ಕನ್ನಡಪ್ರಭ ವಾರ್ತೆ ಕುಂದಾಪುರ
ಉಡುಪಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಗಳಿಂದಾಗಿ ಸುಮಾರು ನೂರು ಕೋಟಿ ರು. ನಷ್ಟು ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ತಾತ್ಕಾಲಿಕ ಪರಿಹಾರಕ್ಕೆ ಹಣ ಭರಿಸಲು ಸರ್ಕಾರ ಸಿದ್ಧವಿದೆ. ಪರಿಹಾರ ಹಣದ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ ಸಿಗಬೇಕಿದ್ದ ಪಾಲನ್ನು ಕೊಡಿಸಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.ಕುಂದಾಪುರ ಹಾಗೂ ಬೈಂದೂರು ಕ್ಷೇತ್ರಗಳ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ನಗರದಲ್ಲಿ ಬುಧವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಸೋಮೇಶ್ವರ ಬೀಚ್ ಬಳಿಯಲ್ಲಿನ ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಖಾಸಗಿ ಜಾಗದವರ ಸ್ವಯಂಕೃತ ಅಪರಾಧದಿಂದ ಗುಡ್ಡ ಜರಿದಿದೆ. ಈಗಾಗಲೇ ಈ ಬಗ್ಗೆ ಕ್ರಮ ಕೈಗೊಂಡಿರುವ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.ಬಿಜೆಪಿಯ ಪಾದಯಾತ್ರೆ ಕವಲೊಡೆದಿದೆ:
ಬಿಜೆಪಿಗರು ಹಗರಣಗಳನ್ನಿಟ್ಟು ಪಾದಯಾತ್ರೆ ನಡೆಸಲು ಸಿದ್ದರಾಗಿದ್ದಾರೆ. ಹಗರಣಗಳ ವಿರುದ್ಧ ಮಾತನಾಡುವ ಭ್ರಷ್ಟ ಬಿಜೆಪಿ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಾದಯಾತ್ರೆಯ ಆರಂಭದ ಮೊದಲೇ ಕವಲೊಡೆದು ಹೋಗಿದೆ. ಜೆಡಿಎಸ್-ಬಿಜೆಪಿ ಮಧ್ಯೆ ಜಗಳ ಪ್ರಾರಂಭಗೊಂಡಿದ್ದು, ಈ ಮೈತ್ರಿ ಬಹಳ ದಿನ ಉಳಿಯೋದಿಲ್ಲ. ರಾಜಕಾರಣವನ್ನು ಚುನಾವಣಾ ಸಮಯದಲ್ಲಿ ಮಾಡಬೇಕು. ಆದರೆ ಸರ್ಕಾರ ರಚನೆಗೊಂಡ ಬಳಿಕ ರಾಜಕಾರಣ ಮಾಡುವುದು ಸರಿಯಲ್ಲ ಎಂದರುಜಿಲ್ಲಾ ಉಸ್ತುವಾರಿ ಸಚಿವರು ಅವರ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಬೇಕು. ಅಲ್ಲಿಯೂ ಮಳೆ ಇದೆ. ಇನ್ನೆರಡು ದಿನಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಾರೆ ಎಂದರು. ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳ ದರ್ಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಅವರು, ಜನಸ್ಪಂದನ ಸಭೆಯಲ್ಲಿ ನಡೆದ ಘಟನೆಗಳ ಕುರಿತು ವಿಡಿಯೋದಲ್ಲಿ ನೋಡಿದ್ದೇನೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತನಾಡುತ್ತೇನೆ ಎಂದರು.ಪರಶುರಾಮ ಥೀಂ ಪಾರ್ಕ್ ಭ್ರಷ್ಟಾಚಾರದ ಕುರಿತಂತೆ ಉತ್ತರಿಸಿದ ಅವರು, ನಮ್ಮ ಪಕ್ಷ ಹಿಂದೆಯೂ ಇದರ ಬಗ್ಗೆ ಪ್ರತಿಭಟನೆ ನಡೆಸಿದೆ. ಖುದ್ದು ನಾನೇ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಅಧಿವೇಶನದಲ್ಲಿಯೂ ಮಾತನಾಡಿರುವೆ. ಈ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತೋರಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ, ಮುಖಂಡರಾದ ಎಂ. ದಿನೇಶ್ ಹೆಗ್ಡೆ, ವಿಕಾಸ್ ಹೆಗ್ಡೆ, ಬ್ಲಾಕ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಶಂಕರ್ ಕುಂದರ್, ಅರವಿಂದ ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ರಾಜು ಪೂಜಾರಿ, ಮಲ್ಯಾಡಿ ಶಿವರಾಮ ಶೆಟ್ಟಿ, ವಿಶ್ವಾಸ್ ಅಮೀನ್, ಪ್ರಸನ್ನ ಕುಮಾರ್, ಉದಯ್ ಕುಮಾರ್ ಶೆಟ್ಟಿ, ಚಂದ್ರ ಅಮೀನ್, ರಘುರಾಮ ಶೆಟ್ಟಿ, ಕೃಷ್ಣ ಪೂಜಾರಿ, ಇಚ್ಚಿತಾರ್ಥ ಶೆಟ್ಟಿ, ದೇವಕಿ ಸಣ್ಣಯ್ಯ, ಅಶೋಕ ಪೂಜಾರಿ ಬೀಜಾಡಿ, ವಿನೋದ ಕ್ರಾಸ್ತಾ ಇದ್ದರು.