ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ಸರ್ಕಾರ ಸೂಕ್ತ ಕ್ರಮ : ರಮಾನಾಥ ರೈ

KannadaprabhaNewsNetwork |  
Published : Oct 18, 2025, 02:02 AM ISTUpdated : Oct 18, 2025, 01:46 PM IST
Ramanath rai

ಸಾರಾಂಶ

ಕಾಂಗ್ರೆಸ್‌ ಸಾವರ್ಕರ್‌ ಪಕ್ಷ ಅಲ್ಲ, ಆರೆಸ್ಸೆಸ್‌ನ್ನು ನಿಷೇಧ ಮಾಡಿದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಪಕ್ಷ. ಪ್ರಿಯಾಂಕ್‌ ಖರ್ಗೆ ಅವರ ಮನವಿಯ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್‌ ಚಟುವಟಿಕೆ ನಿಷೇಧಿಸಬೇಕೆಂಬ ಸಚಿವ ಪ್ರಿಯಾಂಕ್‌ ಖರ್ಗೆ ನಿಲುವು ಸರಿಯಾಗಿಯೇ ಇದೆ. ಕಾಂಗ್ರೆಸ್‌ ಸಾವರ್ಕರ್‌ ಪಕ್ಷ ಅಲ್ಲ, ಆರೆಸ್ಸೆಸ್‌ನ್ನು ನಿಷೇಧ ಮಾಡಿದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಪಕ್ಷ. ಪ್ರಿಯಾಂಕ್‌ ಖರ್ಗೆ ಅವರ ಮನವಿಯ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಶಾಲಾ ಮಕ್ಕಳಲ್ಲಿ ವಿಷಬೀಜ ಬಿತ್ತುವ ಪ್ರಯತ್ನ ಆರೆಸ್ಸೆಸ್‌ನ ಇಂತಹ ಚಟುವಟಿಕೆಗಳ ಮೂಲಕ ಆಗುತ್ತಿದೆ. ನಿಷೇಧದ ಮಾತು ಬಂದಾಗ ನಾವು ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರ ಚಿಂತನೆಯ ಪರವಾಗಿದ್ದೇವೆ. ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಬೆದರಿಕೆಯೊಡ್ಡುವ ಕೆಲಸ ಖಂಡನೀಯ. ಆರೆಸ್ಸೆಸ್‌ನವರು ಇಂಥ ಕೃತ್ಯವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು. 

ತನಿಖೆಯಿಂದ ಆರೆಸ್ಸೆಸ್‌ ಬಣ್ಣ ಬಯಲು: ಇತ್ತೀಚಿನ ಸಮಾಜದಲ್ಲಿ ಮುಖ್ಯವಾಗಿ ಮತೀಯ ಸಾಮರಸ್ಯಕ್ಕೆ ಕುಂದುಂಟಾಗಿದ್ದರೆ ಅದಕ್ಕೆ ಆರೆಸ್ಸೆಸ್‌ ಕೂಡ ಕಾರಣ ಎಂದು ಆರೋಪಿಸಿದ ರಮಾನಾಥ ರೈ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ನಡೆದ ಎಲ್ಲ ಧರ್ಮಾಧಾರಿತ ಹತ್ಯೆಗಳ ತನಿಖೆಗೆ ಎಸ್‌ಐಟಿ ರಚನೆ ಮಾಡಬೇಕು. ಈ ಮೂಲಕ ಹತ್ಯೆ ಹಿಂದಿನ ಸೂತ್ರಧಾರರನ್ನು ಬಯಲಿಗೆಳೆಯುವ ಕೆಲಸ ಮಾಡಿದರೆ ಆರೆಸ್ಸೆಸ್‌ನ ಬಣ್ಣ ಬಯಲಾಗಲಿದೆ ಎಂದು ರಮಾನಾಥ ರೈ ಹೇಳಿದರು.

ಆರೆಸ್ಸೆಸ್‌ಗೆ ಹೆದರುವವರು ಪಕ್ಷದಲ್ಲಿ ಇರಬಾರದು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಸೈದ್ಧಾಂತಿಕ ನಿಲುವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್‌ ಚಟುವಟಿಕೆ ನಿಷೇಧದ ಕುರಿತಾಗಿ ಪ್ರಿಯಾಂಕ್‌ ಖರ್ಗೆ ಸಿಎಂಗೆ ಮನವಿ ಸಲ್ಲಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.

‘ಕಾಂಗ್ರೆಸಿಗರ ಮನೆಗಳಿಂದಲೇ ಆರೆಸ್ಸೆಸ್‌ಗೆ ಫಂಡಿಂಗ್‌ ಆಗುತ್ತಿದೆ’ ಎಂಬ ಬಿಜೆಪಿ ಎಂಎಲ್ಸಿ ರವಿಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ರೈ, ಕಾಂಗ್ರೆಸ್‌ನಲ್ಲಿ ದೊಡ್ಡ ಸಂಖ್ಯೆಯ ಕಾರ್ಯಕರ್ತರು, ನಾಯಕರು ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿದ್ದಾರೆ. ರವಿಕುಮಾರ್‌ ಅವರಿಗೆ ತಿಳುವಳಿಕೆ ಕೊರತೆ ಇದೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ ಮುಖಂಡರಾದ ಶಶಿಧರ ಹೆಗ್ಡೆ, ಎಂ.ಜಿ. ಹೆಗಡೆ, ಚಿತ್ತರಂಜನ್‌, ಅಪ್ಪಿ, ಪದ್ಮನಾಭ ಕೋಟ್ಯಾನ್‌, ಪದ್ಮಪ್ರಸಾದ್‌, ಬೇಬಿ ಕುಂದರ್‌ ಮತ್ತಿತರರಿದ್ದರು.

PREV
Read more Articles on

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