ಬಸವರಾಜ ಸರೂರ ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ಶೈಕ್ಷಣಿಕ ಕ್ಷೇತ್ರದ ಅಭ್ಯುದಯಕ್ಕೆ ಒತ್ತು ನೀಡುವುದಾಗಿ ಎಲ್ಲ ಸರ್ಕಾರಗಳು ಹೇಳುತ್ತಾ ಬಂದಿವೆ. ಆದರೆ ತಾಲೂಕಿನ ಕೆಲವು ಸರ್ಕಾರಿ ಶಾಲೆಗಳಲ್ಲಿ ಇನ್ನೂ ಅನೇಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಬಡವರ ಮಕ್ಕಳಿಗೆ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಕಲಿಯಬೇಕಾದ ಅನಿವಾರ್ಯತೆ ಇಲ್ಲಿನ ವಿದ್ಯಾರ್ಥಿಗಳದ್ದಾಗಿದೆ. ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸೇರಿ ಒಟ್ಟು 210 ಶಾಲೆಗಳಿದ್ದು, 23,882 ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಅದರಲ್ಲಿ ಒಟ್ಟು 1,529 ಕೊಠಡಿಗಳಿದ್ದು, 966 ಕೊಠಡಿಗಳು ಉತ್ತಮವಾಗಿವೆ. 62 ಕೊಠಡಿಗಳು ಸಣ್ಣಪುಟ್ಟ ರಿಪೇರಿಯಾಗಬೇಕಾಗಿದ್ದು, 152 ಕೊಠಡಿಗಳು ಮೇಜರ್ ರಿಪೇರಿಯಾಗಬೇಕು. ಇನ್ನು ತಾಲೂಕಿನಲ್ಲಿ 181 ಕೊಠಡಿಗಳನ್ನು ಕೆಡವಬೇಕಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ 92 ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚುವರಿ ಬೇಡಿಕೆ ಇಡಲಾಗಿದೆ.ಶೌಚಾಲಯ ಅಗತ್ಯ: ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮುಖ್ಯವಾಗಿ ಶೌಚಾಲಯಗಳ ಅಗತ್ಯತೆ ಹೆಚ್ಚಾಗಿದೆ. ಬಾಲಕರ ಶಾಲೆಗಳಲ್ಲಿ 81 ದುರಸ್ತಿಯಲ್ಲಿದ್ದು, ಹೆಚ್ಚುವರಿಯಾಗಿ 58ಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಬಾಲಕಿಯರ ಶಾಲೆಯಲ್ಲಿ 89 ದುರಸ್ತಿಯಲ್ಲಿದ್ದು, 46 ಶೌಚಾಲಯಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.41 ಶಾಲೆಗಳಿಗೆ ಕಾಂಪೌಂಡ್‌ಗಳಿಲ್ಲ: ತಾಲೂಕಿನ ಒಟ್ಟು 210 ಶಾಲೆಗಳಲ್ಲಿ 166 ಶಾಲೆಗಳಿಗೆ ಕಾಂಪೌಂಡ್‌ಗಳಿದ್ದರೆ ಉಳಿದ 41 ಶಾಲೆಗಳಲ್ಲಿ ಕಾಂಪೌಂಡ್ ಇಲ್ಲದಾಗಿದೆ. ಹೀಗಾಗಿ ಶಾಲೆಗಳಲ್ಲಿ ಭದ್ರತೆಯ ಕೊರತೆ ನಡುವೆ ಮಕ್ಕಳು ಶಾಲೆ ಎದುರು ಆಟವಾಡಬೇಕಾಗಿದೆ.
ಪೀಠೋಪಕರಣ ಹೆಚ್ಚು ಬೇಕಾಗಿದೆ: ತಾಲೂಕಿನ ಅನೇಕ ಶಾಲೆಗಳಲ್ಲಿ ಪೀಠೋಪಕರಣ ಅಗತ್ಯ ಹೆಚ್ಚಾಗಿದೆ. ಸುಮಾರು 605 ಕುರ್ಚಿಗಳು ಹಾಗೂ 509 ಟೇಬಲ್ ಬೇಕಾಗಿದ್ದು, ಅವುಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕಾಗಿದೆ.ಕುಡಿಯುವ ನೀರು, ವಿದ್ಯುತ್ ಇಲ್ಲ: ತಾಲೂಕಿನ ಅನೇಕ ಶಾಲೆಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕದ ಸೌಲಭ್ಯವಿಲ್ಲದಾಗಿದೆ. ಶಾಲೆಗಳಲ್ಲಿ ನೀರು ಪೂರೈಕೆ ಮಾಡುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ನಳದ ಸಂಪರ್ಕ ಹಾಗೂ ನಗರ ಪ್ರದೇಶದಲ್ಲಿ ನಿರಂತರ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಆದರೆ ಕೆಲವೊಂದು ಶಾಲೆಗಳಲ್ಲಿ ನೀರಿಲ್ಲದೇ ಮಕ್ಕಳು ಪರದಾಡಬೇಕಾಗಿದೆ. ಶೌಚಾಲಯಕ್ಕೂ ಬಯಲು ಪ್ರದೇಶ ಆಶ್ರಯಿಸಬೇಕಾಗಿದೆ.
ಶಿಕ್ಷಕರ ಕೊರತೆ: ತಾಲೂಕಿನ ಕೆಲವೊಂದು ಶಾಲೆಗಳಲ್ಲಿ ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರಿಲ್ಲ. ತಾಲೂಕಿನ ಎಲ್ಲ ಶಾಲೆಗಳು ಸೇರಿದಂತೆ ಒಟ್ಟು 60 ಶಿಕ್ಷಕರ ಕೊರತೆಯಿದೆ. ಆದ್ದರಿಂದ ಶಾಸಕರು ಇದರ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಿ ಅಗತ್ಯವಿರುವ ಕಡೆಗಳಲ್ಲಿ ಶಿಕ್ಷಕರ ನಿಯೋಜನೆಗೆ ಕ್ರಮ ಜರುಗಿಸಬೇಕು. ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಅಗತ್ಯವಿರುವ ಕೊಠಡಿ, ಶೌಚಾಲಯ ಸೇರಿದಂತೆ ಪೀಠೋಪಕರಣಗಳ ಮಾಹಿತಿಯನ್ನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕೊಠಡಿಗಳು ಬೇಡಿಕೆಯಾಗಿದೆ. ಪ್ರತಿ ಶಾಲೆಯಲ್ಲಿಯೂ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಶೈಕ್ಷಣಿಕ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬೇರೆ ತಾಲೂಕಿಗೆ ಹೋಲಿಸಿದರೆ ನಮ್ಮ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಶಿಕ್ಷಕರ ಕೊರತೆಯಿದೆ. ಮೇ 30ರಂದು ಮುಖ್ಯ ಶಿಕ್ಷಕರ ಸಭೆ ಕರೆಯಲಾಗಿದೆ. ಶಿಕ್ಷಕರಿಗೆ ಕಂಪ್ಯೂಟರ್ ತರಬೇತಿ, ಕೌಶಲ್ಯ ಮತ್ತು ಸಾಮಾನ್ಯ ಜ್ಞಾನದ ತರಬೇತಿ ನೀಡಲಾಗುತ್ತಿದೆ ರಾಣಿಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಹೇಳಿದರು.