮುಖ್ಯ ಶಿಕ್ಷಕ ಸೋಮಶೇಖರ್ ಹಾಜರಿದ್ದರು.
ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯ ಸರ್ಕಾರಿ ಶಾಲೆಯ ನೂತನ ಕೊಠಡಿಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.