ರಾಮನಗರ: ರೈತರಿಗೆ ಬರ ಪರಿಹಾರ ಹಾಗೂ ವಿಶೇಷ ಚೇತನರಿಗೆ ಮಾಸಾಶನ ಕೊಡಲು ಹಣ ಇಲ್ಲ. ಕಾಂಗ್ರೆಸ್ ಸರ್ಕಾರದ ಖಜಾನೆಯೂ ಖಾಲಿ ಆಗಿ ಹೋಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.
ಬರಗಾಲದಲ್ಲಿ ರೈತರು ಕಣ್ಣೀರಿಡುತ್ತಿದ್ದರೆ, ವೇತನ ಹೆಚ್ಚಳವಾಗದೆ, ಮಾಸಾಶನ ಸಿಗದೆ ಅಂಗವಿಕಲರ ಮನೆಗಳ ದೀಪ ಆರಿ ಹೋಗಿದೆ. ಆ ದೀಪಗಳನ್ನು ಬೆಳಗುವ ಯೋಗ್ಯತೆ ಇಲ್ಲದ ಮುಖ್ಯಮಂತ್ರಿಗಳು ದಸರಾದಲ್ಲಿ ದೀಪಾಲಂಕಾರ ಉದ್ಘಾಟಿಸಲು ಹೋಗಿದ್ದರು. 2 ಗಂಟೆ ವಿದ್ಯುತ್ ಕೊಡಲಾಗದಿದ್ದರೂ ಆಡಂಬರದ ದಸರಾ ಮಾಡಿಕೊಂಡು ದುಂದು ವೆಚ್ಚ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಸರ್ಕಾರ ಸಂಪೂರ್ಣದಿವಾಳಿ ಆಗಿದೆ ಅಂತ ಹಣಕಾಸು ಇಲಾಖೆಯೇ ಒಪ್ಪಿಕೊಂಡಿದೆ. ಆದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಣ ಇದೆ ಅಂತಾರೆ. ಹಾಗಾದರೆ ವಿಕಲಚೇತನರಿಗೆ ಹಣ ಬಿಡುಗಡೆ ಮಾಡಲಿ. 5 ತಿಂಗಳಿಂದ ವಿಶೇಷ ಚೇತನರಿಗೆ ಮಾಸಾಶನ ಕೊಡುತ್ತಿಲ್ಲ ಅಂದರೆ ಸರ್ಕಾರಕ್ಕೆ ನಾಚಿಕೆ ಆಗೋದಿಲ್ವಾ ಎಂದು ಕಿಡಿಕಾರಿದರು.ಈ ಹಿಂದೆ ಬರ ಬಂದಾಗ ರೈತರಿಗೆ 18 ರಿಂದ 40 ಸಾವಿರ ಪರಿಹಾರ ಕೊಟ್ಟಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರ 2500 ರುಪಾಯಿ ಪರಿಹಾರ ಘೋಷಿಸಿದೆ. ಕೇವಲ ಮೂರು ದಿನ ಕೂಲಿಗೆ ಹೋದರೆ ಆ ಹಣ ಸಂಪಾದಿಸಬಹುದು. ನಿಮ್ಮ ಯೋಗ್ಯತೆ ಇಷ್ಟೇ ಎಂದು ರೈತರೇ ಪರಿಹಾರ ಹಣದ ಜೊತೆಗೆ 100 ರುಪಾಯಿ ಸೇರಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವಾಪಸ್ ಕೊಡುತ್ತಿದ್ದಾರೆ.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಹೋರಾಟ ನಡೆಸುತ್ತಿದ್ದರು ವಿಶೇಷಚೇತನರನ್ನು ಕರೆದು ಮಾತನಾಡುವ ಸೌಜನ್ಯ ತೋರಿಸಿಲ್ಲ. ನಿಮ್ಮ ಬೇಡಿಕೆಗಳಲ್ಲಿ ಎಲ್ಲವನ್ನು ಅಲ್ಲದಿದ್ದರು ಕೆಲವನ್ನಾದರು ಈಡೇರಿಸಬಹುದಿತ್ತು. ಆದರೆ, ಇದು ಬಂಡೆ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ. ನೀವು ಪಾದಯಾತ್ರೆ ಮಾಡಿದರೆ ಸರ್ಕಾರಕ್ಕೆ ಶಾಪ ತಟ್ಟದೆ ಬಿಡಲ್ಲ. ನಿಮ್ಮ ಕಣ್ಣೀರಿಗೆ ಈ ಸರ್ಕಾರ ಭಸ್ಮವಾಗುತ್ತದೆ ಎಂದು ಎಚ್ಚರಿಸಿದರು.
ನಿಮ್ಮ ಹೋರಾಟಕ್ಕೆ ಸರ್ಕಾರ ಹೆದರಿದೆ :
ನವ ಕರ್ನಾಟಕ ಎಂಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಡಿ ಮೇಟಿ, ರಾಜ್ಯಾಧ್ಯಕ್ಷ ಫಕೀರ್ ಗೌಡ, ರಾಜ್ಯ ಸಂಚಾಲಕ ಅನಿಲ್ ಕೆ.ಗೌಡ , ಪದಾಧಿಕಾರಿಗಳಾದ ಯಶೋಧಾ, ನಾಗರಾಜು, ಗುರುಮಲ್ಲಮ್ಮ, ಬಿಜೆಪಿ ಮುಖಂಡರಾದ ಪ್ರಮೋದ್ , ಗೌತಮ್ ಗೌಡ, ಪ್ರಸಾದ್ ಗೌಡ, ಆನಂದಸ್ವಾಮಿ, ದೇವರಾಜು, ಮಂಜುನಾಥ್ ಮತ್ತಿತರರು ಹಾಜರಿದ್ದರು.
ಆಡಂಬರದ ದಸರಾ ಮಾಡುತ್ತಿರುವ ಸಿಎಂ ಡಿಕೆಶಿಗೆ ಆ ತಾಯಿ ಚಾಮುಂಡೇಶ್ವರಿ ಕ್ಷಮಿಸಲ್ಲ. ಒಂದೆಡೆ ವಿಶೇಷ ಚೇತನರಿಂದ ಕಣ್ಣೀರು ಹಾಕಿಸಿ, ಮತ್ತೊಂದೆಡೆ ಚಾಮುಂಡಿ ತಾಯಿಗೆ ಆರತಿ ಬೆಳಗಿದರೆ ಶ್ರೇಯಸ್ಸು ಸಿಗಲ್ಲ. ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವ ಹಣದಲ್ಲಿ ಕಾಲು ಭಾಗದಷ್ಟು ಕೊಟ್ಟಿದ್ದರೂ ವಿಕಲಚೇತನರ ಸಮಸ್ಯೆ ಬಗೆ ಹರಿಯುತ್ತಿತ್ತು. ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗೋದು ಸೂಕ್ತ.
16ಕೆಆರ್ ಎಂಎನ್ 3,4.ಜೆಪಿಜಿ
4.ವಿಪಕ್ಷ ನಾಯಕ ಆರ್.ಅಶೋಕ್ ಸತ್ಯಾಗ್ರಹ ನಿರತ ವಿಶೇಷ ಚೇತನರ ಕುಶಲೋಪರಿ ವಿಚಾರಿಸಿದರು.