ತಿಂಗಳಾನುಗಟ್ಟಲೆ ಮುಂದುವರಿದ ಮಳೆ ಕೊರತೆ, ಒಣಗಿದ ಬೆಳೆಗಳು, ರೈತರ ಆಕ್ರೋಶ ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಕೊನೆಗೂ ಸರ್ಕಾರ ಮಣಿದಿದೆ.
ಜಿಲ್ಲೆಯ ರೈತರಿಗೆ ತಾತ್ಕಾಲಿಕ ನೆಮ್ಮದಿ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗತಿಂಗಳಾನುಗಟ್ಟಲೆ ಮುಂದುವರಿದ ಮಳೆ ಕೊರತೆ, ಒಣಗಿದ ಬೆಳೆಗಳು, ರೈತರ ಆಕ್ರೋಶ ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಗದಗ, ಮುಂಡರಗಿ ಹಾಗೂ ರೋಣ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕಾದ ಸಮೀಕ್ಷೆಗೆ ಮಂಗಳವಾರ ಅಸ್ತು ಎಂದಿರುವುದು ಜಿಲ್ಲೆಯ ರೈತರಿಗೆ ತಾತ್ಕಾಲಿಕ ನೆಮ್ಮದಿ ತಂದಿದೆ.
ಈ ಹಿಂದೆ ಎರಡು ಹಂತಗಳಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಿಸಿದಾಗಲೂ ಈ ಮೂರು ತಾಲೂಕುಗಳನ್ನು ಕೈಬಿಡಲಾಗಿತ್ತು. ಇದೇ ಕಾರಣಕ್ಕೆ ಜಿಲ್ಲೆಯಾದ್ಯಂತ ಸರ್ಕಾರದ ವಿರುದ್ಧ ಅಸಮಾಧಾನ ತೀವ್ರಗೊಂಡಿತ್ತು. ಗದಗ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವುದನ್ನು ತೀವ್ರವಾಗಿ ವಿರೋಧಿಸಿದ್ದ ಹಿರಿಯ ಶಾಸಕ ಎಚ್.ಕೆ. ಪಾಟೀಲ, ಮುಳಗುಂದದಲ್ಲಿ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಅ. 10ರೊಳಗೆ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಗಡುವು ನೀಡಿದ್ದರು. ಗದಗ ತಾಲೂಕಿನಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದ್ದು, ಬೆಳೆಗಳ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಅವರು ಸರ್ಕಾರದ ಗಮನ ಸೆಳೆದಿದ್ದರು.ಇದಕ್ಕೂ ಮುನ್ನ ಸೆ.1 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪುರ, ಗದಗ ತಾಲೂಕಿನ ಕುರ್ತಕೋಟಿ ಹಾಗೂ ಹುಲಕೋಟಿ ಭಾಗಗಳಲ್ಲಿ ಬರ ಪರಿಸ್ಥಿತಿ ಮತ್ತು ಬೆಳೆ ಹಾನಿಯನ್ನು ಖುದ್ದು ಪರಿಶೀಲಿಸಿದ್ದರು. ರೈತರು ಜಿಲ್ಲೆಯ ಬಾಕಿ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸುವಂತೆ ಮನವಿ ಮಾಡಿದ್ದರು. ಕೇಂದ್ರದ ಮಾರ್ಗಸೂಚಿ ಅನ್ವಯ ಪರಿಶೀಲಿಸಿ ಬರಪೀಡಿತ ತಾಲೂಕುಗಳ ಘೋಷಣೆ ಮಾಡುವುದಾಗಿ ಸಿಎಂ ಕೂಡಾ ಭರವಸೆ ನೀಡಿ ಹೋಗಿದ್ದರು, ಆದರೆ ಕನಿಷ್ಠ ಸಮೀಕ್ಷೆಗೂ ಪರಿಗಣಿಸಿರಲಿಲ್ಲ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಕೂಡ ಸೆ.21 ರಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಗದಗ, ರೋಣ ಹಾಗೂ ಮುಂಡರಗಿ ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಿ ರೈತರಿಗೆ ಪರಿಹಾರ ಮತ್ತು ಅಗತ್ಯ ನೆರವು ನೀಡಬೇಕು ಎಂದು ಮನವಿ ಮಾಡಿದ್ದರು. ರೈತರ ಹೋರಾಟ, ಎಚ್.ಕೆ. ಪಾಟೀಲರ ರಾಜೀನಾಮೆ ಎಚ್ಚರಿಕೆ, ಜಿಲ್ಲಾ ಉಸ್ತುವಾರಿ ಸಚಿವರ ಮನವಿಯ ಬೆನ್ನಲ್ಲೇ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
ಜೊತೆಗೆ ಮಂಗಳವಾರ ಆದೇಶ ಹೊರಡಿಸಿದ ಬರಪೀಡಿತ ತಾಲೂಕುಗಳ 3ನೇ ಪಟ್ಟಿಯಲ್ಲಿ ಜಿಲ್ಲೆಯ ನರಗುಂದ, ಲಕ್ಷ್ಮೇಶ್ವರ, ಶಿರಹಟ್ಟಿ ಈ ಮೂರು ತಾಲೂಕುಗಳು ಸ್ಥಾನ ಪಡೆದಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.