ಟ್ಯಾಕ್ಸಿ ಯೋಜನೆ ಬಾಕಿ ಅನುದಾನ ವಾಪಸ್‌ಗೆ ಸರ್ಕಾರ ಸೂಚನೆ

KannadaprabhaNewsNetwork |  
Published : Aug 15, 2024, 01:46 AM IST
೧೪ಕೆಎಂಎನ್‌ಡಿ-೧ಪ್ರವಾಸಿ ಟ್ಯಾಕ್ಸಿ ಯೋಜನೆಯ ಅನುದಾನವನ್ನು ವಾಪಸ್ ನೀಡದಂತೆ ಒತ್ತಾಯಿಸಿ ಕನ್ನಡ ಸೇನೆ-ಕರ್ನಾಟಕ ಸಂಘಟನೆ ಅಧ್ಯಕ್ಷ ಎಚ್.ಸಿ.ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

೨೦೦೯-೧೦ ರಿಂದ ೨೦೧೯-೨೦ರವರೆಗೆ ಪರಿಶಿಷ್ಟಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಅನುದಾನದಲ್ಲಿ ಬಾಲಿ ಉಳಿದಿರುವ ಅನುದಾನವನ್ನು ಕೆಟಿಐಎಲ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಜಮೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಎಸ್‌ಸಿಎಸ್‌ಪಿ, ಟಿಎಸ್‌ಪಿ ಮತ್ತು ಹಿಂದುಳಿದ ವರ್ಗಗಳ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಬಾಕಿ ಉಳಿದಿರುವ ಅನುದಾನವನ್ನು ಎರಡು ದಿನಗಳೊಳಗೆ ವಾಪಸ್ ಕಳುಹಿಸುವಂತೆ ಸೂಚಿಸಿರುವುದು ಯೋಜನೆಗೆ ಆಯ್ಕೆಯಾಗಿದ್ದ ೪೫ ಫಲಾನುಭವಿಗಳನ್ನು ಅತಂತ್ರ ಸ್ಥಿತಿಗೆ ದೂಡಿದೆ.

೨೦೦೯-೧೦ ರಿಂದ ೨೦೧೯-೨೦ರವರೆಗೆ ಪರಿಶಿಷ್ಟಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಅನುದಾನದಲ್ಲಿ ಬಾಲಿ ಉಳಿದಿರುವ ಅನುದಾನವನ್ನು ಕೆಟಿಐಎಲ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಜಮೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಪತ್ರ ಬರೆದಿದ್ದಾರೆ.

ಪ್ರವಾಸಿ ಟ್ಯಾಕ್ಸಿ ಪಡೆಯಲು ನಾಲ್ಕೈದು ವರ್ಷಗಳ ಹಿಂದೆಯೇ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ ೪೫ ಮಂದಿ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಚೆಕ್ ವಿತರಣೆಯಷ್ಟೇ ಬಾಕಿ ಇದೆ. ಈ ಸಂದರ್ಭದಲ್ಲಿ ಅನುದಾನ ವಾಪಸ್‌ಗೆ ಸರ್ಕಾರದಿಂದ ಸೂಚನೆ ಬಂದಿರುವುದು ಸ್ವಯಂ ಉದ್ಯೋಗ ಹೊಂದುವ ಯುವಕರ ಕನಸನ್ನು ಛಿದ್ರಗೊಳಿಸಿದಂತಾಗಿದೆ ಎಂದು ಕನ್ನಡ ಸೇನೆ-ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಹೇಳಿದ್ದಾರೆ.

ನಿರುದ್ಯೋಗ ಸಮಸ್ಯೆ ಬಗೆಹರಿಸಲು ಬಹಳ ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯಿಂದ ಆಯ್ದ ವ್ಯಕ್ತಿಗಳಿಗೆ ಎರಡು ಲಕ್ಷ ರು. ಸಬ್ಸಿಡಿ ಯೋಜನೆಯಡಿ ಟ್ಯಾಕ್ಸಿ ನೀಡಲಾಗುತ್ತಿದೆ. ಅದರಂತೆ ಜಿಲ್ಲೆಯ ಪ್ರವಾಸೋದ್ಯೋಮ ಇಲಾಖೆಗೆ ನೂರಾರು ಮಂದಿ ಅರ್ಜಿಯನ್ನು ಸಲ್ಲಿಸಿದ್ದರು. ಅದರಲ್ಲಿ ೪೫ ಜನರನ್ನು ಆಯ್ಕೆ ಮಾಡಲಾಗಿತ್ತು ಎಂದರು.

ಅರ್ಜಿಯ ಪ್ರಸ್ತುತ ಹಂತದ ಕುರಿತು ಮಾಹಿತಿ ಪಡೆಯಲು ಜಿಲ್ಲಾ ಪ್ರವಾಸೋದ್ಯಮಕ್ಕೆ ಭೇಟಿ ನೀಡಿದಾಗ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಜಿಲ್ಲೆಗೆ ಸರ್ಕಾರದಿಂದ ಮಂಜೂರಾಗಿರುವ ಗುರಿಗಳ ಪೈಕಿ ಇದುವರೆಗೆ ಗುರಿಗಳನ್ನು ಪೂರ್ಣಗೊಳಿಸದೇ ಬಾಕಿ ಇರುವ ಗುರಿಗಳ ಅನುದಾನವನ್ನು ಇಲಾಖೆಗೆ ಹಿಂದಿರುಗಿಸುವಂತೆ ಪತ್ರ ಬರೆದಿರುವುದು ತಿಳಿಯಿತು.

ಒಮ್ಮೆ ಅನುದಾನವನ್ನು ಹಿಂತಿರುಗಿಸಿದರೆ ಆಯ್ಕೆಯಾಗಿರುವ ಫಲಾನುಭವಿಗಳು ಪ್ರವಾಸಿ ಟ್ಯಾಕ್ಸಿಯನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಕೂಡಲೇ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಚೆಕ್ ವಿತರಿಸಬೇಕು. ಒಂದು ವೇಳೆ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಿದರೆ ಕನ್ನಡ ಸೇನೆ-ಕರ್ನಾಟಕ ಆಯ್ಕೆಯಾಗಿರುವ ಫಲಾನುಭವಿಗಳ ಜೊತೆಗೂಡಿ ಜೊತೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯೊಂದಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡ ಸೇನೆ ರಾಜ್ಯ ಸಂಚಾಲಕ ಜಿ ಮಹಾಂತಪ್ಪ, ಜಿಲ್ಲಾ ಕಾರ್ಯದರ್ಶಿ ಮಂಡಿ ಬೆಟ್ಟಳ್ಳಿ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೇಬಲ್ ಮಂಜು, ಮಂಡ್ಯ ತಾಲೂಕು ಅಧ್ಯಕ್ಷ ಸುಂಕನಹಳ್ಳಿ ಸತೀಶ್, ನಗರ ಅಧ್ಯಕ್ಷ ಶಿವಾಲಿ, ಸಂಘಟನಾ ಕಾರ್ಯದರ್ಶಿ ಪವಿತ್ರಾ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ, ಜಿಲ್ಲಾ ಸಂಚಾಲಕ ವೇಣುಗೋಪಾಲ್, ಕಾರ್ಯದರ್ಶಿ ಶಿವು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