ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಗ್ರಾಮಭಾರತಿ ವಿದ್ಯಾ ಸಂಸ್ಥೆಯ ಸಾಹುಕಾರ್ ಎಸ್.ಸಿ.ಚಿಕ್ಕಣ್ಣಗೌಡ ಸಭಾಂಗಣದಲ್ಲಿ ಅತ್ತಿಗುಪ್ಪೆ ಸಾಹಿತ್ಯ ಬಳಗದ ದಶಮಾನೋತ್ಸವ, ದೀಪಾವಳಿ ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತ ಚಳವಳಿ, ಭಾಷಾ ಚಳುವಳಿ, ದಲಿತ ಚಳವಳಿ ಮುಂತಾದ ಪ್ರಗತಿಪರ ಚಳವಳಿಗಳು ಇಂದು ಬಹುತೇಕ ಹಿಡಿತದಲ್ಲಿರುವುದರಿಂದ ಹೋರಾಟಗಳು ಯಶಸ್ವಿಯಾಗುತ್ತಿಲ್ಲ. ಇಂದು ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಸಮಾಜದಲ್ಲಿ ಮಾತ್ರ ಯಾವುದೇ ಬದಲಾವಣೆಗಳೂ ಆಗುತ್ತಿಲ್ಲ ಎಂದು ವಿಷಾದಿಸಿದರು.ದೇಶದಲ್ಲಿಂದು ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದರೂ ಸಮಾಜಕ್ಕೆ ಮಾದರಿಯಾಗಬೇಕಾದವರ ಸಂಖ್ಯೆ ವಿರಳವಾಗಿದೆ. ಇದಕ್ಕೆ ಸಂಸ್ಕಾರ ರಹಿತ ಶಿಕ್ಷಣ ಇದಕ್ಕೆ ಮುಖ್ಯ ಕಾರಣ. ವಿದ್ಯಾವಂತ ಯುವಕರು ಸಾಮಾಜಿಕ ಸ್ಪಂದನೆಗಳನ್ನು ಮೈಗೂಡಿಸಿಕೊಳ್ಳದೆ ರಾಜಕಾರಣಿಗಳ ಹಿಂಬಾಲಕರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೌಢ್ಯ ಮತ್ತು ಪಾಪಪ್ರಜ್ಞೆಯಿಂದ ದೇವಾಲಯಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ವಚ್ಛವಾದ ಮನಸ್ಸುಳ್ಳವನು ತಾನಿರುವಲ್ಲಿಯೇ ದೇವರನ್ನು ಕಾಣುತ್ತಾನೆ. ಜ್ಞಾನ ನಮ್ಮಲ್ಲಿರುವ ಮೌಢ್ಯಗಳನ್ನು ನಾಶ ಮಾಡಬೇಕು. ಶಿಕ್ಷಕ ಸಮುದಾಯ ಕೇವಲ ಅಕ್ಷರಸ್ಥರನ್ನು ಸೃಷ್ಟಿ ಮಾಡದೆ ಸಮಾಜಕ್ಕೆ ಜ್ಞಾನಿಗಳನ್ನು ಸೃಷ್ಟಿಸಿಕೊಡಬೇಕು. ಜ್ಞಾನವಂತರನ್ನು ನಿರ್ಮಿಸಿ ಲೋಕಕ್ಕೆ ಅರ್ಪಣೆ ಮಾಡುವ ಶಕ್ತಿ ಅಧ್ಯಾಪಕನಿಗೆ ಮಾತ್ರ ಇದೆ ಎಂದರು.
ಕಾರ್ಯಕ್ರಮದಲ್ಲಿ ಶಿ.ಕುಮಾರಸ್ವಾಮಿ ರಚಿತ ಕೃಷ್ಣರಾಜಪೇಟೆ ತಾಲೂಕಿನ ಸ್ಥಳನಾಮಗಳು, ಬಲ್ಲೇನಹಳ್ಳಿ ಮಂಜುನಾಥ್ ವಿರಚಿತ ಕವನ ಸಂಕಲನ ಹುಡುಕಾಟದ ಹೆಜ್ಜೆಗಳು, ಪತ್ರಕರ್ತ ಮಾರೇನಹಳ್ಳಿ ಲೋಕೇಶ್ ಅವರ ಗೂಬೆಗುಡ್ಡ ಮತ್ತು ಇತರೆ ಕಥೆಗಳು, ನಾರಾಯಣಸ್ವಾಮಿ ಅವರ ಬಾವ-ಬಂಧುರ, ಕುಮಾರಿ ಬಿಂದುಶ್ರೀ ಅವರ ಕಾವ್ಯ ಲಹರಿ ಮತ್ತು ರಂಗನಾಥ್ ಕ್ಯಾತನಹಳ್ಳಿ ಅವರ ರಂಗನಂತರಂಗ ಕವನ ಸಂಕಲನಗಳನ್ನು ಡಾ.ಸುಜನಾ ಪ್ರತಿಷ್ಟಾನದ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ನಿವೃತ್ತ ಪ್ರಾಚಾರ್ಯ ಕಿಕ್ಕೇರಿ ಚಂದ್ರಮೋಹನ್ ಬಿಡುಗಡೆ ಮಾಡಿದರು. ಹುಣಸೂರಿನ ರಾಜ್ಯ ಸಂಪನ್ಮೂಲ ಶಿಕ್ಷಕ ಹೊನ್ನೇನಹಳ್ಳಿ ಎಚ್.ಸಿ.ಕುಮಾರ್ ಪುಸ್ತಕಗಳನ್ನು ಕುರಿತು ಮಾತನಾಡಿದರು.