ಗುಡೆ ದೇವಸ್ಥಾನದ ಏತ ನೀರಾವರಿ ಯೋಜನಾ ಪ್ರದೇಶಕ್ಕೆ ಮಾಜಿ ಶಾಸಕರ ಭೇಟಿ
ಕನ್ನಡಪ್ರಭ ವಾರ್ತೆ ಕುಂದಾಪುರಜನಪರ ಉದ್ದೇಶಗಳನ್ನು ಇರಿಸಿಕೊಂಡು ಅನುಷ್ಠಾನವಾಗುವ ಸರ್ಕಾರಿ ಯೋಜನೆಗಳು ಯಾವುದೇ ಕಾರಣದಿಂದಲೂ ಅರ್ಧಕ್ಕೆ ನಿಲ್ಲಬಾರದು. ಯೋಜನೆಯ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಏನಾದರೂ ಗೊಂದಲಗಳಿದ್ದಲ್ಲಿ ಅದನ್ನು ಪರಿಹರಿಸುವ ಹಾಗೂ ಮನವರಿಕೆ ಮಾಡುವ ಕೆಲಸಗಳು ಇಲಾಖೆಯ ಅಧಿಕಾರಿಗಳಿಂದ ಆಗಬೇಕು. ಉದ್ದೇಶಿತ ಅಣೆಕಟ್ಟಿನಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುವ ನೀರನ್ನು ಮಾತ್ರ ಹೊರಕ್ಕೆ ಹಾಯಿಸುವ ಕೆಲಸವಾಗಬೇಕು ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.ಇಲ್ಲಿಗೆ ಸಮೀಪದ ಗುಡೆ ದೇವಸ್ಥಾನದ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿ, ಯೋಜನಾ ಪ್ರದೇಶವನ್ನು ವೀಕ್ಷಣೆ ಮಾಡಿ, ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಕೊಲ್ಲೂರು ಸೌಪರ್ಣಿಕ ನದಿಯಿಂದ 10 ರಿಂದ 15 ಟಿಎಂಸಿ ನೀರು, ಬಳಕೆಯಾಗದೆ ಸಮುದ್ರ ಸೇರುತ್ತಿದೆ. ಅರೆಹೊಳೆ ಅಸು-ಪಾಸಿನಲ್ಲಿ ಅಣೆಕಟ್ಟು ನಿರ್ಮಿಸಿ, ಪಂಪ್ ಮೂಲಕ ಮೇಲಕ್ಕೆ ಎತ್ತಿ, ಹೇರೂರು ಭಾಗದ ಕೆರೆಗಳಿಗೆ ಹಾಯಿಸಿದರೆ, ಇಲ್ಲಿಂದ ಹೆಚ್ಚುವರಿ ನೀರು ಎಡಮಾವಿನ ಹೊಳೆಗೆ ಬರುವುದರಿಂದ, ಅಣೆಕಟ್ಟಿನಲ್ಲಿ ನೀರಿನ ಹರಿವು ಹೆಚ್ಚಾಗಿ, ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚು ನೀರು ಸಂಗ್ರಹವಾಗುತ್ತದೆ ಎಂದು ಸ್ಥಳೀಯ ಪ್ರಮುಖರು ಹೇಳಿದ ಸಲಹೆಗೆ ಸ್ಪಂದಿಸಿದ ಮಾಜಿ ಶಾಸಕರು, ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಯ ಸಾಧಕ-ಬಾಧಕಗಳ ಅಭಿಪ್ರಾಯ ಪಡೆದುಕೊಂಡು, ಸಚಿವರೊಂದಿಗೆ ಮಾತನಾಡುವುದಾಗಿ ನೀಡಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಸುಕೇಶ್ ಶೆಟ್ಟಿ, ಗಣೇಶ್ ಆಚಾರ್, ಸತೀಶ್ ಶೆಟ್ಟಿ ಉಪ್ರಳ್ಳಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿಜಯ್‌ಕುಮಾರ ಶೆಟ್ಟಿ ಕಾಲ್ತೋಡು, ರಮೇಶ್ ಗಾಣಿಗ ಹೇರಂಜಾಲು, ಸುಭಾಶ್ ಶೆಟ್ಟಿ ಹಳಗೇರಿ, ಮಾಲಿಂಗ ಪೂಜಾರಿ ಹೇರಂಜಾಲು, ನರಸಿಂಹ ಹಳಗೇರಿ, ಮಾಚ ಪೂಜಾರಿ, ರಮೇಶ್ ದೇವಾಡಿಗ ಹಳಗೇರಿ ಇದ್ದರು.