ಸರ್ಕಾರದಿಂದ ಭೂ ಗ್ಯಾರಂಟಿಗೂ ಚಾಲನೆ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

KannadaprabhaNewsNetwork |  
Published : May 20, 2025 1:07 AM ISTUpdated : May 20, 2025 11:06 AM IST
19ಎಚ್‌ಪಿಟಿ8- ಹೊಸಪೇಟೆಯಲ್ಲಿ ಸೋಮವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬೈಕ್‌ ರ್ಯಾಲಿ ನಡೆಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಜತೆಗೆ ಕಂದಾಯ ಇಲಾಖೆ ಸೇವೆಗಳಲ್ಲಿ ಸುಧಾರಣೆ ತರುವ ‘ಭೂ ಗ್ಯಾರಂಟಿ’ಗೂ ಚಾಲನೆ ನೀಡಿದೆ.  

 ಹೊಸಪೇಟೆ : ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಜತೆಗೆ ಕಂದಾಯ ಇಲಾಖೆ ಸೇವೆಗಳಲ್ಲಿ ಸುಧಾರಣೆ ತರುವ ‘ಭೂ ಗ್ಯಾರಂಟಿ’ಗೂ ಚಾಲನೆ ನೀಡಿದೆ. ನೂರಾರು ವರ್ಷಗಳ ಕಾಲ ವಾಸವಿದ್ದರೂ ಕಂದಾಯ ಗ್ರಾಮವಲ್ಲದ ಕಾರಣ ಅರ್ಹರಿಗೆ ಯಾವುದೇ ಭೂ ಆಧಾರವಿರಲಿಲ್ಲ. ಇದನ್ನು ಸರಿಪಡಿಸಿ ಅರ್ಹರಿಗೆ ಕಂದಾಯ ಗ್ರಾಮದ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸಮರ್ಪಣೆ ಸಂಕಲ್ಪ ಸಮಾವೇಶದ ನಿಮಿತ್ತ ನಗರದಲ್ಲಿ ಸೋಮವಾರ ಬೈಕ್ ರ‍್ಯಾಲಿಗೆ ಚಾಲನೆ ನೀಡಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ವಿಜಯನಗರ ಜಿಲ್ಲೆಯ ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಈ ಮೂಲಕ ಕಂದಾಯ ಇಲಾಖೆ ಹೊಸ ಅಧ್ಯಾಯವನ್ನು ಬರೆದು ಇತಿಹಾಸ ಪುಟಕ್ಕೆ ಸೇರಲಿದೆ. 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಸೇರಿದ ಕುಟುಂಬಗಳು ನೂರಾರು ವರ್ಷಗಳ ಕಾಲ ನೆಲೆ ನಿಂತು ವಾಸವಿದ್ದ ಸ್ಥಳವನ್ನು ಕಂದಾಯ ಗ್ರಾಮವಾಗಿ ಘೋಷಿಸಿರಲಿಲ್ಲ. ಈ ಹಿನ್ನೆಲೆ ಅವರು ವಾಸವಿದ್ದ ಜಾಗದ ಹಕ್ಕು ಅವರಿಗೆ ಲಭಿಸಿರಲಿಲ್ಲ. ಭೂ ಆಧಾರ ಹಾಗೂ ಸ್ವತ್ತಿನ ಮಾಲಿಕತ್ವ ಇಲ್ಲದೆ ಪರದಾಡುವಂತಾಗಿತ್ತು. 

