₹5 ಸಾವಿರ ಕೋಟಿ ಕ್ರಿಯಾ ಯೋಜನೆಗೆ ರಾಜ್ಯಪಾಲರ ಅಂಕಿತ: ಶಾಸಕ ಡಾ.ಅಜಯ್‌

KannadaprabhaNewsNetwork |  
Published : Jul 26, 2025, 12:00 AM IST
ಫೋಟೋ- ಗವರ್ನರ್‌ 1 ಮತ್ತು ಗವರ್ನರ್‌ 2ಬೆಂಗಳೂರಿನಲ್ಲಿ ರಾಜ ಭವನಕ್ಕೆ ತೆರಳಿ ಕೆಕೆಆರ್‌ಡಿಬಿ ಅದ್ಯಕ್ಷರೂ ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್‌ ಧರ್ಮಸಿಂಗ್‌ ಅವರು ಮಂಡಳಿಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿರುವ ರಾಜ್ಯಪಾಲರನ್ನು ಕಂಡು ಕೃತಜ್ಞತೆ ಹೇಳಿ ಮಂಡಳಿಯ ಯೋಜನೆಗಳ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಿದರು. | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) 2025- 26 ನೇ ಸಾಲಿನ 5 ಸಾವಿರ ಕೋಟಿ ರು.ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಜು.24 ರಂದು ಅನುಮೋದನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) 2025- 26 ನೇ ಸಾಲಿನ 5 ಸಾವಿರ ಕೋಟಿ ರು.ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಜು.24 ರಂದು ಅನುಮೋದನೆ ನೀಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕರೂ ಆಗಿರುವ ಡಾ.ಅಜಯ್‌ ಧರ್ಮಸಿಂಗ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಳಿಯ ಕ್ರಿಯಾ ಯೋಜನೆಗೆ ಸಂಪೂರ್ಣ ಒಪ್ಪಿಗೆ ಸೂಚಿಸಿ ರಾಜಭವನಕ್ಕೆ ರಾಜಭವನಕ್ಕೆ ಸದರಿ ಕ್ರಿಯಾ ಯೋಜನೆ ಕಡತ ರವಾನಿಸಿದ್ದರು. ಇದೀಗ ರಾಜ್ಯಪಾಲರು ತ್ವರಿತವಾಗಿ ಅಂಕಿತ ಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಲ್ಯಾಣ ಭಾಗದಲ್ಲಿ ಮಂಡಳಿ ಇನ್ನೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

2023- 24ರ ಸಾಲಿನ ಕ್ರಿಯಾ ಯೋಜನೆಗೆ ರಾಜ್ಯಪಾಲರು ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿದ್ದರು. ಈ ಸಾಲಿನಲ್ಲಿ ಮಂಡಳಿಯ ಸಭೆ ಆ.29 ರಂದು ನಡೆಸಲಾಗಿತ್ತು. ಆದಾಗ್ಯೂ ಮಾ.31 ರೊಳಗಾಗಿ ಕೆಕೆಆರ್‌ಡಿಬಿಯಿಂದ 2009 ಕೋಟಿ ರು ವೆಚ್ಚದಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಹಲವು ರಂಗಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡು ಅನುಷ್ಠಾನ ಗೊಳಿಸಲಾಗಿತ್ತು ಎಂದರು.

2024- 25ನೇ ಸಾಲಿನಲ್ಲಿ ಜುಲೈ ತಿಂಗಳ 1 ರಂದೇ ಮಂಡಳಿಯ ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಿದಾಗ ಸದರಿ ಕ್ರಿಯಾ ಯೋಜನೆಗೆ ರಾಜ್ಯಪಾಲರು ಆಗಸ್ಟ್‌ ತಿಂಗಳಲ್ಲಿ ಅನುಮೋದನೆ ನೀಡಿದ್ದರು. ಈ ಬಾರಿ 2025- 26 ನೇ ಸಾಲಿನ ಮಂಡಳಿಯ ಸಭೆಯನ್ನು ಶಾಸಕರು, ಸಂಸದರು, ಮಂತ್ರಿಗಳು ಒಳಗೊಂಡೆತೆ ಮೇ ತಿಂಗಳ 10ರಂದೇ ನಡೆಸಿ ಸಿದ್ಧಪಡಿಸಿದ್ದ 5 ಸಾವಿರ ಕೋಟಿ ರುಪಾಯಿ ಕ್ರಿಯಾ ಯೋಜನೆಗೆ ರಾಜ್ಯಪಾಲ ಥಾವರಚಂಗ್‌ ಗೆಹ್ಲೋಟ್‌ ಜುಲೈ 3 ನೇ ವಾರದಲ್ಲೇ ಅನುಮೋದನೆ ನೀಡಿದ್ದಾರೆ ಎಂದಿದ್ದಾರೆ.

ಡಾ. ನಂಜುಂಡಪ್ಪ ವರದಿಯನ್ವಯವೇ ಸಿಡಿಐ ಸೂಚ್ಯಂಕ ಗುರುತಿಸಿ ಯೋಜನೆ ರೂಪಿಸಲಾಗುತ್ತಿದೆ. ಮೈಕ್ರೋ, ಮ್ಯಾಕ್ರೋ ಯೋಜನೆಯಡಿಯಲ್ಲಿನ ಅನುದಾನ ಹಂಚಿಕೆಯ ವಿವರಗಳಿರುವ ಕ್ರಿಯಾ ಯೋಜನೆಗೆ ರಾಜ್ಯಪಾಲರ ಅಂಕಿತ ದೊರಕಿದೆ. ಮೇ 10ರಂದು ಜರುಗಿದ ಕೆಕೆಆರ್‌ಡಿಬಿ ಮಂಡಳಿಯ ಸಭೆಯಲ್ಲಿನ ಚರ್ಚೆಗಳು, ನಿರ್ಣಯಗಳಂತೆ ಹಾಗೂ ಮಂಡಳಿಯ ನಿಯಮಗಳಂತೆ, 2025-- 26 ರ ಮೈಕ್ರೋ, ಮ್ಯಾಕ್ರೋ, ವಿವೇಚನೆ ಅನುದಾನ, ಆಡಳಿತಾತ್ಮಕ ವೆಚ್ಚ, ಎಲ್ಲಾ ಹಂತಗಳ ಕ್ರಿಯಾ ಯೋಜನೆ ಜನಸಂಖ್ಯೆಗೆ ಅನುಗುಣವಾಗಿಯೂ ಇದೆ ಹೇಳಿದ್ದಾರೆ.

ಮುಖ್ಯಮಂತ್ರಿ ಮಂಡಿಸಿರುವ ಆಯವ್ಯವಯದಲ್ಲಿನ ಮಿತಿಯಂತೆಯೇ 5 ಸಾವಿರ ಕೋಟಿ ರುಪಾಯಿಗಳಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಆರ್ಥಿಕ ಇಲಾಖೆ 5 ಸಾವಿರ ಕೋಟಿ ರುಪಾಯಿಗಳಿಗೆ ಕ್ರಿಯಾ ಯೋಜನೆ ತಯಾರಿಸಲು ಅನುಮತಿ ನೀಡಿತ್ತು. ಅದರಂತೆಯೇ ಮಂಡಳಿಯ ಕ್ರಿಯಾ ಯೋಜನೆಗೆ ಇದೀಗ ರಾಜ್ಯಪಾಲರಿಂದ ಅನುಮೋದನೆ ದೊರಕಿದೆ ಎಂದು ತಿಳಿಸಿದ್ದಾರೆ.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್