- ಮಲೇಬೆನ್ನೂರಿನಲ್ಲಿ ದಾನಿಗಳಿಗೆ ಗೌರವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಶರಣ್ ಹೆಗಡೆ ಮನವಿ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಆದಾಯ ಸ್ವಲ್ಪ ಭಾಗ ಸಾಮಾಜಿಕ ಸೇವೆಗೆ ಮೀಸಲಿಟ್ಟ ಹಣದಲ್ಲಿ ಕಳೆದ ೫ ವರ್ಷಗಳಲ್ಲಿ ಹರಿಹರ ತಾಲೂಕಿನ ೧೫೩ ಶಾಲೆಗಳ ಮಕ್ಕಳಿಗೆ ನೋಟ್ ಬುಕ್, ಶೌಚಾಲಯ, ವಿಜ್ಞಾನ ಉಪಕರಣ, ಕ್ರೀಡಾ ಸಾಮಗ್ರಿ, ನಲಿ-ಕಲಿ ಪೀಠೋಪಕರಣ, ಬ್ಯಾಗುಗಳು, ವಿಶ್ರಾಂತಿ ಕೊಠಡಿಗಳಿಗೆ ಅನುದಾನ ನೀಡಿದ್ದಾರೆ. ಇದು ಬಡಮಕ್ಕಳ ಸಂತಸದ ಕಲಿಕೆಗೆ ಕಾರಣವಾಗಿದೆ ಎಂದು ಧೂಳೆಹೊಳೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಶರಣ್‌ಕುಮಾರ್ ಹೆಗಡೆ ಹೇಳಿದರು.ಪಟ್ಟಣದ ಮಾರುತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ ಜೋಯಸ್ ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ದೇಣಿಗೆ ನೀಡಿದ ದಾನಿಗಳಿಗೆ ಗೌರವಿಸುವ ವಿಶೇಷ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿದ್ಯಾಸಂಸ್ಥೆ ನಿರ್ದೇಶಕ ಎಂ.ಕೆ. ರಾಮಶೆಟ್ಟಿ ಮಾತನಾಡಿ, ೧೯೯೨ರಲ್ಲಿ ಆರಂಭವಾದ ಮಾರುತಿ ಶಾಲೆ ಇಲ್ಲಿಯವರೆಗೂ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಪೂರ್ಣಗೊಳಿಸಿ ಕೆಲವರು ಉನ್ನತ ಹುದ್ದೆಯಲ್ಲಿದ್ದಾರೆ. ಈ ಶಾಲೆಗೆ ದಾನ ಕೊಟ್ಟಿರುವ ವ್ಯಕ್ತಿಗಳ ವಿಶಾಲ ಮನೋಭಾವನೆ ಶ್ಲಾಘಿಸಿದರು. ಹಣ ಉಳ್ಳವರಿಗೆ ದಾನ ಮಾಡುವ ಮನಸ್ಸು ಇರುವುದಿಲ್ಲ. ಮನಸ್ಸು ಇದ್ದವರಲ್ಲಿ ಹಣ ಇರುವುದಿಲ್ಲ. ಈ ಎರಡೂ ಗುಣ ಹೊಂದಿರುವವರನ್ನು ಗುರುತಿಸಿ ಅವರಿಂದ ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿರುವ ಶರಣ್ ಕುಮಾರ್ ಹೆಗಡೆ ಗುಣ ಮೆಚ್ಚುವಂಥದು ಎಂದರು.
ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಡಿ. ಮುರುಳೀಧರ್ ರಾವ್, ದಾನಿಗಳಾದ ಸಂಸ್ಥೆಯ ನಿರ್ದೇಶಕ ಎಂ.ವಿ. ಗೋವಿಂದರಾಜ ಶೆಟ್ಟಿ, ಮಹಾವೀರ ಭೋಗಾರ್, ಶಿಕ್ಷಕ ಚಂದ್ರಶೇಖರ್, ವೈ.ಚಂದ್ರಕುಮಾರ್, ಶಿಕ್ಷಕ ಪಿ. ರಮೇಶ್ ಕೆ. ಭೀಮಪ್ಪ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಮಂಜು, ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಎಚ್.ಎಂ. ಸದಾನಂದ, ಮುಖ್ಯ ಶಿಕ್ಷಕ ಪರಮೇಶ್ವರಪ್ಪ, ನಾಗೇಂದ್ರಪ್ಪ ಶಿಕ್ಷಕರು, ಪೋಷಕರು ಹಾಜರಿದ್ದರು.
(ಕೋಟ್) ಪೋಷಕರು ಮತ್ತು ಶಿಕ್ಷಕರು ಒಂದೇ ರಥದ 2 ಚಕ್ರಗಳಂತೆ. ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ರೂಪಿಸುವುದು ಮುಖ್ಯ ಜವಾಬ್ದಾರಿಯಾಗಿದೆ.
- - -