ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಬಿಜೆಪಿ ವಕ್ತಾರರಂತೆ ರಾಜ್ಯಪಾಲರು ಕೆಲಸ : ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

KannadaprabhaNewsNetwork |  
Published : Feb 08, 2025, 12:32 AM ISTUpdated : Feb 08, 2025, 01:02 PM IST
n chaluvarayaswamy

ಸಾರಾಂಶ

ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಬಿಜೆಪಿ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ಸುಗ್ರೀವಾಜ್ಞೆ ವಿಚಾರದಲ್ಲಿ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಅವರು ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕು ಎಂದು ಸುಗ್ರೀವಾಜ್ಞೆಗೆ ಅನುಮತಿ ನೀಡದ ವಿಷಯವಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

 ಮಂಡ್ಯ : ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಬಿಜೆಪಿ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ಸುಗ್ರೀವಾಜ್ಞೆ ವಿಚಾರದಲ್ಲಿ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಅವರು ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕು ಎಂದು ಸುಗ್ರೀವಾಜ್ಞೆಗೆ ಅನುಮತಿ ನೀಡದ ವಿಷಯವಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ನಿರಾಕರಿಸಿರುವ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಎಲ್ಲಾ ನಿರ್ಧಾರಗಳನ್ನು ರಾಜ್ಯಪಾಲರು ನಿರಾಕರಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ತೋರಿದ ಆತುರವನ್ನು ಬೇರೆ ವಿಚಾರಗಳಲ್ಲಿ ಪ್ರದರ್ಶಿಸುತ್ತಿಲ್ಲ. ಬಿಜೆಪಿ- ಜೆಡಿಎಸ್ ನಾಯಕರ ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದರೂ ಸ್ಪಷ್ಟನೆ ಕೇಳಿ ವರ್ಷಾನುಗಟ್ಟಲೆಯಿಂದ ಬಾಕಿ ಉಳಿಸಿಕೊಂಡಿದ್ದಾರೆ. ಅದರ ಹಿಂದೆ ರಾಜಕೀಯ ಪ್ರಭಾವವಿರಬಹುದು. ಆದರೆ, ಮೈಕ್ರೋ ಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆ ವಿಚಾರದಲ್ಲಿ ಜನಹಿತ ಬಿಟ್ಟರೆ ಬೇರೇನೂ ಇಲ್ಲ. ಹಾಗಿದ್ದ ಮೇಲೆ ಅಂಕಿತ ಹಾಕದೆ ನಿರಾಕರಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕಾದ ರಾಜ್ಯಪಾಲರ ಈ ನಡೆ ಸರಿಯಲ್ಲ. ಅವರ ವರ್ತನೆ ಮುಂದುವರಿದರೆ ಮೈಕ್ರೋ ಫೈನಾನ್ಸ್‌ನವರ ಕಿರುಕುಳಕ್ಕೆ ಬೇಸತ್ತವರೆಲ್ಲರೂ ರಾಜಭವನದ ಎದುರು ಪ್ರತಿಭಟನೆ ಮಾಡುವ ಕಾಲ ಬರುತ್ತದೆ ಎಂದು ಎಚ್ಚರಿಸಿದರು.

ನ್ಯಾಯಾಲಯದ ತೀರ್ಪಿಗೆ ಸ್ವಾಗತ:

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ರಾಜಕೀಯ ಪ್ರೇರಿತ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಪ್ರಕರಣವನ್ನು ಲೋಕಾಯುಕ್ತ ತನಿಖೆ ಮಾಡುತ್ತಿದೆ. ಹೀಗಿರುವಾಗ ಸಿಬಿಐ ತನಿಖೆಗೆ ಅರ್ಜಿ ಕೊಟ್ಟರೆ ನಿಲ್ಲುತ್ತದೆಯೇ. ಅಲ್ಲದೆ, ಮುಡಾ ಪ್ರಕರಣದಲ್ಲಿ ಯಾವುದೇ ಸತ್ವವಿಲ್ಲ. ನ್ಯಾಯಾಲಯ ಅದನ್ನೆಲ್ಲಾ ಪರಿಶೀಲಿಸಿಯೇ ಸರಿಯಾದ ತೀರ್ಪು ನೀಡಿದೆ. ಇದರಿಂದ ನ್ಯಾಯಾಲಯದ ಮೇಲೆ ನಂಬಿಕೆ, ವಿಶ್ವಾಸವೂ ಹೆಚ್ಚಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಪಕ್ಷ ಸ್ಥಾನ ಉಳಿಸಿಕೊಳ್ಳಲು ಅಶೋಕ್ ಹೇಳಿಕೆ:

ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿರುವ ಬಗ್ಗೆ ಕೇಳಿದಾಗ, ಅಶೋಕ್ ನನಗೆ ಬಹಳ ಆತ್ಮೀಯರು. ಆದರೆ, ಆತ ಪಾಪದ ಮನುಷ್ಯ. ಅವರು ವಿಪಕ್ಷ ನಾಯಕರಾಗಿ ಕೆಲಸ ಮಾಡುತ್ತಿಲ್ಲ. ಪಕ್ಷ ಕೊಟ್ಟಿರುವ ಸ್ಥಾನ ಉಳಿಸಿಕೊಳ್ಳಲು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸದಿದ್ದರೆ ಅಶೋಕ್‌ರನ್ನೇ ಬದಲಾಯಿಸಿ ಬಿಡುತ್ತಾರೆ. ಹಾಗಾಗಿ ಅವರು ಮಾತನಾಡಿದ್ದಾರೆ. ಅದಕ್ಕೆಲ್ಲಾ ಪ್ರತಿಕ್ರಿಯೆ ನೀಡುವುದು ಬೇಡ ಎಂದಷ್ಟೇ ಹೇಳಿದರು.

