ರಜಾ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಸರ್ಕಾರ ಆದೇಶ: ಆಕ್ರೋಶ

KannadaprabhaNewsNetwork |  
Published : May 18, 2024, 12:33 AM IST
16ಕೆಎಂಎನ್ ಡಿ14 | Kannada Prabha

ಸಾರಾಂಶ

ಶಿಕ್ಷಕರು ಇಲಾಖಾ ಕಾರ್ಯದ ಹೊರತಾಗಿಯೂ ಸಿಕ್ಕಿರುವ ಮೇ ತಿಂಗಳ ರಜೆ ಅವಧಿಯಲ್ಲಿ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಸಮಯ ಮೀಸಲಿಡಲು ಯೋಜಿಸಿರುತ್ತಾರೆ. ಆದರೆ, ಇಲಾಖೆ ಅಧಿಕಾರಿಗಳು ದಿಢೀರ್ ಎಂದು ಆದೇಶ ಮಾಡಿದರೆ ವರ್ಷಪೂರ್ತಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಶಿಕ್ಷಕ ಸಮೂಹಕ್ಕೆ ಭಾರಿ ಹೊಡೆತ ಕೊಟ್ಟಂತಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಜಾ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಮಾಡಿರುವ ಆದೇಶವನ್ನು ಹಿಂಪಡೆಯಲು ಆಗ್ರಹಿಸಿ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪದಾಧಿಕಾರಿಗಳು, ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರೌಢಶಾಲಾ ಸಹ ಶಿಕ್ಷಕರ ಬೇಸಿಗೆ ರಜೆ ಅವಧಿಯಲ್ಲಿಯೂ ಶಿಕ್ಷಕರು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕ್ರಿಯೆ, ಚುನಾವಣಾ ಕರ್ತವ್ಯ, ಚೆಕ್ ಪೋಸ್ಟ್ ನಿರ್ವಹಣೆ, ಮಾಸ್ಟರ್ ಟ್ರೈನ್ರರ್, ಬಿ.ಎಲ್.ಓ ಯೋಜನೆ ಸೇರಿದಂತೆ ಹಲವು ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳು ಹಾಗೂ ತಂದೆತಾಯಿ ಮತ್ತು ಪತ್ನಿ, ಮಕ್ಕಳ ಶಸ್ತ್ರಚಿಕಿತ್ಸೆ, ಆರೋಗ್ಯ ತಪಾಸಣೆ ಮುಂತಾದುವುಗಳಿಗೆ ಸಮಯ ಮೀಸಲಿಟ್ಟಿರುತ್ತಾರೆ. ಆದರೆ, ಇಲಾಖೆ ಏಕಾಏಕಿಯಾಗಿ ಶಿಕ್ಷಕರಿಗೆ ಬೇಸಿಗೆ ರಜೆ ಕಡಿತಗೊಳಿಸಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾವು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯ ಫಲಿತಾಂಶ ಉತ್ತಮವಾಗಿ ಬರಬೇಕೆಂಬ ಉದ್ದೇಶದಿಂದ ಸಂಘಟಿತವಾಗಿ ಶೈಕ್ಷಣಿಕ ಅವಧಿಯಲ್ಲಿ ಪಾಠಬೋಧನೆ ಜೊತೆಗೆ ವಿಶೇಷ ತರಗತಿಗಳು, ಪರಿಹಾರ ಬೋಧನೆ, ಗುಂಪು ಅಧ್ಯಯನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗಮನ ನೀಡುವುದು, ಪಾಸಿಂಗ್ ಪ್ಯಾಕೇಜ್ ಅಭ್ಯಾಸ ಮಾಡಿಸಲಾಗುತ್ತಿದೆ ಎಂದರು.

ಇದರ ಜೊತೆಗೆ ಮಕ್ಕಳ ಮನೆಗೆ ಭೇಟಿ, ಪೊಷಕರ ಸಭೆಗಳು, ತಾಯಂದಿರ ಸಭೆಗಳು, ವಿಷಯಾವಾರು ತಜ್ಞರಿಂದ ತರಬೇತಿಗಳು, ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಗುಂಪು ಅಧ್ಯಯನ ಕೆಲವು ಶಾಲೆಗಳಲ್ಲಿ ರಾತ್ರಿ ವರ್ಗಗಳನ್ನು ತೆಗೆದುಕೊಳ್ಳುವಿಕೆ ಇಷ್ಟೆಲ್ಲಾ ಕಾರ್ಯಗಳನ್ನು ನಿರ್ವಹಿಸುವ ಶಿಕ್ಷಕರ ಮೇಲೆ ಗೌರವ, ಮಾನವೀಯತೆ ಇಲ್ಲ ಎಂಬುದು ಎದ್ದು ಕಾಣುತ್ತದೆ.

ಶಿಕ್ಷಕರು ಇಲಾಖಾ ಕಾರ್ಯದ ಹೊರತಾಗಿಯೂ ಸಿಕ್ಕಿರುವ ಮೇ ತಿಂಗಳ ರಜೆ ಅವಧಿಯಲ್ಲಿ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಸಮಯ ಮೀಸಲಿಡಲು ಯೋಜಿಸಿರುತ್ತಾರೆ. ಆದರೆ, ಇಲಾಖೆ ಅಧಿಕಾರಿಗಳು ದಿಢೀರ್ ಎಂದು ಆದೇಶ ಮಾಡಿದರೆ ವರ್ಷಪೂರ್ತಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಶಿಕ್ಷಕ ಸಮೂಹಕ್ಕೆ ಭಾರಿ ಹೊಡೆತ ಕೊಟ್ಟಂತಾಗುತ್ತದೆ.

ಕೂಡಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ಆದೇಶ ಹಿಂಪಡೆಯಬೇಕೆಂದು ಮನವಿ ಪತ್ರದಲ್ಲಿ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಈ ವೇಳೆ ಸಂಘದ ಕಾರ್ಯದರ್ಶಿ ವಿಜಿನಾರಾಯಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎನ್.ಕುಮಾರ್, ರಾಜ್ಯಪರಿಷತ್ ಸದಸ್ಯ ಧನಂಜಯ, ಉಪಾಧ್ಯಕ್ಷ ಸತೀಶ್, ನಾಗೇಶ್, ಎಂ.ಎಸ್.ಸುರೇಶ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!