ಈ ಎಲ್ಲ ಸಂಕಷ್ಟಗಳಿಗೆ ಸರ್ಕಾರ ಇತಿಶ್ರೀ ಹಾಡಿದೆ. ಕಂದಾಯ ವ್ಯಾಪ್ತಿಯಲ್ಲಿ ಸರ್ಕಾರ ಅಥವಾ ಖಾಸಗಿ ಜಾಗದಲ್ಲಿ 16 ವರ್ಷಗಳಿಗಿಂತಲೂ ಹೆಚ್ಚು ಕಾಲ ವಾಸವಿದ್ದರೆ, ಅಂತಹ ಸ್ಥಳಗಳಿಗೆ ಸ್ವತಃ ತಹಶೀಲ್ದಾರ್ ಭೇಟಿ ನೀಡಿ ಜಾಗವನ್ನು ಸಬ್ ರಿಜಿಸ್ಟಾರ್‌ನಲ್ಲಿ ಉಚಿತವಾಗಿ ದಾಖಲಿಸಿ ವಾಸವಾಗಿರುವರಿಗೆ ಹಕ್ಕುಪತ್ರ ನೀಡುತ್ತಾರೆ. ಇದಾದ ನಂತರ ಈ ಜಾಗದ ಮೇಲೆ ರಾಷ್ಟೀಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಆದರೆ ಮುಂದಿನ 15 ವರ್ಷದವರೆಗೆ ಈ ಜಾಗವನ್ನು ಮಾರಾಟ ಮಾಡಲು ಬರುವುದಿಲ್ಲ ಎಂದು ಅವರು ತಿಳಿಸಿದರು.

ಜನರ ಬದುಕು ಹಸನಾಗಿಸಲು ರಾಜಕಾರಣ:

ಜನರು ನಮಗೆ ನೀಡಿದ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಜನರ ಭಾವನೆ ಮೇಲೆ ರಾಜಕಾರಣ ಮಾಡುವ ಬದಲು, ಜನರ ಬದುಕು ಹಸನಾಗಿಸಲು ರಾಜಕಾರಣ ಮಾಡುತ್ತಿದ್ದೇವೆ. ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಸುಧಾರಣೆ ತರಲಾಗುತ್ತಿದೆ. ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಇಂದಿರಾ ಗಾಂಧಿ ಪುತ್ಥಳಿ ನಿರ್ಮಾಣ:

ಹೊಸಪೇಟೆ ನಗರಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭೇಟಿ ನೀಡಿ ಭಾಷಣ ಮಾಡಿದ ಇತಿಹಾಸವಿದೆ. ಈ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾಂಗಣದ ಪಶ್ಚಿಮ ಭಾಗದಲ್ಲಿ ಇಂದಿರಾ ಗಾಂಧಿಯವರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಇಂದಿರಾಗಾಂಧಿ ಪುತ್ಥಳಿ ಲೋಕಾರ್ಪಣೆ ಮಾಡಿದ ಬಳಿಕ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.‘ಗೃಹಲಕ್ಷ್ಮಿ ಹಣ ತಿಂಗಳು, ತಿಂಗಳು ಹಾಕ್ತೇವೆ ಎಂದಿಲ್ಲ’

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಹಣವನ್ನು ತಿಂಗಳು, ತಿಂಗಳು ಹಾಕ್ತೇವೆ ಎಂದು ಹೇಳಿಲ್ಲ, ಹಣ ಹಾಕ್ತೇವೆ ಅಷ್ಟೇ, ಸ್ವಲ್ಪ ವ್ಯತ್ಯಾಸವಾಗಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಇದೇ ವೇಳೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಳೆ ಅವಾಂತರಗಳನ್ನು ತಡೆಯಲು ಎರಡು ಸಾವಿರ ಕೋಟಿ ರು.ಗಳ ಯೋಜನೆ ರೂಪಿಸಲಾಗುತ್ತಿದೆ. ಹಣಕಾಸಿನ ನೆರವಿಗಾಗಿ ವಿಶ್ವಬ್ಯಾಂಕ್ ಸೇರಿ ಇತರ ಕಡೆಗಳಲ್ಲಿ ಮನವಿ ಮಾಡುತ್ತಿದ್ದೇವೆ. ಸಚಿವ ಕೃಷ್ಣ ಬೈರೇಗೌಡ ಸಾಲ ಹೊಂದಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು, ಚರಂಡಿ ವ್ಯವಸ್ಥೆಗೆ ಮುಕ್ತಿ ನೀಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.

PREV
Read more Articles on