ಎಚ್‌ಡಿಡಿ ಕುಟುಂಬ ಮಾತ್ರ ಪ್ರಾಮಾಣಿಕರು:

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕಡು ಭ್ರಷ್ಟ ಸರ್ಕಾರ ಎಂದಿರುವ ದೇವೇಗೌಡರ ಮಾತಿಗೆ ಪ್ರತಿಕ್ರಿಯಿಸಿ, ಹೌದಪ್ಪ, ಈ ರಾಜ್ಯದಲ್ಲಿ ದೇವೇಗೌಡರ ಕುಟುಂಬ ಬಿಟ್ಟರೆ ಬೇರೆ ಯಾರೂ ಪ್ರಾಮಾಣಿಕರಲ್ಲ. ಈಗ ಕಾಂಗ್ರೆಸ್‌ನವರು ಮಾತ್ರ ಭ್ರಷ್ಟರು ಎನ್ನುವವರು ಬಿಜೆಪಿಯವರನ್ನು ಒಪ್ಪುತ್ತಾರೆ ಅನ್ನಿಸುತ್ತೆ. ದೇವೇಗೌಡರಿಗೆ ಇನ್ನೂ ಹತ್ತಾರು ವರ್ಷ ಆಯಸ್ಸು ಸಿಗಲಿ. ಅವರು ನಮ್ಮನ್ನು ಹೀಗೆ ಟೀಕೆ ಮಾಡುತ್ತಿರಲಿ. ಅವರ ಕುಟುಂಬದ ಬಗ್ಗೆ ಮಾತನಾಡಲು ಬಹಳಷ್ಟಿದೆ. ಇಳಿ ವಯಸ್ಸಿನಲ್ಲಿ ದೇವೇಗೌಡರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ನಾನು ಅವರ ಜೊತೆಯಲ್ಲೇ ಇದ್ದು ರಾಜಕಾರಣ ಮಾಡಿದವನು. ನನ್ನ ಜೊತೆ ಇದ್ದಾಗ ಅವರ ಮಕ್ಕಳಿಗೆ ದೇವೇಗೌಡರು ಏನು ಬುದ್ದಿ ಹೇಳಿದ್ದರು ಎನ್ನುವುದು ಗೊತ್ತಿದೆ. ನಾನು ಹವಾಯ್ ಚಪ್ಲಿ, ಪಂಚೆ ಹಾಕ್ತಿದ್ದೆ. ನೀವು ಹಾಗೇ ಇದ್ದೀರಾ ಎಂದು ಕೇಳಿದ್ದರು. ದೇವೇಗೌಡರು ಅಪಾರ ಗೌರವ ಇದೆ ಎಂದು ಹೇಳಿದರು.

ನಾನು ಅರ್ಜಿ ಹಿಡಿದು ನಿಲ್ಲಲಾ..?:

ರಾಜ್ಯಕ್ಕೆ ಏನಾದರೂ ಅಭಿವೃದ್ಧಿ ಕೆಲಸ ಮಾಡುವಂತೆ ನಾನು ಕುಮಾರಸ್ವಾಮಿ ಅವರ ಮನೆ ಬಳಿ ನಿಲ್ಲಲು ಆಗುತ್ತಾ? ಆಂಧ್ರ, ಬಿಹಾರಕ್ಕೆ ಕೊಟ್ಟಿರೋದು ಮೋದಿಯೇ ಹೊರತು ಕುಮಾರಸ್ವಾಮಿ ಅಲ್ಲ. ಉಕ್ಕು ಮತ್ತು ಕೈಗಾರಿಕೆ ಸಚಿವರಾಗಿದ್ದುಕೊಂಡು ಕೈಗಾರಿಕೆಗಳ ಸ್ಥಾಪನೆಗೆ ಒತ್ತುಕೊಡಬೇಕಿರುವುದು ಅವರ ಕರ್ತವ್ಯ. ಈ ಜಿಲ್ಲೆ, ರಾಜ್ಯದ ಜನ ಗೆಲ್ಲಿಸಿರೋದು ಅಭಿವೃದ್ಧಿ ಮಾಡಿ ಎಂದು. ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್ ಸಹಕಾರದಿಂದ ಮೋದಿ ಸರ್ಕಾರ ಇದೆ. ಅವರು ಇಲ್ಲವೆಂದಾದರೆ ಮೋದಿ ಪ್ರಧಾನಿಯಾಗಿರುವುದಿಲ್ಲ. ಹಾಗಾಗಿ ಅವರ ರಾಜ್ಯಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.

ಶಾಸಕ ಪಿ.ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