ಕನ್ನಡಪ್ರಭ ವಾರ್ತೆ ಬೆಂಗಳೂರು:
ಶುಕ್ರವಾರ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ಕೆಪಿಎಸ್ಸಿ ಅಕ್ರಮ ನೇಮಕಾತಿ ಮತ್ತು ಮಿತಿಮೀರಿದ ಭ್ರಷ್ಟಾಚಾರ ಕುರಿತು ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದರು.
35 ವರ್ಷ ಸೇವಾವಧಿ 20ಕ್ಕಿಳಿಸಿ:ಒಮ್ಮೆ ಒಬ್ಬರು ಸರ್ಕಾರಿ ಉದ್ಯೋಗಕ್ಕೆ ನೇಮಕವಾದರೆ ಅವರಿಗೆ 35 ವರ್ಷ ಸೇವಾವಧಿ ಇರುತ್ತದೆ. ಆದರೆ ಪ್ರತೀ ಕುಟುಂಬಕ್ಕೆ ತಲಾ ಒಂದು ಉದ್ಯೋಗ ಕಲ್ಪಿಸುವ ಉದ್ದೇಶದಿಂದ 35 ವರ್ಷದ ಸೇವಾವಧಿ ಬದಲಿಗೆ 15 ಅಥವಾ 20 ವರ್ಷಕ್ಕೆ ಇಳಿಸಬೇಕು. ಇಷ್ಟು ಮಿತಿ ಹಾಕುವ ಮೂಲಕ ಉದ್ಯೋಗಗಳನ್ನು ಎಲ್ಲರಿಗೂ ಕೊಡುವ ಪ್ರಯತ್ನ ಮಾಡಬಹುದು ಎಂದು ಅವರು ಹೇಳಿದರು.
ಯುವ ಜನರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಇಂತಹ ಯೋಚನೆ ಕಾರ್ಯರೂಪಕ್ಕೆ ಬಂದರೆ ಹೇಗೆ ಎಂದು ನಾನು ಆಲೋಚನೆ ಮಾಡುತ್ತಿದ್ದೇನೆ. ನನ್ನ ಪ್ರಕಾರ ಪ್ರತಿ ಮನೆಗೂ ಕನಿಷ್ಠ ಒಂದು ಸರ್ಕಾರಿ ಕೆಲಸವಾದರೂ ದೊರೆಯಬೇಕು. ನನ್ನ ಆಲೋಚನೆಯನ್ನು ಜನರ ಮುಂದೆ ಇರಿಸಿದ್ದೇನೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಲಿ. ನೀವೂ ಈ ಬಗ್ಗೆ ಚರ್ಚೆ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಅನೇಕ ಉದ್ಯೋಗ ವಂಚಿತ ಅಭ್ಯರ್ಥಿಗಳು ಸಚಿವರಲ್ಲಿ ದೂರುಗಳನ್ನು ಹೇಳಿಕೊಂಡರು. ಪರೀಕ್ಷಾ ವಿಧಾನ, ತಪ್ಪು ತಪ್ಪಾಗಿ ಮುದ್ರಣವಾಗುವ ಪ್ರಶ್ನೆ ಪತ್ರಿಕೆಗಳು, ಒಂಎಂಆರ್ ಶೀಟುಗಳ ತಿದ್ದುಪಡಿ ಸೇರಿ ಅನೇಕ ಅಕ್ರಮಗಳನ್ನು ಎಸಗಲಾಗಿದೆ. ನಮಗೆ ಈ ಸರ್ಕಾರದ ಮೇಲೆ ನಂಬಿಕೆಯೇ ಸತ್ತುಹೋಗಿದೆ. ನೋಟಿಫಿಕೇಶನ್ ಮಾಡುತ್ತಾರೆ, ಆದರೆ ಓದುವುದಕ್ಕೆ ಸಮಯವನ್ನೇ ಕೊಡುವುದಿಲ್ಲ. ಉತ್ತರ ಕರ್ನಾಟಕದಿಂದ ಬಂದು ಬೆಂಗಳೂರಿನಲ್ಲಿ ತಿಂಗಳಾನುಗಟ್ಟಲೆ ಕಷ್ಟಪಟ್ಟು ಓದುತ್ತಿದ್ದೇವೆ. ಪೀಜಿಗಳಿಗೆ ಹಣ ಕಟ್ಟಲಾಗಿದೆ ಸಂಕಷ್ಟದಲ್ಲಿದ್ದೇವೆ. ನಮ್ಮ ಜೊತೆ ಕೆಪಿಎಸ್ಸಿ ಚೆಲ್ಲಾಟ ಆಡುತ್ತಿದೆ ಎಂದು ಉತ್ತರ ಕರ್ನಾಟಕದ ಉದ್ಯೋಗಾಕಾಂಕ್ಷಿ ತಮ್ಮ ನೋವು ತೋಡಿಕೊಂಡರು.
