ಚನ್ನಪಟ್ಟಣ: ಸರ್ಕಾರಿ ಕೆಲಸ ದೇವರ ಕೆಲಸ. ಕಷ್ಟದಲ್ಲಿರುವ ಜನ ಕಚೇರಿಗೆ ಬರುತ್ತಾರೆ. ಜನರಿಗೆ ನ್ಯಾಯ ದೊರಕಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗ ನಾಲ್ಕು ಆಧಾರಸ್ತಂಭಗಳಿವೆ. ಒಂದು ಚೇರಿಗೆ ನಾಲ್ಕು ಕಾಲಿದ್ದಂತೆ, ಶಾಸಕಾಂಗ ಮಾಡಿದ್ದನ್ನು ಕಾರ್ಯಾಂಗ ಕಾರ್ಯರೂಪಕ್ಕೆ ತರುತ್ತದೆ. ನಾವು - ನೀವು ತಪ್ಪು ಮಾಡಿದರೆ ಅದನ್ನು ಹುಡುಕಿ ಎಚ್ಚರಿಸುವುದು ಪತ್ರಿಕಾರಂಗದ ಕೆಲಸ, ನಮ್ಮ ತಪ್ಪುಗಳಿಗೆ ಎಚ್ಚರಿಕೆ ಗಂಟೆ ಕಟ್ಟುವುದು ನ್ಯಾಯಾಂಗ. ನಾವೆಲ್ಲ ಒಂದಾಗಿ ಜನಸೇವೆ ಮಾಡಬೇಕು ಎಂದರು.
ಏಳನೇ ವೇತನ ಜಾರಿ ನಮ್ಮ ಆರನೇ ಗ್ಯಾರಂಟಿ:ನೀವು ಯಾವ ರೀತಿ ಜನರ ಕೆಲಸ ಮಾಡುತ್ತೀರೋ, ಅದರ ಮೇಲೆ ಸರ್ಕಾರದ ಕೆಲಸ ತುಲನೆ ಮಾಡಲಾಗುತ್ತದೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆರನೇ ವೇತನ ಆಯೋಗದ ವರದಿ ಜಾರಿಗೆ ತಂದಿದ್ದು, ಇದೀಗ ಏಳನೇ ವೇತನ ಜಾರಿಗೆ ತರಲಾಗುತ್ತಿದೆ. ಇದು ನಿಮಗೆ ನೀಡಿದ ಆರನೇ ಗ್ಯಾರಂಟಿ ಎಂದರು.
೭ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮೂಲಕ ಒಟ್ಟು ೧೨ ಲಕ್ಷ ಕುಟುಂಬಗಳಿಗೆ ನ್ಯಾಯ ಒದಗಿಸಲಾಗಿದೆ. ಎನ್‌ಪಿಎಸ್, ಒಪಿಎಸ್ ಒಂದು ಇದೆ. ಇದರ ಕುರಿತು ಪರಿಶೀಲನೆಗೆ ತಂಡ ರಚಿಸಿ ಬೇರೆ ರಾಜ್ಯಗಳಿಗೆ ಕಳಿಸಲಾಗುವುದು. ದೇವರು ವರ ಅಥವಾ ಶಾಪ ಕೊಡುವುದಿಲ್ಲ ಅವಕಾಶ ಮಾತ್ರ ನೀಡುತ್ತಾನೆ. ಅದನ್ನು ಬಳಸಿಕೊಂಡು ಜನರ ಹೃದಯ ಗೆಲ್ಲುವ ಕೆಲಸ ಮಾಡಿ ಎಂದರು.