ಕನ್ನಡಪ್ರಭ ವಾರ್ತೆ ಸಿದ್ದಾಪುರ
ಎಲ್ಲ ಮಹಿಳೆಯರ ಸಾಮಾಜಿಕ ಅರಿವನ್ನು ವಿಸ್ತಾರಗೊಳಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಸಂಜೀವಿನಿ ಒಕ್ಕೂಟಗಳ ಬಲವರ್ಧನೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಸಿದ್ದಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಹೇಳಿದರು.ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ವಿರಾಜಪೇಟೆ ಸಹಯೋಗದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಮಟ್ಟದ ಮಾದರಿ ಸಂಜೀವಿನಿ ಒಕ್ಕೂಟದ ಸದಸ್ಯರಿಗಾಗಿ ಮಂಗಳವಾರ ಆರಂಭವಾದ ಮೊದಲ ಹಂತದ ದೂರದೃಷ್ಟಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಸಿದ್ದಾಪುರ ಸಂಜೀವಿನಿ ಒಕ್ಕೂಟವನ್ನು ಮಾದರಿ ಒಕ್ಕೂಟವಾಗಿ ಗುರುತಿಸಲ್ಪಟ್ಟಿರುವುದು ಗ್ರಾಮ ಪಂಚಾಯಿತಿಗೂ ಹೆಮ್ಮೆಯ ಸಂಗತಿ ಎಂದ ಅವರು, ತರಬೇತಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಪಳನಿಸ್ವಾಮಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು.ಕೌಶಲ್ಯ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್ ಮಾತನಾಡಿ, ಅಕ್ಕ ಕೆಫೆಯಂತಹ ಸ್ವಾವಲಂಬಿ ಉದ್ಯಮ ಸಿದ್ದಾಪುರದಲ್ಲಿ ಒಕ್ಕೂಟ ನಿರ್ವಹಿಸುತ್ತಿರುವುದು ಸಂತೋಷದ ವಿಚಾರ. ತರಬೇತಿಗಳ ಸದುಪಯೋಗ ಪಡೆದುಕೊಂಡು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಿ ಎಂದರು.ಸಿದ್ದಾಪುರ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ತುಳಸಿ ಗಣಪತಿ ಅಧ್ಯಕ್ಷತೆ ವಹಿಸಿ, ಎಲ್ಲ ಸದಸ್ಯರ ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಹಕಾರ ಹಾಗೂ ಗ್ರಾಮ ಪಂಚಾಯಿತಿ ಪ್ರೋತ್ಸಾಹದಿಂದ ಒಕ್ಕೂಟ ಮುನ್ನಡೆಯುತ್ತಿದ್ದು, ಮಾದರಿ ಒಕ್ಕೂಟವಾಗಿರುವುದು ಹೆಮ್ಮೆಯ ಸಂಗತಿ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮೌನೇಶ ವಿಶ್ವಕರ್ಮ, ವಲಯ ವ್ಯವಸ್ಥಾಪಕಿ(ಕೌಶಲ್ಯ) ಪ್ರಮೀಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಡಗು ಡಿಆರ್‌ಪಿಗಳಾದ ನವೀನ, ಸುಜಾತಾ, ಸಿದ್ದಾಪುರ ಮಾದರಿ ಸಂಜೀವಿನಿ ಒಕ್ಕೂಟದ ಎಂಬಿಕೆ ಸುಮತಿ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಯಮುನಾ, ವಸಂತಿ, ಕೃಷಿ ಸಖಿ ಸೆಮೀರಾ, ಪಶುಸಖಿ ಜಮೀರಾ, ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರು, ಮುಂಚೂಣಿ ಸದಸ್ಯರು ಇದ್ದರು.