ಕೆಪಿಎಸ್ಸಿ ಅಕ್ರಮದ ಕುರಿತು ನಾವೆಲ್ಲರೂ ಕೇವಲ ಈ ಚರ್ಚೆ ಮೂಲಕ ವಿರಮಿಸುವುದು ಬೇಡ. ಮುಂದಿನ ದಿನಗಳಲ್ಲಿ ಬಹುದೊಡ್ಡ ಹೋರಾಟಗಳನ್ನು ಸಂಘಟಿಸೋಣ. ನಿಮ್ಮ ಜತೆಗೆ ನಾನು ನಿಲ್ಲುತ್ತೇನೆ.
ನಮ್ಮಲ್ಲಿ ನಿರುದ್ಯೋಗ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸರ್ಕಾರಿ ಮಟ್ಟದಲ್ಲಿ ಸಮರ್ಥರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ. ಕರ್ನಾಟಕ ಲೋಕಸೇವಾ ಆಯೋಗ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಪಾರದರ್ಶಕ, ನ್ಯಾಯ ಸಮ್ಮತವಾಗಿ ಅರ್ಹರನ್ನು ಆಯ್ಕೆ ಮಾಡಬೇಕಾದ ಕೆಪಿಎಸ್ಸಿ ಭ್ರಷ್ಟಾಚಾರದ ಕೂಪವಾಗಿದೆ. ಹಣಕ್ಕಾಗಿ ಉದ್ಯೋಗವನ್ನು ಮಾರಿಕೊಳ್ಳಲಾಗುತ್ತಿದೆ. ಸಂಸ್ಥೆ ಅಧ್ಯಕ್ಷರು ಮತ್ತು ಸದಸ್ಯರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಂಸ್ಥೆಗೆ ಹೋಗುವ ಅಧಿಕಾರಿಗಳು ಕೂಡ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ಕಿಡಿಕಾರಿದರು.ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪಶುವೈದ್ಯ ಇಲಾಖೆ ನೇಮಕಾತಿ ಸೇರಿ ಅನೇಕ ನೇಮಕ ಪ್ರಕ್ರಿಯೆಗಳಲ್ಲಿ ಅಗಾಧವಾದ ಭ್ರಷ್ಟಾಚಾರ ನಡೆದಿದೆ. ಅಲ್ಲದೆ ಕೆಎಎಸ್ ಆಯ್ಕೆ ಪ್ರಕ್ರಿಯೆ ಭ್ರಷ್ಟಾಚಾರದ ಮಹಾಕೂಪವಾಗಿದೆ. ಇಲ್ಲಿ ಹಣದ ವ್ಯವಹಾರ ಸೇರಿ ಸ್ವಜನ ಪಕ್ಷಪಾತ, ಜಾತಿ ವ್ಯಾಮೋಹದಿಂದ ಅರ್ಹ ಅಭ್ಯರ್ಥಿಗಳಿಗೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.